ಬಾಲಿವುಡ್

ಬಂಗಲೆ ನಿರ್ಮಾಣದಲ್ಲಿ ಅಕ್ರಮ ನಡೆದಿಲ್ಲ, ನನ್ನ ಶತ್ರುಗಳು ಮುಂಬೈ ಪಿಒಕೆ ಎಂದು ಸಾಬೀತುಪಡಿಸಿದ್ದಾರೆ:ಕಂಗನಾ ರಾನಾವತ್

Sumana Upadhyaya

ಮುಂಬೈ: ಮಹಾನಗರ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ನನಗೆ ಭಾಸವಾಗುತ್ತಿದೆ ಎಂದು ಹೇಳಿ ಶಿವಸೇನಾ ನಾಯಕರೊಂದಿಗೆ ತೀವ್ರ ವಿವಾದ ಮಾಡಿಕೊಂಡು ಸರ್ಕಾರದ ಭದ್ರತೆಯೊಂದಿಗೆ ಮುಂಬೈ ಮಹಾನಗರಕ್ಕೆ ಬುಧವಾರ ಹೊರಟ ಬಾಲಿವುಡ್ ನಟಿ ಕಂಗನಾ ರಾನಾವತ್ ಗೆ ಅವರ ಮುಂಬೈ ಬಂಗಲೆಯ ಒಂದು ಭಾಗವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿ ಪಾಲಿಕೆ ನೆಲಸಮ ಮಾಡಿತು.

ಇದಕ್ಕೂ ಮುನ್ನ ಅವರ ಬಂಗಲೆ ಮುಂದೆ ನೊಟೀಸ್ ಹಚ್ಚಿದ್ದ ಮುಂಬೈ ಮಹಾನಗರ ಪಾಲಿಕೆ ಇಂದು ಬೆಳಗ್ಗೆ 11 ಗಂಟೆಯ ವೇಳೆಗೆ ನೆಲಸಮ ಕಾರ್ಯಾಚರಣೆ ಆರಂಭಿಸಿತು.

ಈ ಘಟನೆಗೆ ತಕ್ಷಣವೇ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ನಟಿ ಕಂಗನಾ, ಮಹಾರಾಷ್ಟ್ರ ಸರ್ಕಾರ ನನ್ನನ್ನು ಗುರಿಯಾಗಿರಿಸಿಕೊಂಡು ಈ ರೀತಿ ಮಾಡುತ್ತಿದೆ. ಕಟ್ಟಡ ಬದಲಾವಣೆ ಸಮಯದಲ್ಲಿ ಕಾನೂನನ್ನು ಯಾವುದೇ ರೀತಿಯಲ್ಲಿಯೂ ಉಲ್ಲಂಘನೆ ಮಾಡಿಲ್ಲ, ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ,ಯಾಕೆ ನನ್ನ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆದಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.

ನಾನು ಮುಂಬೈಗೆ ಬರುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ನನ್ನ ಆಸ್ತಿ ಮೇಲೆ ಕಣ್ಣು ಹಾಕಿ ಅಕ್ರಮವಾಗಿ ನೆಲಸಮ ಮಾಡುತ್ತಿದ್ದಾರೆ, ಇದರಿಂದ ನನ್ನ ಹೋರಾಟ ನಿಲ್ಲುವುದಿಲ್ಲ, ನನ್ನ ಉತ್ಸಾಹ, ಹೋರಾಟದ ಕಿಚ್ಚು ಇನ್ನಷ್ಟು ಅಧಿಕವಾಗುತ್ತದೆ ಎಂದಿದ್ದಾರೆ.
ನಟಿ ಕಂಗನಾ ತಮ್ಮ ಮನೆಯನ್ನು ಇತ್ತೀಚೆಗೆ ಮಣಿಕರ್ಣಿಕಾ ಸಿನೆಮಾ ನಂತರ ಬದಲಾವಣೆ ಮಾಡಿಕೊಂಡು ಪ್ರೊಡಕ್ಷನ್ ಹೌಸ್ ನ್ನಾಗಿ ಮಾಡಿಕೊಂಡಿದ್ದರು. ಅದರಲ್ಲಿ ಅಕ್ರಮ ನಡೆದಿದೆ ಎಂಬುದು ಮಹಾನಗರ ಪಾಲಿಕೆಯ ಆರೋಪ.

ಇನ್ನು ಕಂಗನಾ ರಾನಾವತ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಹಳೆಯ ವಿಡಿಯೊವೊಂದರಲ್ಲಿ ನಟ ಅಧ್ಯಾಯನ್ ಸುಮನ್ ಹೇಳಿರುವ ಬಗ್ಗೆ ನಟಿಯನ್ನು ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ತಿಳಿಸಿದ್ದಾರೆ, ಇದಕ್ಕೆ ನಟಿ ಕಂಗನಾ ಪರೀಕ್ಷೆ ಎದುರಿಸಲು ಸಿದ್ಧಳಿದ್ದೇನೆ ಎಂದಿದ್ದಾರೆ.

SCROLL FOR NEXT