ನವದೆಹಲಿ: ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ತೆಲುಗಿನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ನಟನೆಯ ಅಯಾನ್ ಮುಖರ್ಜಿ ನಿರ್ದೇಶನದ 'ವಾರ್ 2' ಚಿತ್ರವು ಬಿಡುಗಡೆಯಾದ ಎರಡನೇ ದಿನ ಗಲ್ಲಾಪೆಟ್ಟಿಗೆಯಲ್ಲಿ ಗಮನಾರ್ಹ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ವಾರ್ 2 ಚಿತ್ರವು 2ನೇ ದಿನದಂದು ಎಲ್ಲಾ ಭಾಷೆಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 56.5 ಕೋಟಿ ರೂ. ಸಂಗ್ರಹಿಸಿದೆ. ಮೊದಲ ದಿನ 51.5 ಕೋಟಿ ರೂ. ಗಳಿಸಿದ್ದ ಚಿತ್ರದ ಎರಡನೇ ದಿನದ ಗಳಿಕೆ ಶೇ 10 ರಷ್ಟು ಹೆಚ್ಚಾಗಿದೆ.
ಮೊದಲ ದಿನ ಹಿಂದಿಯಲ್ಲಿ ₹29 ಕೋಟಿ, ತೆಲುಗಿನಲ್ಲಿ ₹ 22.25 ಕೋಟಿ ಮತ್ತು ತಮಿಳಿನಲ್ಲಿ ₹0.25 ಕೋಟಿ ಗಳಿಕೆ ಕಂಡಿತ್ತು. ಇದೀಗ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿ ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 100 ಕೋಟಿ ರೂ.ಗಳನ್ನು ದಾಟಿದೆ.
2ನೇ ದಿನದಂದು, ವಾರ್ 2 ರ ಹಿಂದಿ ಅವತರಣಿಕೆಯು ಒಟ್ಟಾರೆ ಶೇ 51.52 ರಷ್ಟು ಆಕ್ಯುಪೆನ್ಸಿ ದರವನ್ನು ದಾಖಲಿಸಿದೆ ಮತ್ತು ಸುಮಾರು 40 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
ಚೆನ್ನೈನಲ್ಲಿ ಶೇ 94.75 ರಷ್ಟು ಜನದಟ್ಟಣೆಯೊಂದಿಗೆ ಮುಂಚೂಣಿಯಲ್ಲಿತ್ತು. ಹೈದರಾಬಾದ್‌ನಲ್ಲಿ ಶೇ 80 ಮತ್ತು ಲಕ್ನೋದಲ್ಲಿ ಶೇ 73.75 ರಷ್ಟು ಜನದಟ್ಟಣೆಯೊಂದಿಗೆ ನಂತರದ ಸ್ಥಾನದಲ್ಲಿದೆ.
ತೆಲುಗು ಮಾತನಾಡುವ ಪ್ರದೇಶಗಳಲ್ಲಿ, ಈ ಚಿತ್ರವು ಒಟ್ಟಾರೆಯಾಗಿ ಶೇ 68.99 ರಷ್ಟು ಗಳಿಕೆ ಕಂಡಿದೆ. ತಮಿಳು ಆವೃತ್ತಿಯು ಶೇ 54.85 ರಷ್ಟು ಗಳಿಕೆಯೊಂದಿಗೆ ಹಿಂದಿ ಬೆಲ್ಟ್ ಅನ್ನು ಮೀರಿಸಿದೆ.
ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ಆರನೇ ಚಿತ್ರವಾದ ವಾರ್ 2ನಲ್ಲಿ, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಎರಡು ದಿನಗಳ ಒಟ್ಟು ಗಳಿಕೆ ಈಗ 108 ಕೋಟಿ ರೂ.ಗಳಾಗಿದ್ದು, ಅದೇ ಸಮಯದಲ್ಲಿ 77.77 ಕೋಟಿ ರೂ. ಗಳಿಕೆ ಕಂಡಿದ್ದ ಹಿಂದಿನ ವಾರ್ ಸಿನಿಮಾವನ್ನು ಮೀರಿಸಿದೆ.