ಬಾಲಿವುಡ್

ಜೀವ ಬೆದರಿಕೆ: ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಪಡೆದ ಬಾಲಿವುಡ್ ನಟ ಸಲ್ಮಾನ್ ಖಾನ್

Ramyashree GN

ಮುಂಬೈ: ನಟ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಬಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸ್ವಯಂ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದ ನಂತರ ಶಸ್ತ್ರಾಸ್ತ್ರ ಪರವಾನಗಿಯನ್ನು ನೀಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಬಳಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಕೊಂದ ಕೆಲವೇ ದಿನಗಳ ನಂತರ ಜೂನ್ ಆರಂಭದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಉದ್ದೇಶಿಸಿ ಕೊಲೆ ಬೆದರಿಕೆ ಪತ್ರ ಬಂದಿತ್ತು.

ಇದಾದ ಬಳಿಕ ಸಲ್ಮಾನ್ ಖಾನ್ ಕಳೆದ ತಿಂಗಳು ಮುಂಬೈ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ವೈಯಕ್ತಿಕ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ಇದನ್ನು ಆದರಿಸಿ, ಶಸ್ತ್ರಾಸ್ತ್ರ ಪರವಾನಗಿ ನೀಡುವ ಪ್ರಾಧಿಕಾರವು ಇದರ ಅಗತ್ಯತೆ ಕುರಿತು ತನಿಖೆಯನ್ನು ಪ್ರಾರಂಭಿಸಿತ್ತು.

ತನ್ನ ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಸಲ್ಮಾನ್ ಖಾನ್ ಅವರು ಜುಲೈ 22 ರಂದು ಶುಕ್ರವಾರ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿಯಾಗಿ ಶಸ್ತ್ರಾಸ್ತ್ರ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

ಕಳೆದ ತಿಂಗಳು ನಿಮ್ಮ ಜೀವನವು ಪಂಜಾಬಿ ಗಾಯ ಸಿಧು ಮೂಸೆವಾಲಾ ಅವರ ರೀತಿಯಲ್ಲೇ ಕೊನೆಗೊಳ್ಳುವುದು ಎಂದು ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಪತ್ರ ಬಂದಿತ್ತು.

ನಟನ ತಂದೆ ಪ್ರತಿದಿನ ಬೆಳಿಗ್ಗೆ ಜಾಗಿಂಗ್ ಮಾಡಿದ ನಂತರ ಕುಳಿತುಕೊಳ್ಳುವ ಬೆಂಚಿನ ಮೇಲೆ ಸಹಿ ಮಾಡದ ಪತ್ರವೊಂದನ್ನು ಇಡಲಾಗಿತ್ತು. ಅದರಲ್ಲಿ ಜೀವ ಬೆದರಿಕೆವೊಡ್ಡಲಾಗಿತ್ತು.

ಬುಲೆಟ್ ಪ್ರೂಫ್ ಕಾರ್ ಖರೀದಿ

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಹೊಸದಾಗಿ ಬುಲೆಟ್ ಫ್ರೂಪ್ ಕಾರ್ ಅನ್ನು ಖರೀದಿಸಿದ್ದಾರೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೇ ಅವರು ತಮ್ಮ ಬಾಡಿಗಾರ್ಡ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ಅನಗತ್ಯವಾಗಿ ವಿವಿಧ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿಲ್ಲ ಎಂದಿರುವ ವರದಿಗಳು, ಸಲ್ಮಾನ್ ಅವರ ಟೈಗರ್ 3 ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಚಿತ್ರೀಕರಣಕ್ಕೂ ಅವರು ಬುಲೆಟ್ ಫ್ರೂಪ್ ಕಾರ್ ಅನ್ನು ತೆಗೆದುಕೊಂಡೇ ಹೋಗುತ್ತಿದ್ದಾರೆ ಎನ್ನಲಾಗಿದೆ.

SCROLL FOR NEXT