ಮುಂಬೈ: ನಟಿ ಶೆಫಾಲಿ ಜರಿವಾಲಾ (Shefali Jariwala) ಅವರ ಪತಿ ಪರಾಗ್ ತ್ಯಾಗಿ (Parag Tyagi) ತಮ್ಮ ಖಾಸಗಿ ಜೀವನದಲ್ಲಿ ಮೂಗು ತೂರಿಸಬೇಡಿ ಎಂದು ಪಪರಾಜಿಗಳಿಗೆ ಕೈ ಮುಗಿದು ಬೇಡಿಕೊಂಡಿದ್ದಾರೆ.
ಬಿಗ್ ಬಾಸ್ 13ರ ಸ್ಪರ್ಧಿ ಮತ್ತು ಕಾಂಟಾ ಲಗಾ ಹಾಡಿನ ಹಿಟ್ ರೀಮಿಕ್ಸ್ ಹಾಡಿಗೆ ಹೆಸರುವಾಸಿಯಾಗಿದ್ದ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ತಡರಾತ್ರಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದು, ಅವರ ಹಠಾತ್ ನಿಧನದ ಸುದ್ದಿ ಮನರಂಜನಾ ಉದ್ಯಮವನ್ನು ಆಘಾತಕ್ಕೀಡು ಮಾಡಿದೆ. ಶನಿವಾರ (ಜೂನ್ 28), ಶೆಫಾಲಿ ಜರಿವಾಲಾ ಅವರ ಪತಿ, ನಟ ಪರಾಗ್ ತ್ಯಾಗಿ ಆಸ್ಪತ್ರೆಯ ಹೊರಗೆ ಕಾಣಿಸಿಕೊಂಡರು.
ಈ ವೇಳೆ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಹಲವಾರು ವೀಡಿಯೊಗಳ ಕುರಿತಂತೆ ಪರಾಗ್ ತ್ಯಾಗಿ ಅವರು ಅಸಮಾಧಾನಗೊಂಡಿದ್ದು, ತಮ್ಮ ಕಾರಿನಿಂದ ಇಳಿಯುತ್ತಲೇ ಅವರನ್ನು ಸುತ್ತುವರೆದ ಪಪರಾಜಿಗಳನ್ನು ಉದ್ದೇಶಿಸಿ 'ಖಾಸಗಿ ಜೀವನದಲ್ಲಿ ಮೂಗು ತೂರಿಸಬೇಡಿ.. ತಮ್ಮ ಖಾಸಗಿತನವನ್ನು ಗೌರವಿಸಿ' ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
ಒಂದು ವೀಡಿಯೊದಲ್ಲಿ, ಅವರು ಛಾಯಾಗ್ರಾಹಕರಿಗೆ ಕೈಮುಗಿದು "ಐಸಾ ಮತ್ ಕರೋ ನಾ ತುಮ್ ಲೋಗ್" (ದಯವಿಟ್ಟು ನೀವು ಹಾಗೆ ಮಾಡಬೇಡಿ) ಎಂದು ಕೇಳುತ್ತಿರುವುದು ಕೇಳಿಬರುತ್ತಿದೆ.
ಶೆಫಾಲಿ ಜರಿವಾಲಾ ಶುಕ್ರವಾರ ತಡರಾತ್ರಿ ತಮ್ಮ ಮುಂಬೈ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರ ಪತಿ ಪರಾಗ್ ತ್ಯಾಗಿ ನಟಿಯನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಆಕೆ ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಹೊರಗಿನ ದೃಶ್ಯಗಳಲ್ಲಿ ಪರಾಗ್ ಕಣ್ಣೀರು ಸುರಿಸುತ್ತಿರುವುದು ಕಂಡುಬಂದಿದೆ. ಶೆಫಾಲಿ ಸಾವಿನ ಕುರಿತು ಕುಟುಂಬ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಯಾರು ಶೆಫಾಲಿ ಜರಿವಾಲಾ
2002 ರಲ್ಲಿ ಬಿಡುಗಡೆಯಾದ ಕಾಂತಾ ಲಗಾ ಎಂಬ ಸಂಗೀತ ವಿಡಿಯೋ ಮೂಲಕ ಶೆಫಾಲಿ ಮೊದಲು ಖ್ಯಾತಿ ಗಳಿಸಿದರು. ಇದು ಭಾರಿ ಹಿಟ್ ಆಯಿತು. ನಂತರ ಅವರು ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಮುಜ್ಸೆ ಶಾದಿ ಕರೋಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ನಂತರದ ವರ್ಷಗಳಲ್ಲಿ, ಅವರು ದೂರದರ್ಶನದಲ್ಲಿ ಕಾಣಿಸಿಕೊಂಡರು. ತಮ್ಮ ಪತಿ ಪರಾಗ್ ತ್ಯಾಗಿ ಅವರೊಂದಿಗೆ ನಾಚ್ ಬಲಿಯೇ ಎಂಬ ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು ಮತ್ತು ನಂತರ ಬಿಗ್ ಬಾಸ್ 13 ಮನೆಗೆ ಪ್ರವೇಶಿಸಿದರು. ಬಿಗ್ ಬಾಸ್‌ಗೆ ಅವರ ಪ್ರವೇಶವು ಗಮನ ಸೆಳೆಯಿತು, ವಿಶೇಷವಾಗಿ ಸಹ ಸ್ಪರ್ಧಿ ಮತ್ತು ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ ಅವರೊಂದಿಗಿನ ಹಿಂದಿನ ಸಂಬಂಧದಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಇಬ್ಬರೂ ಒಂದು ದಶಕದ ಹಿಂದೆ ಡೇಟಿಂಗ್ ಮಾಡಿದ್ದರು.
ಕನ್ನಡದಲ್ಲೂ ನಟಿಸಿದ್ದ ನಟಿ
ಇನ್ನು ಇದೇ ಶೆಫಾಲಿ ಜರಿವಾಲಾ ಅವರು ಕನ್ನಡದ ಚಿತ್ರವೊಂದರಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದರು. ಪುನೀತ್ ರಾಜ್ ಕುಮಾರ್, ಲೂಸ್ ಮಾದ ಯೋಗಿ, ಶ್ರೀನಗರ ಕಿಟ್ಟಿ ಅಭಿನಯದ ಹುಡುಗರು ಚಿತ್ರದ 'ನಾ ಬೋರ್ಡು ಇಲ್ಲದ ಹತ್ತಿ ಬಂದ ಚೋಕರಿ' ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು.