ಬಾಲಿವುಡ್

'ಸಿಬಿಐ' ಹೆಗಲಿಗೆ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ತನಿಖೆ, ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನಡೆ 

Sumana Upadhyaya

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಒಂದು ಹಂತಕ್ಕೆ ಬಂದು ನಿಂತಿದೆ. ಕಳೆದ ಎರಡು ತಿಂಗಳಿನಿಂದ ಯಾರು ತನಿಖೆ ನಡೆಸುವುದು ಎಂಬ ವಾದ-ವಿವಾದಕ್ಕೆ ಬುಧವಾರ ತೆರೆ ಬಿದ್ದಿದೆ. 

ನಟನ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಇದಕ್ಕೆ ಸಂಬಂಧಪಟ್ಟ ಎಲ್ಲಾ ಸಾಕ್ಷಿಗಳು, ದಾಖಲೆಗಳನ್ನು ಮುಂಬೈ ಪೊಲೀಸರು ಸಿಬಿಐಗೆ ಹಸ್ತಾಂತರಿಸುವಂತೆ ಹೇಳಿದೆ. ನಟಿ ರಿಯಾ ಚಕ್ರವರ್ತಿ ಅವರು ತನಿಖೆಯನ್ನು ಬಿಹಾರದಿಂದ ಮುಂಬೈಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಸುಶಾಂತ್ ಸಾವಿನ ಪ್ರಕರಣದಲ್ಲಿ ಬಿಹಾರ ಪೊಲೀಸರು ದಾಖಲಿಸಿರುವ ಎಫ್ಐಆರ್ ಸರಿಯಾಗಿದ್ದು, ಸಿಬಿಐಗೆ ತನಿಖೆಯನ್ನು ವರ್ಗಾಯಿಸುವುದು ಕಾನೂನಾತ್ಮಕವಾಗಿ ಸರಿಯಾಗಿದೆ ಮತ್ತು ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಲ್ಲಿ ಬಿಹಾರ ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದೆ.  ಮಹಾರಾಷ್ಟ್ರ ಸರ್ಕಾರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದರಿಂದ ರಿಯಾ ಚಕ್ರವರ್ತಿ ಸೇರಿದಂತೆ ಪಾಟ್ನಾ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿನ ಆರೋಪಿಗಳಿಗೆ ಸಂಕಷ್ಟ ಎನ್ನಬಹುದು. ಇದು ಸುಶಾಂತ್ ಸಿಂಗ್ ರಜಪೂತ್ ಕುಟುಂಬಸ್ಥರಿಗೆ ಸಿಕ್ಕಿದ ಆರಂಭಿಕ ಗೆಲುವಾಗಿದೆ. ನಮ್ಮ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಪಾಟ್ನಾ ಕೋರ್ಟ್ ನಲ್ಲಿ ದಾಖಲಾಗಿರುವ ಎಫ್ ಐಆರ್ ಸರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಅವರ ಪರ ವಕೀಲ ವಿಕಾಸ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. 

ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈಯ ತಮ್ಮ ಫ್ಲಾಟ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. 

SCROLL FOR NEXT