ಮುಂಬೈ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯ ಗಂಭೀರವಾಗಿದ್ದು, ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ (ವೆಂಟಿಲೇಟರ್) ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ 89 ವರ್ಷದ ನಟ ಧರ್ಮೇಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳೆದ ವಾರದ ಆರಂಭದಲ್ಲಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಒಂದೇ ವಾರದ ಅಂತರದಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಆರೋಗ್ಯ ಗಂಭೀರವಾಗಿದ್ದು, ಹೀಗಾಗಿ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದೆ.
ಒಂದು ವಾರದ ಹಿಂದೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಧರ್ಮೇಂದ್ರ ಏಪ್ರಿಲ್‌ನಲ್ಲಿ ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
1960 ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಧರ್ಮೇಂದ್ರ, 1960 ರ ದಶಕದಲ್ಲಿ ಅನ್ಪದ್, ಬಂದಿನಿ, ಅನುಪಮಾ ಮತ್ತು ಆಯಾ ಸಾವನ್ ಜೂಮ್ ಕೆ ನಂತಹ ಚಿತ್ರಗಳಲ್ಲಿ ಸಾಮಾನ್ಯ ವ್ಯಕ್ತಿಯ ಪಾತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ಅವರು ಶೋಲೆ, ಧರಮ್ ವೀರ್, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಹೀರೋ ಆಗಿ ಭಡ್ತಿ ಪಡೆದಿದ್ದರು.
ಧರ್ಮೇಂದ್ರ ಕೊನೆಯ ಬಾರಿಗೆ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿದ ತೇರಿ ಬಾತೋನ್ ಮೇ ಐಸಾ ಉಲ್ಜಾ ಜಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಸಿನಿಮೀಯ ಪಾತ್ರ ಇಕ್ಕಿಸ್, ಇದರಲ್ಲಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ.
ಅಂತೆಯೇ ನಟ ಧರ್ಮೇಂದ್ರ ಇದೇ ಡಿಸೆಂಬರ್ 8, 2025 ರಂದು 90 ವರ್ಷಕ್ಕೆ ಕಾಲಿಡಲಿದ್ದಾರೆ.