ಬಾಲಿವುಡ್

ಹಿರಿಯ ನಟ, ನಿರ್ದೇಶಕ ಲಲಿತ್ ಬೆಹಲ್ ಕೊರೋನಾದಿಂದ ನಿಧನ

Raghavendra Adiga

"ತಿತ್ಲಿ" ಹಾಗೂ "ಮುಕ್ತಿ ಭವನ್" ಮೊದಲಾದ ವಿಮರ್ಶಕರ ಮೆಚ್ಚುಗೆ ಗಳಿಸಿದ ಚಿತ್ರಗಳ ಖ್ಯಾತಿಯ ಹಿರಿಯ ನಟ-ನಿರ್ದೇಶಕ ಲಲಿತ್ ಬೆಹಲ್ ಕೋವಿಡ್ 19  ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಕಳೆದ ವಾರ ಕೊರೋನಾ ಸೋಂಕಿಗೆ ತುತ್ತಾಗಿದ್ದ ಬೆಹಲ್ ದೆಹಲಿಯ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದು,ಚಿಕಿತ್ಸೆ ಫಲಿಸದೆ  ಕೊನೆಯುಸಿರೆಳೆದರು. ನೋವಿನ ಸಂಗತಿಯನ್ನು ಬೆಹಲ್ ಪುತ್ರ, ನಿರ್ದೇಶಕ ಕಣು ಬೆಹಲ್ ಖಚಿತಪಡಿಸಿದ್ದಾರೆ.

"ನನ್ನ ತಂದೆ ಇಂದು ಮಧ್ಯಾಹ್ನ ನಿಧನರಾದರು.ಅವರು ಹೃದಯ ಸಂಬಂಧಿತ ರೋಗಗಳಿಂದ ನರಳುತ್ತಿದ್ದರು. ಅಲ್ಲದೆ ಕೊರೋನಾ ಪಾಸಿಟಿವ್ ವರದಿ ಪಡೆದಿದ್ದರು.  ಅವರ ಶ್ವಾಸಕೋಶದಲ್ಲಿ ಸೋಂಕು ಇತ್ತು ಮತ್ತು ಅದು ತೀವ್ರವಾಯಿತು." ಕಣು ಸುದ್ದಿ ಸಂಸ್ಥೆಗಳೀಗೆ ತಿಳಿಸಿದ್ದಾರೆ.

ಪ್ರಸಿದ್ಧ ರಂಗನಟ ಲಲಿತ್ ಅವರ ವೃತ್ತಿಜೀವನವು "ತಪೀಶ್", "ಆತಿಶ್", "ಸುನೆಹ್ರಿ ಜಿಲ್ದ್" ನಂತಹ ಟಿವಿ ಟೆಲಿಫಿಲ್ಮ್‌ಗಳನ್ನು ನಿರ್ದೇಶಿಸಿ ನಿರ್ಮಿಸುವುದರೊಂದಿಗೆ ಪ್ರಾರಂಭವಾಯಿತು. ಅವರು "ಅಫ್ಸಾನೆ" ಎಂಬ ಟಿವಿಕಾರ್ಯಕ್ರಮದಲ್ಲಿ ನಟರಾಗಿ ಕೆಲಸ ಮಾಡಿದರು. "ತಿತ್ಲಿ" ಹಾಗೂ "ಮುಕ್ತಿ ಭವನ್" ಗಳಲ್ಲದೆ, ಅವರ ಇತ್ತೀಚಿನ ಕೆಲವು ಯೋಜನೆಗಳೆಂದರೆ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ "ಮೇಡ್ ಇನ್ ಹೆವನ್" ಮತ್ತು "ಜಡ್ಜ್‌ಮೆಂಟಲ್ ಹೈ ಕ್ಯಾ"

ಹಿರಿಯ ನಟ, ನಿರ್ದೇಶಕನ ಅಗಲಿಕೆಗೆ ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.

SCROLL FOR NEXT