ಮುಂಬೈ: ದಾಂಪತ್ಯದಲ್ಲಿ ಬಿರುಕು ಮೂಡಿದೆ, ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದರ ನಡುವೆಯೇ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ನಾವಿಬ್ಬರೂ ಒಟ್ಟಾಗಿದ್ದೇವೆ. ನಮ್ಮನ್ನು ಬೇರೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಅಹುಜಾ ಹೇಳಿದ್ದಾರೆ. ಮುಂಬೈ ಉಪನಗರದಲ್ಲಿರುವ ತಮ್ಮ ಮನೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿರುವ ದಂಪತಿ, ಒಟ್ಟಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅಹುಜಾ, 'ಇಂದು ನಮ್ಮನ್ನು ಹೀಗೆ, ಒಟ್ಟಿಗೆ ನೋಡುತ್ತಿರುವುದು ಮಾಧ್ಯಮಗಳ ಕಪಾಳಕ್ಕೆ ಹೊಡೆದಂತಾಗಿಲ್ಲವೇ? ಏನಾದರೂ ಸಮಸ್ಯೆ ಇದ್ದಿದ್ದರೆ ಇಷ್ಟು ಹತ್ತಿರ ಇರುತ್ತಿದ್ದೆವೆಯೇ?
ಯಾರೂ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ. ನನ್ನ ಗೋವಿಂದ ನನ್ನವನು. ನಾವಾಗಿಯೇ ಏನಾದರೂ ಹೇಳುವವರೆಗೆ ದಯವಿಟ್ಟು ಏನೇನೋ ಬರೆಯಬೇಡಿ' ಎಂದು ಹೇಳಿದ್ದಾರೆ.
ಗೋವಿಂದ ಮತ್ತು ಸುನೀತಾ ಅಹುಜಾ ನಡುವಿನ ವಿಚ್ಛೇದನದ ವದಂತಿ ಮಧ್ಯೆ ಅವರಿಬ್ಬರು ಗಣೇಶ ಚತುರ್ಥಿಯಂದು ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಜತೆಯಾಗಿ ಪೂಜೆ ಮಾಡಿದ್ದಾರೆ. ಅವರ ಈ ಕೆಲವು ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅವರಿಬ್ಬರು ಒಂದೇ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡು ವದಂತಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ನಟ ಗೋವಿಂದ ಕುರ್ತಾ ಧರಿಸಿದ್ದರೆ, ಸುನೀತಾ ಸೀರೆಯಲ್ಲಿ ಸುಂದರವಾಗಿ ಕಂಡಿದ್ದಾರೆ. ಈ ಮೂಲಕ ವಿಚ್ಛೇದನದ ವದಂತಿ ಬಳಿಕ ಇವರಿಬ್ಬರು ಒಂದಾಗಿದ್ದಾರಾ ಎಂಬ ಗೊಂದಲ ಉಂಟಾಗಿದೆ.
ಸುನೀತಾ ಅಹುಜಾ ಹಾಗೂ ನಟ ಗೋವಿಂದ ಹಿಂದು ವಿವಾಹ ಕಾಯ್ದೆ ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಈ ಹಿಂದೆ ವೈರಲ್ ಆಗಿತ್ತು. ಮೇ 25ರಂದು ನ್ಯಾಯಾಲಯ ಗೋವಿಂದ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಬಳಿಕ ಇಬ್ಬರೂ ಮಾತುಕತೆಯ ಮೂಲಕ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯೂ ಹರಿದಾಡಿತ್ತು. ಆದರೆ ಈ ಸುದ್ದಿಯನ್ನು ಗೋವಿಂದ ಮ್ಯಾನೇಜರ್ ಅಲ್ಲಗಳೆದಿದ್ದರು.
ಗೋವಿಂದ ಹಾಗೂ ಅಹುಜಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಯಶವರ್ಧನ್ ಅಹುಜಾ ಮತ್ತು ಮಗಳು ಟೀನಾ ಅಹುಜಾ.