ಪುಣೆ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಅರ್ಶದ್ ವಾರ್ಸಿ ಅಭಿನಯದ ಜಾಲಿ ಎಲ್ಎಲ್ ಬಿ 3 ಚಿತ್ರ ಬಿಡುಗಡೆಗೂ ಮುನ್ನವೇ ಸಂಕಷ್ಟ ಎದುರಾಗಿದ್ದು, ಇಬ್ಬರೂ ನಟರಿಗೆ ಪುಣೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ವಕೀಲ ವಾಜೇದ್ ರಹೀಮ್ ಖಾನ್ ಸಲ್ಲಿಸಿದ ಅರ್ಜಿಯ ಮೇರೆಗೆ ಪುಣೆಯ ಸಿವಿಲ್ ನ್ಯಾಯಾಲಯವು ನಟರಾದ ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ ಮತ್ತು ನಿರ್ದೇಶಕ ಸುಭಾಷ್ ಕಪೂರ್ ಅವರಿಗೆ ಅವರ ಮುಂಬರುವ ಚಿತ್ರ ಜಾಲಿ ಎಲ್ ಎಲ್ ಬಿ 3 ಗೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದೆ. ನ್ಯಾಯಾಲಯವು ಮೂವರು ನಟರು ಅಕ್ಟೋಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಿದೆ.
ವಕೀಲ ವಾಜೇದ್ ರಹೀಮ್ ಖಾನ್ ಅವರ ಪ್ರಕಾರ, ಜಾಲಿ LLB 3 ಚಿತ್ರವು ಕಾನೂನು ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತದೆ ಮತ್ತು ನ್ಯಾಯಾಲಯದ ಕಲಾಪಗಳನ್ನು ಅಗೌರವಿಸುತ್ತದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಂತರ ಈ ಕ್ರಮ ಕೈಗೊಂಡಿದೆ.
'ನ್ಯಾಯಾಧೀಶರ 'ಮಾಮಾ' ಎಂದು ಕರೆಯಲಾಗಿದೆ'
ಇನ್ನು ಅರ್ಜಿಯಲ್ಲಿ, ಚಿತ್ರತಂಡ ಕಾನೂನು ವೃತ್ತಿಯನ್ನು ನಕಾರಾತ್ಮಕ ಬೆಳಕಿನಲ್ಲಿ ಚಿತ್ರಿಸುವುದನ್ನು ಆಕ್ಷೇಪಿಸಿದ್ದಾರೆ. ನ್ಯಾಯಾಧೀಶರನ್ನು "ಮಾಮಾ" ಎಂದು ಕರೆಯುವ ದೃಶ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿದ ವಕೀಲ ರಹೀಂ ಖಾನ್ ಅವರು, "ವಕೀಲರ ಬಗ್ಗೆ ಗೌರವ ಇರಬೇಕು. ಅದಕ್ಕಾಗಿಯೇ ನಾನು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ವಕೀಲರು ಮತ್ತು ನ್ಯಾಯಾಧೀಶರ ಬಗ್ಗೆ ಅವರು ತೋರಿಸಿರುವ ಎಲ್ಲವೂ ತಪ್ಪು... ನಾನು ಪುಣೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಮತ್ತು ನ್ಯಾಯಾಲಯವು ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ ಮತ್ತು ನಿರ್ದೇಶಕರು ಹಾಜರಿರಬೇಕು ಎಂದು ಕೇಳಿದೆ ಎಂದು ಹೇಳಿದ್ದಾರೆ.
ಅಂದಹಾಗೆ ಈ ದೂರು ಮೂಲತಃ 2024 ರಲ್ಲಿ ಚಿತ್ರದ ಮೊದಲ ಟೀಸರ್ ಬಿಡುಗಡೆಯಾದ ನಂತರ ದಾಖಲಾಗಿತ್ತು ಎನ್ನಲಾಗಿದೆ.