ಬಾಲಿವುಡ್

ಇರಾನ್ ಮಹಿಳೆಯರನ್ನು ಬೆಂಬಲಿಸಿ ತಲೆಗೂದಲು ಕತ್ತರಿಸಿದ್ದೇನೆ ಎಂದ ಊರ್ವಶಿ ರೌಟೇಲಾ, ಕಾಲೆಳೆದ ನೆಟ್ಟಿಗರು

Ramyashree GN

ತನ್ನನ್ನು ಇರಾನ್‌ನ ಯುವತಿ ದಿವಂಗತ ಮಹ್ಸಾ ಅಮಿನಿಗೆ ಹೋಲಿಸಿಕೊಂಡಿದ್ದ ನಟಿ ಊರ್ವಶಿ ರೌಟೇಲಾ ಇದೀಗ ಮಹ್ಸಾ ಸಾವಿನ ವಿರುದ್ಧ ಹಾಗೂ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇರಾನ್ ಮಹಿಳೆಯರನ್ನು ಬೆಂಬಲಿಸಿ 'ತಲೆ ಕೂದಲು ಕತ್ತರಿಸುವ' ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ತಲೆಕೂದಲು ಕತ್ತರಿಸುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ರೌಟೇಲಾ, ‘ನನ್ನ ತಲೆ ಕೂದಲನ್ನು ಕತ್ತರಿಸಿಕೊಂಡಿದ್ದೇನೆ. ಇರಾನಿನ ನೈತಿಕ ಪೊಲೀಸ್‌ಗಿರಿಯಲ್ಲಿ ಮಹ್ಸಾ ಅಮಿನಿ ಹತ್ಯೆ ನಂತರ ಶುರುವಾದ ಹಿಜಾಬ್​ ವಿರುದ್ಧದ ಹೋರಾಟದಲ್ಲಿ ನಿಧನರಾದ ಮಹಿಳೆಯರಿಗೆ ಹಾಗೂ ಉತ್ತರಾಖಂಡದ 19 ವರ್ಷದ ಯುವತಿ ಅಂಕಿತಾ ಭಂಡಾರಿಗೆ ಬೆಂಬಲವಾಗಿ ನನ್ನ ತಲೆ ಕೂದಲನ್ನು ಕತ್ತರಿಸಿಕೊಂಡಿದ್ದೇನೆ' ಎಂದು ಊರ್ವಶಿ ಬರೆದಿದ್ದಾರೆ.

'ಜಗತ್ತಿನಾದ್ಯಂತ ಮಹಿಳೆಯರು ತಮ್ಮ ತಲೆ ಕೂದಲನ್ನು ಕತ್ತರಿಸುವ ಮೂಲಕ ಇರಾನ್ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಮಹಿಳೆಯರನ್ನು ಗೌರವಿಸಿ. ಕೂದಲನ್ನು ಮಹಿಳೆಯರ ಸೌಂದರ್ಯದ ಸಂಕೇತವಾಗಿ ನೋಡಲಾಗುತ್ತದೆ. ಮಹಿಳೆಯರು ಸಾರ್ವಜನಿಕವಾಗಿ ಕೂದಲನ್ನು ಕತ್ತರಿಸುವ ಮೂಲಕ ಸಮಾಜದಲ್ಲಿ ಹೇರಿರುವ ಸೌಂದರ್ಯದ ಮಾನದಂಡಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ಎಂದು ತೋರಿಸುತ್ತಿದ್ದಾರೆ. ಈ ಮಹಿಳಾ ಕ್ರಾಂತಿಯ ಜಾಗತಿಕ ಸಂಕೇತವಾಗಿದೆ. ಯಾವ ಬಟ್ಟೆ ಧರಿಸಬೇಕು, ಹೇಗೆ ವರ್ತಿಸಬೇಕು ಅಥವಾ ಬದುಕಬೇಕು ಎಂಬುದನ್ನು ನಿರ್ಧರಿಸಲು ಯಾವುದಕ್ಕೂ ಅಥವಾ ಯಾರಿಗೂ ಅವಕಾಶ ನೀಡುವುದಿಲ್ಲ' ಎಂದಿದ್ದಾರೆ.

ಒಬ್ಬ ಮಹಿಳೆಯ ಸಮಸ್ಯೆಯನ್ನು ಇಡೀ ಮಹಿಳೆಯರ ಸಮಸ್ಯೆ ಎಂದುಕೊಂಡು ಪ್ರತಿಯೊಬ್ಬ ಮಹಿಳೆಯೂ ಒಗ್ಗೂಡಿದರೆ, ಸ್ತ್ರೀವಾದಕ್ಕೆ ಹೊಸ ಚೈತನ್ಯ ಸಿಗುತ್ತದೆ ಎಂದು ಹೇಳಿದ್ದಾರೆ.

ಊರ್ವಶಿ ಕಾಲೆಳೆದ ನೆಟ್ಟಿಗರು

ಊರ್ವಶಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಕೆಲವರು ನಟಿಯ ಈ ನಡೆಯನ್ನು ಸ್ವಾಗತಿಸಿದ್ದರೆ, ಇನ್ನು ಕೆಲವರು ನಮ್ಮ ಸಮಾಜದಿಂದ ಬಳಲುತ್ತಿರುವ ಭಾರತದ ಮಹಿಳೆಯರಿಗಾಗಿ ಅವರು ಏನು ಮಾಡಿದ್ದಾರೆಂದು ತಿಳಿಯಲು ಬಯಸಿದ್ದರು.

ಊರ್ವಶಿ ಅವರ ಪೋಸ್ಟ್‌ಗೆ ವ್ಯಕ್ತಿಯೊಬ್ಬರು, 'ಸಂಪೂರ್ಣವಾಗಿ ಅಥವಾ ಭಾಗಶಃ ಇಷ್ಟಪಡುತ್ತೀರಾ?' ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, 'ಇಂಡಿಯಾ ಕಿ ವುಮೆನ್ ಕೆ ಲಿಯೇ ಹೈ ಕುಚ್ ಕರ್ ಲೋ ಪೆಹ್ಲೆ (ಮೊದಲು ಭಾರತದ ಮಹಿಳೆಯರಿಗಾಗಿ ಏನಾದರೂ ಮಾಡಿ)' ಎಂದಿದ್ದಾರೆ.

ಇನ್ನು ಹಲವರು ಕಮೆಂಟ್ಸ್ ವಿಭಾಗದಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಹೆಸರನ್ನು ಬರೆದು ನಟಿಯನ್ನು ಲೇವಡಿ ಮಾಡಿದ್ದಾರೆ.

ಸರಿಯಾಗಿ ಹಿಜಾಬ್ ಧರಿಸಿರಲಿಲ್ಲ ಎಂದು ಆರೋಪಿಸಿ ಮಹ್ಸಾ ಅಮಿನಿ ಅವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲೇ ಅವರು ಮೃತಪಟ್ಟಿದ್ದರು. ಮಹ್ಸಾ ಅವರನ್ನು ಪೊಲೀಸರು ತೀವ್ರ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಆರೋಪಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ.

SCROLL FOR NEXT