ಮುಂಬೈ: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ, ಅವರಿಂದ ವಿಚ್ಛೇದನ ಪಡೆದಿರುವ ಸೈರಾ ಬಾನು ತಮ್ಮ ಗೌಪ್ಯತೆ ಕಾಪಾಡುವಂತೆ ಮತ್ತು ತಮ್ಮನ್ನು 'ಮಾಜಿ ಪತ್ನಿ' ಎಂದು ಕರೆಯಬೇಡಿ ಎಂದು ಒತ್ತಾಯಿಸಿದ್ದಾರೆ.
ಭಾನುವಾರ, ಧ್ವನಿ ನೋಟ್ ಹಂಚಿಕೊಂಡಿರುವ ಸೈರಾ, 'ಅಸ್ಸಲಾಮ್‌ವಾಲೇಕುಮ್. ನಾನು ಅವರಿಗೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಆಂಜಿಯೋಗ್ರಫಿ ಮಾಡಲಾಗಿದೆ ಎಂಬ ಸುದ್ದಿ ನನಗೆ ತಿಳಿಯಿತು. ಅಲ್ಲಾಹನ ದಯೆಯಿಂದ ಅವರು ಈಗ ಚೆನ್ನಾಗಿದ್ದಾರೆ, ಅವರಿಗೆ ಏನೂ ಸಮಸ್ಯೆ ಇಲ್ಲ' ಎಂದಿದ್ದಾರೆ.
'ನಾವು ಇನ್ನೂ ಅಧಿಕೃತವಾಗಿ ವಿಚ್ಛೇದನ ಪಡೆದಿಲ್ಲ. ನಾವಿನ್ನೂ ಗಂಡ ಹೆಂಡತಿ ಎಂದು ನಾನು ನಿಮ್ಮೆಲ್ಲರಿಗೂ ಹೇಳಲು ಬಯಸುತ್ತೇನೆ. ಕಳೆದ ಎರಡು ವರ್ಷಗಳಿಂದ ನಮ್ಮಿಬ್ಬರಿಗೂ ಸರಿಹೊಂದದ ಕಾರಣ ನಾವು ಬೇರೆಯಾಗಿದ್ದೇವೆ. ನಾನು ಅವರ ಮೇಲೆ ಹೆಚ್ಚು ಒತ್ತಡ ಹೇರಲು ಬಯಸಲಿಲ್ಲ. ಆದರೆ, ದಯವಿಟ್ಟು 'ಮಾಜಿ ಪತ್ನಿ' ಎಂದು ಹೇಳಬೇಡಿ. ನಾವು ಕೇವಲ ಬೇರೆಯಾಗಿದ್ದೇವೆ ಅಷ್ಟೆ. ಆದರೆ, ನನ್ನ ಪ್ರಾರ್ಥನೆಗಳು ಯಾವಾಗಲೂ ಅವರೊಂದಿಗೆ ಇರುತ್ತವೆ. ನಾನು ಎಲ್ಲರಿಗೂ, ವಿಶೇಷವಾಗಿ ಅವರ ಕುಟುಂಬಕ್ಕೆ ಒಂದು ವಿಷಯ ಹೇಳಲು ಬಯಸುತ್ತೇನೆ. ದಯವಿಟ್ಟು ಅವರ ಮೇಲೆ ಹೆಚ್ಚು ಒತ್ತಡ ಹೇರಬೇಡಿ ಮತ್ತು ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಧನ್ಯವಾದಗಳು, ಅಲ್ಲಾ ಹಫೀಜ್' ಎಂದಿದ್ದಾರೆ.
ಇದಕ್ಕೂ ಮುನ್ನ, ಶನಿವಾರ ರಾತ್ರಿ 'ನಿರ್ಜಲೀಕರಣ'ದಿಂದಾಗಿ ರೆಹಮಾನ್ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಲಂಡನ್‌ನಿಂದ ಹಿಂತಿರುಗಿದಾಗ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ನಿಗದಿತ ಆರೋಗ್ಯ ತಪಾಸಣೆ ಮಾಡಿ ಕೆಲ ಹೊತ್ತಿನಲ್ಲಿ ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.