ಬಾಲಿವುಡ್

ಗಾಂಧಿ ಸಂದೇಶಗಳನ್ನು ಸಾಕಾರಗೊಳಿಸಲು 'ದಿಲ್ ಸೆ'ಯಿಂದ ಕೆಲಸ ಮಾಡಬೇಕು ಎಂದ ಶಾರೂಕ್ ಗೆ ಪಿಎಂ ಮೋದಿ ಹೇಳಿದ್ದೇನು? 

Sumana Upadhyaya

ನವದೆಹಲಿ: ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಮಹಾತ್ಮ ಗಾಂಧಿಯನ್ನು ಭಾರತ ಮತ್ತು ಜಗತ್ತಿಗೆ ಮತ್ತೆ ಪರಿಚಯಿಸುವ ಅವಶ್ಯಕತೆಯಿದೆ ಎಂದು ಬಾಲಿವುಡ್ ನಟ ಶಾರೂಕ್ ಖಾನ್ ಹೇಳಿದ್ದಾರೆ.


ನಾವೆಲ್ಲರೂ ಸ್ವಚ್ಛವಾಗಿರಬೇಕೆಂದು ನಮಗೆ ಗೊತ್ತು. ಅದನ್ನು ಸ್ವಚ್ಛ ಭಾರತ ಅಭಿಯಾನ ಮೂಲಕ ಪ್ರಧಾನಿ ಮೋದಿ ದೇಶಕ್ಕೆ ಮರು ಪರಿಚಯಿಸಿದರು. ಈ ಬಗ್ಗೆ ಹೆಚ್ಚು ಜಾಗೃತಿ ಜನರಲ್ಲಿ ಮೂಡಿಸಬೇಕಾಗಿದೆ ಎಂದರು.


ಗಾಂಧೀಜಿಯವರ ತತ್ವ, ಆಲೋಚನೆಗಳನ್ನು ಮತ್ತೆ ಜನರಿಗೆ ಪರಿಚಯಿಸುವ ಅಗತ್ಯವಿದೆ. ಇಂದು ವಿಶ್ವ ಬದಲಾಗುತ್ತಿದೆ, ಎಲ್ಲ ಕ್ಷೇತ್ರದಲ್ಲಿಯೂ ಡಿಜಿಟಲೀಕರಣ ಬಂದಿದೆ. ಹೀಗಾಗಿ ಗಾಂಧೀಜಿ 2.0 ಎಂದು ಮತ್ತೆ ಜಗತ್ತಿಗೆ ಸಾರುವ ಅವಶ್ಯಕತೆ ನಮ್ಮಲ್ಲಿ ಇದೆ ಎಂದರು.


ಈ ವರ್ಷ ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು, ಕೆಲಸಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಚಲನಚಿತ್ರ ಮತ್ತು ಟಿವಿ ಲೋಕದ ಕಲಾವಿದರನ್ನು ನಿನ್ನೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ, ಸಂವಾದ ನಡೆಸಿದ್ದರು.


ಗಾಂಧೀಜಿಯವರ ಜೀವನ, ಬೋಧನೆ ಮತ್ತು ಮೌಲ್ಯಗಳನ್ನು ಸಾರುವ ವಿಷಯಗಳನ್ನು ಬಾಲಿವುಡ್ ನ ಎಂಟು ಮಂದಿ ಕಲಾವಿದರು ಹೇಳುವ ಸಾಕ್ಷ್ಯಚಿತ್ರವನ್ನು ಪ್ರಧಾನಿ ಸಂವಾದ ವೇಳೆ ತೋರಿಸಲಾಯಿತು. ಈ ಸಮಯದಲ್ಲಿ ಬಾಲಿವುಡ್ ಕಲಾವಿದರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಮಹಾತ್ಮಾ ಗಾಂಧಿಯವರ ಆಲೋಚನೆಗಳನ್ನು ಸಿನೆಮಾ ಮೂಲಕ ತೋರಿಸಿ ಇಂದಿನ ಯುವಜನತೆ ಗಾಂಧೀಜಿಯವರ ತತ್ವಗಳನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳುವಂತೆ ಮಾಡಬಹುದಾಗಿದೆ. ಹಲವು ವಿಷಯಗಳ ಕುರಿತು ನಾವು ವಿಸ್ತಾರವಾಗಿ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಎಂದು ಹೇಳಿದರು.


ಚಲನಚಿತ್ರ ಮತ್ತು ಮನರಂಜನಾ ಕ್ಷೇತ್ರ ವೈವಿಧ್ಯತೆಯಿಂದ ಕೂಡಿದ್ದು ವೈಭವೀಕರಣವಾಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಪರಿಣಾಮ ಕೂಡ ಅಗಾಧವಾಗಿರುತ್ತದೆ. ಚಲನಚಿತ್ರ, ಸಂಗೀತ ಮತ್ತು ನೃತ್ಯಗಳು ಸಮಾಜದಲ್ಲಿ ಜನತೆಯೊಂದಿಗೆ ಇನ್ನಷ್ಟು ಉತ್ತಮವಾಗಿ ಬೆಸೆಯಲು ಸುಲಭವಾಗುತ್ತದೆ ಎಂದರು ಪ್ರಧಾನ ಮಂತ್ರಿ ಮೋದಿ.


ತಮಗೆ ಪ್ರಧಾನಿಯವರ ಮುಕ್ತ ಮಾತುಕತೆ ಮತ್ತು ಸಂವಾದ ಬಹಳವಾಗಿ ಹಿಡಿಸಿದೆ. ಸಂವಾದ ನಿಜಕ್ಕೂ ಅದ್ಭುತವಾಗಿತ್ತು. ಆಳವಾದ ವಿಷಯಗಳನ್ನು ಸ್ಪೂರ್ತಿದಾಯಕವಾಗಿ ನಮಗೆ ಹೇಳಿದರು ಎಂದು ಅಮೀರ್ ಖಾನ್ ನುಡಿದರು.


ಪ್ರಧಾನಿ ಜೊತೆ ಸಂವಾದದಲ್ಲಿ ಬಾಲಿವುಡ್ ನಟ-ನಟಿಯರಾದ ಸೋನಮ್ ಕಪೂರ್, ಕಂಗನಾ ರಾನಾವತ್, ನಿರ್ದೇಶಕ ರಾಜ್ ಕುಮಾರ್ ಹಿರಾನಿ, ರಾಜ್ ಕುಮಾರ್ ಸಂತೋಷಿ, ಅಶ್ವಿನಿ ಅಯ್ಯರ್ ತಿವಾರಿ, ನಿತೇಶ್ ತಿವಾರಿ, ನಿರ್ಮಾಪಕರಾದ ಎಕ್ತಾ ಕಪೂರ್, ಬೋನಿ ಕಪೂರ್, ಜಯಂತಿಲಾಲ್ ಗಡ ಮೊದಲಾದವರು ಭಾಗವಹಿಸಿದ್ದರು.


ಮಹಾತ್ಮಾ ಗಾಂಧಿಯವರ ಬಗ್ಗೆ 100 ಸೆಕೆಂಡ್ ಗಳ ವಿಡಿಯೊವನ್ನು 8 ಕಲಾವಿದರ ಮೂಲಕ ನಿರ್ದೇಶಕ ರಾಜ್ ಕುಮಾರ್ ಹಿರಾನಿ ತಯಾರಿಸಿದ್ದರು.
ಇನ್ನು, ಗಾಂಧೀಜಿಯವರ ಸಂದೇಶಗಳನ್ನು ಮಾತು ಮತ್ತು ಕೆಲಸ ಎರಡರಲ್ಲೂ ವಾಸ್ತವ ರೂಪಕ್ಕೆ ತರುವ ಕೇಂದ್ರ ಸರ್ಕಾರದ ಗುರಿಯನ್ನು ಈಡೇರಿಸಲು ದೇಶದ ಪ್ರತಿಯೊಬ್ಬ ನಾಗರಿಕರು ಹೃದಯಾಂತರಾಳದಿಂದ(ದಿಲ್ ಸೆ) ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಶಾರೂಕ್ ಖಾನ್ ಟ್ವೀಟ್ ಮಾಡಿದ್ದಾರೆ. 


ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಪ್ರತಿಯೊಬ್ಬ ನಾಗರಿಕರು ಶೇಕಡಾ 100ರಷ್ಟು ಹೃದಯಾಂತರಾಳದಿಂದ ಕೆಲಸ ಮಾಡಿದರೆ ಫಲಿತಾಂಶ ಅದ್ವಿತೀಯವಾಗಿರುತ್ತದೆ. ಬಾಪೂಜಿಯವರ ಸಂದೇಶಗಳನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯಬೇಕು ನಾವು ಪ್ರಯತ್ನಿಸುತ್ತೇವೆ ಎಂದಿದ್ದಾರೆ.


ಇಲ್ಲಿ ದಿಲ್ ಸೆ ಎಂದು ಶಾರೂಕ್ ಖಾನ್ ಉಲ್ಲೇಖಿಸಿರುವುದು ಅವರು ಮತ್ತು ಮನಿಶಾ ಕೊಯಿರಾಲಾ 1998ರಲ್ಲಿ ನಟಿಸಿದ ಚಿತ್ರದ ಶೀರ್ಷಿಕೆ ಕೂಡ ಹೌದು. 

SCROLL FOR NEXT