ಮುಂಬೈ: ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರ ಬಾಕ್ಸಾಫೀಸ್ ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದ್ದು, ಬಿಡುಗಡೆಯಾದ 4 ದಿನಗಳಲ್ಲೇ ಚಿತ್ರ ಭರ್ಜರಿ ಕಲೆಕ್ಷನೆ ಮಾಡುತ್ತಿದೆ.
ಖ್ಯಾತ ಬಾಕ್ಸಾಫೀಸ್ ವಿಶ್ಲೇಷಕ ತರಣ್ ಆದರ್ಶ್ ಸೋಮವಾರ ಚಿತ್ರದ ಗಳಿಕೆ ಕುರಿತು ಟ್ವೀಟ್ ಮಾಡಿದ್ದು, 'ಛಾವಾ' ಚಿತ್ರ ಪ್ರದರ್ಶನ ಧಮಕೇದಾರ್, ಜಬಾರ್ದಸ್ತ್ ಆಗಿದೆ. ಛಾವಾ ಭಾನುವಾರ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆ ದಾಖಲಿಸಿದ್ದು, 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಅದ್ಭುತ ಆರಂಭಿಕ ವಾರಾಂತ್ಯ ದಾಖಲಿಸಿದೆ... ಎಲ್ಲಾ *ಪೂರ್ವ-ಬಿಡುಗಡೆ* ಭವಿಷ್ಯವಾಣಿಗಳ ನಿರೀಕ್ಷೆಯನ್ನೂ ಮೀರಿ ಚಿತ್ರ ಮುನ್ನುಗ್ಗುತ್ತಿದೆ. ಮಹಾರಾಷ್ಟ್ರದಲ್ಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಎಲ್ಲ ದಾಖಲೆಗಳನ್ನು ಮುರಿದು ಚಿತ್ರ ಮುನ್ನುಗ್ಗುತ್ತಿದೆ ಎಂದು ಹೇಳಿದ್ದಾರೆ.
ಅಂತೆಯೇ 'ಛಾವಾ ಈಗ ನಿರ್ಣಾಯಕ ಸೋಮವಾರದಿಂದ ಗುರುವಾರದ ಅವಧಿಯಲ್ಲಿ ತನ್ನ ವೇಗವನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಅವರು ಬಾಕ್ಸ್ ಆಫೀಸ್ ಗಳಿಕೆ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಛಾವಾ ಬಿಡುಗಡೆಯಾದ ಶುಕ್ರವಾರ ಚಿತ್ರ 33.10 ಕೋಟಿ ರೂ ಗಳಿಕೆ ಮಾಡಿತ್ತು. ನಂತರ ಶನಿವಾರ 39.30 ಕೋಟಿ ರೂ ಗಳಿಕೆ ಮಾಡಿತ್ತು. ಭಾನುವಾರ ಛಾವಾ ನಿರೀಕ್ಷೆ ಮೀರಿ 49.03 ಕೋಟಿ ಗಳಿಕೆ ಮಾಡಿದೆ. ಮಹಾರಾಷ್ಟ್ರದಲ್ಲಿ ಛಾವಾ ಒಟ್ಟು 121.43 ಕೋಟಿ ರೂ ಗಳಿಸಿದೆ ಎಂದು ಹೇಳಿದ್ದಾರೆ.
ಮತ್ತೋರ್ವ ಬಾಕ್ಸಾಫೀಸ್ ತಜ್ಞ @Edwerd_Willy ಕೂಡ ಚಿತ್ರದ ಗಳಿಕೆ ಕುರಿತು ಮಾಹಿತಿ ನೀಡಿದ್ದು, ವಿಕ್ಕಿ ಕೌಶಲ್ ಚಿತ್ರ ಭಾರತ, ಅಮೆರಿಕ ಸೇರಿದಂತೆ ವಿಶ್ವಾದ್ಯಂತ ಈ ವರೆಗೂ 16.1 ಮಿಲಿಯನ್ ಡಾಲರ್ ಅಂದರೆ 165 ಕೋಟಿ ರೂ ಗಳಿಸಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 14ರಂದು ಬಿಡುಗಡೆಯಾಗಿದ್ದ ‘ಛಾವ’ ಸಿನಿಮಾದಲ್ಲಿ ಛತ್ರಪತಿ ಶಂಭಾಜಿ ಮಹಾರಾಜ್ ಜೀವನದ ಕಥೆ ಇದೆ. ಆ ಪಾತ್ರವನ್ನು ವಿಕ್ಕಿ ಕೌಶಲ್ ಅವರು ನಿಭಾಯಿಸಿದ್ದಾರೆ. ಶಂಭಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮೆಡಾಕ್ ಫಿಲ್ಮ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದ್ದು, ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.