ನವದೆಹಲಿ: ಆದಿತ್ಯ ಧಾರ್ ನಿರ್ದೇಶನದ ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದು, ಬಿಡುಗಡೆಯಾದಾಗಿನಿಂದ ಹೆಚ್ಚಿನ ಗಮನ ಸೆಳೆಯುತ್ತಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಚಿತ್ರವನ್ನು ಹೊಗಳಿದ್ದು, ಇದು ಬಾಲಿವುಡ್‌ನಲ್ಲಿ ಹೆಚ್ಚುತ್ತಿರುವ ದಕ್ಷಿಣ ಭಾರತದ ಚಿತ್ರಗಳ ಆಕ್ರಮಣವನ್ನು ಹಿಮ್ಮೆಟ್ಟಿದೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಾಲಿವುಡ್ ಮೇಲಿನ ದಕ್ಷಿಣದ ಚಿತ್ರಗಳ ಆಕ್ರಮಣದ ಫೈರ್‌ಬಾಲ್ ಅನ್ನು ಆದಿತ್ಯ ಧಾರ್ ನಿರ್ದೇಶನದ ಚಿತ್ರವು ಎಡಗಾಲಿನಿಂದ ಹಿಂದಕ್ಕೆ ಒದೆದಿದೆ, ಅದರ ಹೆಸರು ಧುರಂಧರ್ ಮತ್ತು ಈಗ ಅವರ ಬಲಗಾಲು ಧುರಂಧರ್ 2 ಮೂಲಕ ಸಿದ್ಧವಾಗುತ್ತಿದೆ... ಎರಡನೇ ಭಾಗದಲ್ಲಿ ನಾನು ನೋಡಿದಂತೆ, ಮೊದಲನೆಯದು ಅವರನ್ನು ಹೆದರಿಸಿದರೆ, ಎರಡನೆಯದು ಅವರನ್ನು ಭಯಭೀತಗೊಳಿಸುತ್ತದೆ' ಎಂದು ಅವರು ಬರೆದಿದ್ದಾರೆ.
ಎನ್‌ಡಿಟಿವಿ ಜೊತೆಗಿನ ಮಾತುಕತೆಯಲ್ಲಿ ರಾಮ್ ಗೋಪಾಲ್ ವರ್ಮಾ, ಚಿತ್ರದ ತಮ್ಮ ನೆಚ್ಚಿನ ದೃಶ್ಯವನ್ನು ಬಹಿರಂಗಪಡಿಸಿದರು. ಅಲ್ಲಿ ರೆಹಮಾನ್ ದಕೈತ್ (ಅಕ್ಷಯ್ ಖನ್ನಾ) ತಾನು (ರಣವೀರ್ ಸಿಂಗ್ ಪಾತ್ರ ಹಮ್ಜಾ) ದೇಶದ್ರೋಹಿ ಎಂದು ಅರಿತುಕೊಳ್ಳುತ್ತಾನೆ ಮತ್ತು ಅದು ಕಾರಿನಲ್ಲಿ ಹೊಡೆದಾಟದ ಸನ್ನಿವೇಶಕ್ಕೆ ಕಾರಣವಾಗುತ್ತದೆ ಎಂದರು.
ಕಂದಹಾರ್ ವಿಮಾನ ಅಪಹರಣ, 2001ರ ಸಂಸತ್ತಿನ ದಾಳಿ ಮತ್ತು 26/11 ಮುಂಬೈ ದಾಳಿಗಳಂತಹ ಭೌಗೋಳಿಕ ಮತ್ತು ಭಯೋತ್ಪಾದಕ ಘಟನೆಗಳ ಹಿನ್ನೆಲೆಯಲ್ಲಿ ನಡೆದ ರಹಸ್ಯ ಗುಪ್ತಚರ ಕಾರ್ಯಾಚರಣೆಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ.
ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್ ಮಾಧವನ್, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವು ಡಿಸೆಂಬರ್ 5 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 2026ರ ಮಾರ್ಚ್ 19 ರಂದು ಚಿತ್ರದ ಎರಡನೇ ಭಾಗ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ.