ಬಾಲಿವುಡ್

ನಟಿ ತುನಿಷಾ ಸಾವು ಪ್ರಕರಣ: ನಟ ಶೀಜಾನ್ ಖಾನ್ ಗೆ 14 ದಿನ ನ್ಯಾಯಾಂಗ ಬಂಧನ

Srinivasamurthy VN

ಮುಂಬೈ: ಹಿಂದಿ ಕಿರುತೆರೆ ನಟಿ, ಮಾಡೆಲ್‌ ತುನಿಷಾ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಮತ್ತು ಪ್ರಕರಣದ ಪ್ರಮುಖ ಆರೋಪಿ ಆಕೆಯ ಪ್ರಿಯಕರ ಶೀಜಾನ್‌ ಖಾನ್‌ ಗೆ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಡಿಸೆಂಬರ್ 24ರಂದು ತುನಿಷಾ ಶರ್ಮಾ ಅವರು ತಮ್ಮ ಧಾರಾವಾಹಿಯೊಂದರ ಶೂಟಿಂಗ್ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಶರ್ಮಾ ಅವರ ಸಹ ನಟ ಶೀಜಾನ್‌ ಮೊಹಮ್ಮದ್‌ ಖಾನ್‌ ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆತನನ್ನು ಪಾಲ್ಘರ್‌ ಜಿಲ್ಲೆಯ ವಸಾಯಿ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.

ತುನಿಷಾ ಅವರ ತಾಯಿ ನೀಡಿರುವ ದೂರಿನ ಆಧಾರ ಮೇಲೆ ಶೀಜನ್‌ ಖಾನ್‌ ಅವರ ಮೇಲೆ ಐಪಿಸಿ ಸೆಕ್ಷನ್‌ 306ರಡಿ (ಆತ್ಮಹತ್ಯೆಗೆ ಕುಮ್ಮಕ್ಕು) ಪ್ರಕರಣ ದಾಖಲು ಮಾಡಲಾಗಿದ್ದು, ಶೀಜನ್‌ ಖಾನ್‌ ಅವರನ್ನು ವಸಾಯಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಖಾನ್‌ ಅವರನ್ನು ಡಿ. 28ರ ವರೆಗೆ ಪೊಲೀಸ್‌ ವಶಕ್ಕೆ ನೀಡಿತ್ತು.

ವರದಿಗಳ ಪ್ರಕಾರ, ತುನಿಷಾ (21) ಮತ್ತು ಶೀಜನ್‌ ಖಾನ್‌ (27) ಅವರ ಮಧ್ಯೆ ಪ್ರೇಮ ಸಂಬಂಧ ಇತ್ತು. ಆದರೆ, 15 ದಿನಗಳ ಹಿಂದಷ್ಟೇ ಇಬ್ಬರು ತಮ್ಮ ಪ್ರೇಮ ಸಂಬಂಧವನ್ನು ಕಡಿದುಕೊಂಡಿದ್ದರು ಎನ್ನಲಾಗಿದೆ.

ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟಿ ತುನಿಷಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಅವರು, ತುನಿಷಾ ಮತಾಂತರಕ್ಕೆ ಶೀಜಾನ್ ಒತ್ತಡ ಹೇರಿದ್ದ ಎಂಬ ಗಂಭೀರ ಆರೋಪ ಮಾಡಿದ್ದರು.
 

SCROLL FOR NEXT