ಬಾಲಿವುಡ್

'ಬಾಲಿಕ ವಧು' ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ಸುರೇಖಾ ಸಿಕ್ರಿ ನಿಧನ

Sumana Upadhyaya

ನವದೆಹಲಿ: ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ಸುರೇಖಾ ಸಿಕ್ರಿ ಶುಕ್ರವಾರ ನಸುಕಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೆದುಳಿಗೆ ಎರಡನೇ ಬಾರಿ ಪಾರ್ಶ್ವವಾಯು (ಬ್ರೈನ್ ಸ್ಟ್ರೋಕ್) ಆದ ನಂತರ ಸುರೇಖಾ ಸಿಕ್ರಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇಂದು ಬೆಳಗ್ಗೆ ತೀವ್ರ ಹೃದಯಾಘಾತವಾಗಿ ಅಸುನೀಗಿದ್ದಾರೆ ಎಂದು ಅವರ ಸಹಾಯಕ ವಿವೇಕ್ ಸಿದ್ವಾನಿ ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೂಡ ಸುರೇಖಾ ಸಿಕ್ರಿಯವರಿಗೆ ಬ್ರೈನ್ ಸ್ಟ್ರೋಕ್ ಆಗಿತ್ತು. ತಮ್ಮ ಆರೋಗ್ಯ ಸಂಪೂರ್ಣ ಗುಣಮುಖವಾಗುವವರೆಗೆ ನಟನೆಗೆ ಹಿಂತಿರುಗಲು ಸಾಧ್ಯವಿಲ್ಲ ಎಂದು ಕಳೆದ ವರ್ಷ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇಂದು ಅವರ ನಿವಾಸದ ಹತ್ತಿರ ಕುಟುಂಬಸ್ಥರು ಮತ್ತು ಆಪ್ತರು ನೆರೆದಿದ್ದು ಕುಟುಂಬಸ್ಥರು ಖಾಸಗಿತನ ಅಪೇಕ್ಷಿಸುತ್ತಿದ್ದಾರೆ ಎಂದು ಅವರ ಸಹಾಯಕ ವಿವೇಕ್ ಸಿದ್ವಾನಿ ತಿಳಿಸಿದ್ದಾರೆ.

ಮೂರು ಬಾರಿ ರಾಷ್ಟ್ರ ಪ್ರಶಸ್ತಿ: ಸುರೇಖಾ ಸಿಕ್ರಿ ಅವರಿಗೆ ಕಳೆದ ವರ್ಷ ಬಡಾಯಿ ಹೊ ಚಿತ್ರಕ್ಕೆ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗಳಿಸಿದ್ದರು. 1988ರಲ್ಲಿ ತಮಾಸ್ ಹಾಗೂ 1995ರಲ್ಲಿ ಮಮ್ಮೊ ಚಿತ್ರಕ್ಕೆ ಸಹ ರಾಷ್ಟ್ರಪ್ರಶಸ್ತಿ ಗಳಿಸಿದ್ದರು. ರಾಷ್ಟ್ರೀಯ ನಾಟಕ ಅಕಾಡೆಮಿಯಲ್ಲಿ ಪದವಿ ಗಳಿಸಿದ್ದ ಸುರೇಖಾ ಸಿಕ್ರಿ ಅವರಿಗೆ 1989ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕೂಡ ಬಂದಿತ್ತು.

ಹಿಂದಿ ಧಾರಾವಾಹಿ ಲೋಕದ ಜನಪ್ರಿಯ ಧಾರಾವಾಹಿ 'ಬಾಲಿಕ ವಧು' ಮೂಲಕ ಕಿರುತೆರೆಯಲ್ಲಿ ಕೂಡ ಸುರೇಖಾ ಸಿಕ್ರಿ ಜನಪ್ರಿಯರಾಗಿದ್ದರು. ಇನ್ನು ಹಿರಿತೆರೆಯಲ್ಲಿ ಜುಬೇಡಾ, ಮಿ ಅಂಡ್ ಮಿಸ್ಸಸ್ ಅಯ್ಯರ್ ಮತ್ತು ರೈನ್ ಕೋಟ್ ಚಿತ್ರಗಳಲ್ಲಿ ಕೂಡ ಅವರ ನಟನೆ ಅತ್ಯಂತ ಜನಪ್ರಿಯವಾಗಿತ್ತು. 'ಏಕ್ ಥಾ ರಾಜ ಏಕ್ ಥಿ ರಾಣಿ', 'ಪಾರ್ಡೆಸ್ ಮೇ ಹೈ ಮೇರಾ ದಿಲ್', 'ಮಾ ಎಕ್ಸ್ ಚೇಂಜ್', 'ಸಾತ್ ಪೆರೆ' ಮತ್ತು 'ಬಾಲಿಕಾ ವಧು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಅವರು ಕೊನೆಯದಾಗಿ ನಟಿಸಿದ ಚಿತ್ರ ಘೋಸ್ಟ್ ಸ್ಟೋರೀಸ್ ಜೋಯಾ ಅಖ್ತರ್ ನಿರ್ದೇಶಿಸಿದ್ದು ನೆಟ್ಲ್ಫಿಕ್ಸ್ ನಲ್ಲಿ ಪ್ರಸಾರವಾಗಿತ್ತು. 

SCROLL FOR NEXT