ಬಾಲಿವುಡ್

ಆದಿಪುರುಷ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಚಿತ್ರ ನಿಷೇಧಿಸುವಂತೆ ಪ್ರಧಾನಿಗೆ ಸಿನಿ ವರ್ಕರ್ಸ್ ಅಸೋಸಿಯೇಷನ್ ಪತ್ರ!

Srinivasamurthy VN

ನವದೆಹಲಿ: ನಟ ಪ್ರಭಾಸ್ ನಟನೆ ಆದಿಪುರುಷ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಚಿತ್ರ ನಿಷೇಧಿಸುವಂತೆ ಸಿನಿ ವರ್ಕರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಬಹಿರಂಗ ಪತ್ರ ಬರೆದಿದೆ.

ಹೌದು.. ನಟ ಪ್ರಭಾಸ್ ಮತ್ತು ತಾನಾಜಿ ಖ್ಯಾತಿಯ ನಿರ್ದೇಶಕ ಓಂ ರಾವತ್ ಜೋಡಿಯ ಆದಿ ಪುರುಷ್ ಚಿತ್ರ ಬಿಡುಗಡೆಯಾದ ಬಳಿಕ ಸಾಕಷ್ಟು ವಿವಾದಕ್ಕೆ ತುತ್ತಾಗಿದ್ದು, ಚಿತ್ರದ ಮೇಕಿಂಗ್, VFX ಮತ್ತು ಪಾತ್ರಗಳ ವಿಚಾರವಾಗಿ ಆದಿ ಪುರುಷ್ ಚಿತ್ರ ಅಭಿಮಾನಿಗಳ ವ್ಯಾಪಕ ಆಕ್ರೋಶ ಎದುರಿಸುತ್ತಿದೆ.

ಹೀಗಿರುವಾಗಲೇ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಚಿತ್ರವನ್ನು ಕೂಡಲೇ ನಿಷೇಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದೆ.

ಪತ್ರದಲ್ಲಿ, "ಆದಿಪುರುಷ್ ಚಿತ್ರ ಸನಾತನ ಧರ್ಮ ಮತ್ತು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದು, ಚಿತ್ರದಲ್ಲಿ ಶ್ರೀರಾಮನ ಚಾರಿತ್ರ್ಯ ಹರಣ ಮಾಡಲಾಗಿದೆ. ರಾಮ ಮಾತ್ರವಲ್ಲದೇ ರಾವಣನ ಪಾತ್ರವನ್ನೂ ವಿಡಿಯೋ ಗೇಮ್ ಗಳಂತೆ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿನ ಸಂಭಾಷಣೆ ಭಾರತ ಮಾತ್ರವಲ್ಲದೇ ಇಡೀ ಜಗತ್ತಿನ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದೆ.

ಹೀಗಾಗಿ ಚಲನಚಿತ್ರ ಪ್ರದರ್ಶನವನ್ನು ಕೂಡಲೇ ನಿಲ್ಲಿಸಬೇಕು ಮತ್ತು ಭವಿಷ್ಯದಲ್ಲಿ ಥಿಯೇಟರ್‌ಗಳು ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಆದಿಪುರುಷ ಚಿತ್ರ ಪ್ರದರ್ಶನವನ್ನು ತಡೆಹಿಡಿಯಬೇಕು ಎಂದು ಆದೇಶಿಸುವಂತೆ ವಿನಂತಿಸಿದೆ. ಅಂತೆಯೇ ನಿರ್ದೇಶಕ ಓಂ ರಾವುತ್, ಸಂಭಾಷಣೆ ಬರಹಗಾರ ಮನೋಜ್ ಮಂತಾಶಿರ್ ಶುಕ್ಲಾ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಆಗ್ರಹಿಸಿದೆ. 

SCROLL FOR NEXT