ಬಾಲಿವುಡ್

'ನೋರಾ ಫತೇಹಿ ಕೇವಲ ಸಾಕ್ಷಿ, ನಾನು ಆರೋಪಿ ಏಕೆ?': ಇಡಿ ತನಿಖೆಯಲ್ಲಿ ಪಕ್ಷಪಾತ ಎಂದ ಜಾಕ್ವೆಲಿನ್

Lingaraj Badiger

ನವದೆಹಲಿ: ನೋರಾ ಫತೇಹಿ ಸೇರಿದಂತೆ ತನ್ನಂತೆ ಇತರ ಕೆಲವು ಸೆಲೆಬ್ರಿಟಿಗಳು ಸಹ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್‌ನಿಂದ ಉಡುಗೊರೆ ಪಡೆದಿದ್ದಾರೆ. ಆದರೆ ನನ್ನನ್ನು ಮಾತ್ರ ಆರೋಪಿಯನ್ನಾಗಿ ಮಾಡಿರುವುದು ಆಶ್ಚರ್ಯಕರವಾಗಿದೆ ಎಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಪಿಎಂಎಲ್‌ಎ ಮೇಲ್ಮನವಿ ಪ್ರಾಧಿಕಾರದ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್‌ನಿಂದ ನನ್ನಂತೆ ಉಡುಗೊರೆ ಪಡೆದ ಇತರ ಸೆಲೆಬ್ರಿಟಿಗಳನ್ನು ಕೇವಲ ಸಾಕ್ಷಿಗಳನ್ನಾಗಿ ಮಾಡಲಾಗಿದೆ. ಆದರೆ ತನ್ನನ್ನು ಮಾತ್ರ ಆರೋಪಿಯನ್ನಾಗಿ ಎಳೆಯಲು ಪ್ರಯತ್ನಿಸಲಾಗಿದೆ ಎಂದು ನಟಿ ಜಾಕ್ವೆಲಿನ್ ದೂರಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿರುವುದು ನನ್ನ ಹಣ. ಅದನ್ನು ಕಷ್ಟಪಟ್ಟು ಗಳಿಸಿದ್ದೆ. ಸುಕೇಶ್ ಜತೆ ಗೆಳೆತನ ಬೆಳೆಸುವುದಕ್ಕೂ ಮೊದಲೇ ನಾನು ದುಡಿದಿದ್ದ ಹಣವದು. ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದೆ. ಆದರೆ ಈಗ ವಂಚನೆ ಪ್ರಕರಣದಲ್ಲಿ ನನ್ನ ಹೆಸರು ಇರುವುದರಿಂದ, ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಾಕ್ವೆಲಿನ್ ಹೇಳಿದ್ದಾರೆ.

ನಾನು ಯಾವಾಗಲೂ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದ್ದೇನೆ ಮತ್ತು ಇಲ್ಲಿಯವರೆಗಿನ ಎಲ್ಲಾ ಸಮನ್ಸ್‌ಗಳಿಗೆ ಹಾಜರಾಗಿದ್ದೇನೆ ಮತ್ತು ಎಲ್ಲಾ ಮಾಹಿತಿಯನ್ನು ಇಡಿಗೆ ಹಸ್ತಾಂತರಿಸಿದ್ದೇನೆ ಎಂದು ಜಾಕ್ವೆಲಿನ್ ಅವರು ತಿಳಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ತನ್ನ ವಿರುದ್ಧ "ಉಡುಗೊರೆಗಳನ್ನು ಸ್ವೀಕರಿಸಿದ" ಆಪಾದನೆ ಮಾಡಲಾಗಿದೆ. ಆದರೆ ನನ್ನನ್ನು ಹೊರತುಪಡಿಸಿ ಇಂತಹ ಉಡುಗೊರೆಗಳನ್ನು ಪಡೆದ ಇತರರನ್ನು ಪ್ರಕರಣದಲ್ಲಿ ಸಾಕ್ಷಿಗಳನ್ನಾಗಿ ಮಾಡಲಾಗಿದೆ. ನನ್ನನ್ನು ಮಾತ್ರ ಆರೋಪಿ ಮಾಡಿದ್ದು, ಇದು ಪಕ್ಷಪಾತ ಎಂದು ಮೇಲ್ಮನವಿ ಪ್ರಾಧಿಕಾರದ ಮುಂದೆ ಜಾಕ್ವೆಲಿನ್ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

SCROLL FOR NEXT