ಬಾಲಿವುಡ್

ಬೋನಿ ಕಪೂರ್ ಮನೆಗೆಲಸದ ವ್ಯಕ್ತಿಗೆ ಕೊರೋನಾ ಪಾಸಿಟಿವ್, ತಂದೆ ಸಂದೇಶ ಹಂಚಿಕೊಂಡ ಜಾನ್ವಿ

Lingaraj Badiger

ಮುಂಬೈ: ಮಹಾಮಾರಿ ಕೊರೋನಾ ವೈರಸ್ ಮುಂಬೈನಲ್ಲಿ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ಈಗ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಕುಟುಂಬಕ್ಕೂ ಕೊರೋನಾ ಕಂಟಕ ಎದುರಾಗಿದೆ.

ಹಲವು ವರ್ಷಗಳಿಂದ ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಮನೆಗೆಲಸದ ವ್ಯಕ್ತಿಗೆ ಕೊರೋನಾ ಇರುವುದು ಧೃಡಪಟ್ಟಿದೆ ಎಂದು ಸ್ವತಃ ಬೋನಿ ಕಪೂರ್ ಅವರೇ ಹೇಳಿದ್ದು, ತಂದೆಯ ಸಂದೇಶವನ್ನು ನಟಿ ಜಾನ್ವಿ ಕಪೂರ್ ಅವರು ಇನ್ ಸ್ಟಾಗ್ರಾಮ್ ನಲ್ಲಿ ಷೇರ್ ಮಾಡಿದ್ದಾರೆ.

ಬೋನಿ ಕಪೂರ್‌ ಮನೆಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಚರಣ್ ಸಾಹು ಎಂಬ ವ್ಯಕ್ತಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 

ಮುಂಬೈನ ಅಂಧೇರಿಯಲ್ಲಿರುವ ಬೋನಿ ಮನೆಯಲ್ಲಿಯೇ ಚರಣ್ ಕೂಡ ವಾಸ ಮಾಡುತ್ತಿದ್ದರು. ಈ ಕುರಿತು ಅಧಿಕೃತ ಮಾಹಿತಿಯನ್ನು ಸ್ವತಃ ಬೋನಿ ನೀಡಿದ್ದಾರೆ.

'ನನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚರಣ್‌ಗೆ ಕೊರೋನಾ ವೈರಸ್ ಪಾಸಿಟಿವ್ ಆಗಿದೆ. ಮೇ 16ರಂದು ಚರಣ್‌ಗೆ ಹುಷಾರಿರಲಿಲ್ಲ. ಸಂಜೆಯೇ ಆಸ್ಪತ್ರೆಗೆ ದಾಖಲು ಮಾಡಿ, ಪರೀಕ್ಷೆ ಮಾಡಿದಾಗ ಈ ವಿಚಾರ ತಿಳಿದುಬಂದಿದೆ. ಮುಂಬೈ ಪಾಲಿಕೆ ಮತ್ತು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ, ಆತನನ್ನು ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾನು ಮತ್ತು ನನ್ನ ಮಕ್ಕಳಾದ ಜಾನ್ವಿ ಕಪೂರ್, ಖುಷಿ ಕಪೂರ್‌ ಮನೆಯಲ್ಲೇ ಇದ್ದೇವೆ. ಅಲ್ಲದೆ, ಇತರೆ ಕೆಲಸಗಾರರು ನಮ್ಮ ಮನೆಯಲ್ಲೇ ಇದ್ದಾರೆ. ಲಾಕ್‌ಡೌನ್‌ ಜಾರಿಯಾದ ದಿನದಿಂದಲೂ ನಾವೆಲ್ಲರೂ ಮನೆಯಲ್ಲೇ ಇದ್ದೇವೆ' ಎಂದು ಹೇಳಿದ್ದಾರೆ.

'ನಮ್ಮ ಮನೆಯಲ್ಲಿರುವ ಯಾರಿಗೂ ಯಾವುದೇ ರೀತಿಯ ಕೊರೋನಾದ ಲಕ್ಷಣಗಳು ಕಂಡುಬಂದಿಲ್ಲ. ಎಲ್ಲರೂ ಕ್ಷೇಮವಾಗಿದ್ದೇವೆ. ಲಾಕ್‌ಡೌನ್‌ ಜಾರಿಯಾದ ಮೇಲೆ ಮನೆಯಲ್ಲೇ ಇದ್ದೇವೆ. ಈಗ ಮುಂದಿನ 14 ದಿನಗಳವರೆಗೂ ಅದನ್ನೇ ಪಾಲನೆ ಮಾಡುತ್ತೇವೆ. ಹೌಸ್‌ ಕ್ವಾರಂಟೈನ್ ಆಗಿರಲಿದ್ದೇವೆ. ವೈದ್ಯಾಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸಲಿದ್ದೇವೆ. ಅಲ್ಲದೆ, ತಕ್ಷಣಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸರ್ಕಾರ, ಬಿಎಂಸಿ ಹಾಗೂ ವೈದ್ಯಾಧಿಕಾರಿಗಳಿಗೆ ಧನ್ಯವಾದಗಳು. ಯಾವುದೇ ವದಂತಿಗಳು ಹಬ್ಬಬಾರದೆಂದು ಈ ಮಾಹಿತಿ ನೀಡುತ್ತಿದ್ದೇನೆ. ಅಗತ್ಯ ಮುಂಜಾಗ್ರತ ಕ್ರಮಗಳನ್ನು ನಮ್ಮ ಕುಟುಂಬ ತೆಗೆದುಕೊಂಡಿದೆ. ಚರಣ್ ಆದಷ್ಟು ಬೇಗ ಹುಷಾರಾಗಿ ಬರಲಿದ್ದಾನೆ ಎಂಬ ನಂಬಿಕೆ ಇದೆ' ಎಂದು ಬೋನಿ ಕಪೂರ್‌ ಹೇಳಿದ್ದಾರೆ.

SCROLL FOR NEXT