ಬಾಲಿವುಡ್

ವರದಿಗಾರ ಜೊತೆ ವಾಗ್ವಾದ: ಪತ್ರಕರ್ತರಿಂದ ಬಾಲಿವುಡ್ 'ಕ್ವೀನ್' ಕಂಗನಾ ರಾನಾವತ್ ಗೆ ಬಹಿಷ್ಕಾರ!

Sumana Upadhyaya
ಮುಂಬೈ: ಬಿಡುಗಡೆಗೆ ಸಿದ್ದವಾಗಿರುವ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಿಟಿಐ ಸುದ್ದಿಸಂಸ್ಥೆಯ ವರದಿಗಾರರೊಬ್ಬರ ಜೊತೆ ವಾಗ್ವಾದ ನಡೆಸಿದರು ಎಂಬ ಕಾರಣಕ್ಕೆ ಬಾಲಿವುಡ್ ನಟಿ ಕಂಗನಾ ರಾನಾವತ್ ಅವರಿಗೆ ಬಹಿಷ್ಕಾರ ಹಾಕಲು ಭಾರತೀಯ ಮನರಂಜನಾ ಪತ್ರಕರ್ತರ ಗಿಲ್ಡ್ ನಿರ್ಧರಿಸಿದೆ.
ಘಟನೆ ಸಂಬಂಧ ನಟಿ ಕಂಗನಾ ಮತ್ತು ಚಿತ್ರದ ನಿರ್ಮಾಪಕಿ ಎಕ್ತಾ ಕಪೂರ್ ಸಾರ್ವಜನಿಕವಾಗಿ ಮಾಧ್ಯಮ ಪ್ರತಿನಿಧಿಗಳಲ್ಲಿ ಕ್ಷಮೆ ಕೇಳಬೇಕೆಂದು ಗಿಲ್ಡ್ ನ ಸದಸ್ಯರು ಒತ್ತಾಯಿಸಿದ್ದಾರೆ.
ಕಂಗನಾ ರಾನಾವತ್ ಅವರ ಮುಂದಿನ ಚಿತ್ರ ಜಡ್ಜ್ ಮೆಂಟಲ್ ಹೈ ಕ್ಯಾ ಚಿತ್ರದ ನಿರ್ಮಾಪಕಿ ಎಕ್ತಾ ಕಪೂರ್ ಕಳೆದ ಭಾನುವಾರ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳುವುದಾಗಿ ಒಪ್ಪಿಕೊಂಡಿದ್ದಾರೆ. 
ನಾವು ಪತ್ರಕರ್ತರ ಗಿಲ್ಡ್ ನಿಂದ ಕಂಗನಾ ರಾನಾವತ್ ಅವರಿಗೆ ಬಹಿಷ್ಕಾರ ಹಾಕಿ ಅವರ ಬಗ್ಗೆ ಯಾವುದೇ ಸುದ್ದಿ ಮಾಡದಂತೆ ಸಾಮೂಹಿಕವಾಗಿ ನಿರ್ಧರಿಸಿದ್ದೇವೆ ಎಂದು ಪತ್ರಕರ್ತರ ಗಿಲ್ಡ್ ನಿಯೋಗ ಎಕ್ತಾ ಕಪೂರ್ ಗೆ ಕಳುಹಿಸಿದ ಪತ್ರದಲ್ಲಿ ಹೇಳಿದ್ದಾರೆ. ಬಹಿಷ್ಕಾರದಿಂದ ಚಿತ್ರಕ್ಕಾಗಲಿ, ಚಿತ್ರದ ಬೇರೆ ಕಲಾವಿದರಿಗೆ ಯಾವುದೇ ತೊಂದರೆಯುಂಟುಮಾಡುವುದಿಲ್ಲ ಎಂದು ಹೇಳಿದ್ದಾರೆ. 
ಕಂಗನಾ ರಾನಾವತ್ ಕ್ಷಮೆ ಕೇಳುವವರೆಗೆ ಮುಂದಿನ ದಿನಗಳಲ್ಲಿ ಅವರ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕುವುದಾಗಿ ಪತ್ರಕರ್ತರು ಪಟ್ಟುಹಿಡಿದಿದ್ದಾರೆ.
ಅಷ್ಟಕ್ಕೂ ನಡೆದ ಘಟನೆಯೇನು: ಕಳೆದ ಭಾನುವಾರ ಮುಂಬೈಯಲ್ಲಿ ಎಕ್ತಾ ಕಪೂರ್ ನಿರ್ಮಾಣದ ಕಂಗನಾ ರಾನಾವತ್, ರಾಜ್ ಕುಮಾರ್ ರಾವ್ ನಟನೆಯ ಜಡ್ಜ್ ಮೆಂಟಲ್ ಹೈ ಕ್ಯಾ ಚಿತ್ರದ ಪ್ರಚಾರಕ್ಕಾಗಿ ಕಾರ್ಯಕ್ರಮ ಏರ್ಪಡಿಸಿದ್ದು, ಎಲ್ಲಾ ಮಾಧ್ಯಮದ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿತ್ತು. 
ಅದರಂತೆ ಪತ್ರಕರ್ತರು ಮತ್ತು ಚಿತ್ರತಂಡದ ಮಧ್ಯೆ ಮಾತು ನಡೆಯುತ್ತಿದ್ದಾಗ ಕಂಗನಾ ರಾನಾವತ್ ಪಿಟಿಐ ಪತ್ರಕರ್ತ ಜಸ್ಟಿನ್ ರಾವ್ ಅವರು ಪ್ರಶ್ನೆ ಕೇಳಲು ಮುಂದಾದರು. ಆಗ ಮಧ್ಯೆ ತಂಡೆದ ಕಂಗನಾ ತಮ್ಮ ಮಣಿಕರ್ಣಿಕಾ ಚಿತ್ರದ ಬಗ್ಗೆ ಋಣಾತ್ಮಕವಾಗಿ ಬರೆದಿದ್ದೀರಿ,ತಮಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸಿ ತಮ್ಮ ವ್ಯಾನಿಟಿ ವ್ಯಾನಿನಲ್ಲಿ ಮೂರು ಗಂಟೆ ಆಪ್ತರಾಗಿ ಕುಳಿತು ಮಾತನಾಡಿ ನಂತರ ಹೋಗಿ ಕೆಟ್ಟದಾಗಿ ವಿಮರ್ಶೆ ಮಾಡಿ ಬರೆದಿದ್ದೀರಿ ಎಂದು ಆಕ್ಷೇಪಿಸಿದರು.
ಆಗ ಪತ್ರಕರ್ತ ರಾವ್ ಆರೋಪವನ್ನು ತಳ್ಳಿ ಹಾಕಿದರಲ್ಲದೆ, ತಾವು ನಿಮ್ಮನ್ನು ಸಂದರ್ಶನವೊಂದಕ್ಕೆ ಮಾತ್ರ ಭೇಟಿ ಮಾಡಿದ್ದು ವೈಯಕ್ತಿಕವಾಗಿ ಸಂದೇಶ ಕಳುಹಿಸಿಲ್ಲ ಎಂದು ಹೇಳಿದರು.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ ಸೋದರಿ ರಂಗೋಲಿ ಚಂಡೆಲ್, ಕಂಗನಾ ಈ ಬಗ್ಗೆ ಕ್ಷಮೆ ಕೋರುವುದಿಲ್ಲ. ಪತ್ರಕರ್ತ ದೇಶ ದ್ರೋಹಿ ಎಂದು ಕೂಡ ಕರೆದಿದ್ದಾರೆ. 
ಜಡ್ಜ್ ಮೆಂಟಲ್ ಹೈ ಕ್ಯಾ ಚಿತ್ರ ಇದೇ 26ರಂದು ತೆರೆಗೆ ಬರಲಿದೆ.
SCROLL FOR NEXT