ಬಾಲಿವುಡ್

ಡ್ರಗ್ ಕೇಸು: ಸುಶಾಂತ್ ಸಿಂಗ್ ರಜಪೂತ್ ಬಾಡಿಗಾರ್ಡ್ ಗೆ ಮತ್ತೊಮ್ಮೆ ಎನ್ ಸಿಬಿ ಸಮನ್ಸ್ 

Sumana Upadhyaya

ಮುಂಬೈ: ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಬಾಡಿಗಾರ್ಡ್ ಗೆ ಸತತ ಎರಡನೇ ದಿನ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ)ಗುರುವಾರ ಸಮನ್ಸ್ ಜಾರಿ ಮಾಡಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ಅವರ ಬಾಡಿಗಾರ್ಡ್ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿದೆ.ನಟನ ಸಾವಿನ ನಂತರ ಬೆಳಕಿಗೆ ಬಂದ ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ನಿನ್ನೆ ಕೂಡ ಎನ್ ಸಿಬಿ ಅವರ ಬಾಡಿಗಾರ್ಡ್ ನ್ನು ಕರೆದು ವಿಚಾರಣೆ ನಡೆಸಿತ್ತು.

ಇದೇ ಕೇಸಿಗೆ ಸಂಬಂಧಪಟ್ಟಂತೆ ಈ ಹಿಂದೆ ಎನ್ ಸಿಬಿ ಡ್ರಗ್ ಪೆಡ್ಲರ್ ಹರೀಶ್ ಖಾನ್ ನ್ನು ಬಂಧಿಸಿದೆ. ಅಲ್ಲದೆ ಸುಶಾಂತ್ ಸಿಂಗ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಗೆಲಸದವರಾದ ನೀರಜ್ ಮತ್ತು ಕೇಶವ್ ಅವರನ್ನು ಕಳೆದ ಭಾನುವಾರ ವಿಚಾರಣೆ ನಡೆಸಿತ್ತು.

ಮೊನ್ನೆ ಮೇ 26 ರಂದು ಎನ್‌ಸಿಬಿ ಮುಂಬೈ ಘಟಕವು ಸುಶಾಂತ್ ಸಿಂಗ್ ರಜಪೂತ್ ಅವರ  ಅಪಾರ್ಟ್ ಮೆಂಟ್ ನಲ್ಲಿ ಸಹವರ್ತಿಗಳಾಗಿದ್ದ ಸಿದ್ಧಾರ್ಥ್ ಪಿಥಾನಿಯನ್ನು ಹೈದರಾಬಾದ್‌ನಿಂದ ಬಂಧಿಸಿ ಅಲ್ಲಿನ ಸ್ಥಳೀಯ ನ್ಯಾಯಾಲಯದಿಂದ ವಶಕ್ಕೆ ಪಡೆದು ವಾರಂಟ್‌ ಹೊರಡಿಸಿ ಮುಂಬೈಗೆ ಕರೆತಂದಿತ್ತು. ಪಿಥಾನಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ, 1985 ರ ಹಲವು ವಿಭಾಗಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಬಂಧನದ ನಂತರ, ಮುಂಬೈನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಮ್ಎಂ) ನ್ಯಾಯಾಲಯವು ಪಿಥಾನಿಯನ್ನು ಜೂನ್ 1 ರವರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಸ್ಟಡಿಗೆ ಒಪ್ಪಿಸಿತ್ತು.

ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ನಲ್ಲಿ ಡ್ರಗ್ ಪ್ರಕರಣದ ಕರಾಳ ಮುಖ ತೆರೆದಿತ್ತು. ಸುಶಾಂತ್ ಸಿಂಗ್ ರಜಪೂತ್ ಮತ್ತು ಇತರರ ಮಧ್ಯೆ ಡ್ರಗ್ ಸೇವನೆ, ಸಂಗ್ರಹಣೆ, ಬಳಕೆ ಮತ್ತು ಸಾರಿಗೆಗೆ ಸಂಬಂಧಿಸಿದ ವಿವಿಧ ಸಂವಹನಗಳು ನಡೆದಿತ್ತು ಪತ್ತೆಯಾಗಿತ್ತು ಎಂದು ಹೇಳಲಾಗುತ್ತಿದೆ.

ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಕಳೆದ ವರ್ಷ ಜೂನ್ 14ರಂದು ಮುಂಬೈಯ ಅವರ ನಿವಾಸದಲ್ಲಿ ಪತ್ತೆಯಾಗಿತ್ತು.

SCROLL FOR NEXT