ಮುಂಬೈ: ನಿವಾಸದಲ್ಲಿಯೇ ಚಿಕಿತ್ಸೆ ಮುಂದುವರಿಸುವುದಾಗಿ ಕುಟುಂಬಸ್ಥರು ನಿರ್ಧರಿಸಿ ವೈದ್ಯರಿಗೆ ಹೇಳಿದ ನಂತರ ಇಂದು ಬುಧವಾರ ಬೆಳಗ್ಗೆ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಹಿರಿಯ ನಟ ಧರ್ಮೇಂದ್ರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕುಟುಂಬ ಸದಸ್ಯರು ಮತ್ತು ಆಸ್ಪತ್ರೆ ಅಧಿಕಾರಿಗಳು ಬಹಿರಂಗಪಡಿಸದ ಕೆಲವು ಚಿಕಿತ್ಸೆ ಮತ್ತು ವೈದ್ಯಕೀಯ ಪರೀಕ್ಷೆಗಳಿದ್ದು ಇಂದು 89 ವರ್ಷದ ನಟ ಧರ್ಮೇಂದ್ರರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಧರ್ಮೇಂದ್ರ ಅವರನ್ನು ಬೆಳಗ್ಗೆ 7:30 ರ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕುಟುಂಬ ಸದಸ್ಯರು ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ" ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮ್ದಾನಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನಟನ ಆರೋಗ್ಯದ ಬಗ್ಗೆ ಕೇಳಿದಾಗ, ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾತ್ರ ದೃಢಪಡಿಸಬಹುದು ಎಂದು ಸಂದಾನಿ ಹೇಳಿದರು.
ಧರ್ಮೇಂದ್ರ ಅವರ ಹಿರಿಯ ಮಗ ಸನ್ನಿ ಡಿಯೋಲ್ ಅವರ ಉಪನಗರ ಜುಹುವಿನ ನಿವಾಸಕ್ಕೆ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಹೊರಡುತ್ತಿರುವುದು ಕಂಡುಬಂದಿದೆ.
ಸಾವಿನ ಸುಳ್ಳು ಸುದ್ದಿ
ಹಲವಾರು ಮಾಧ್ಯಮಗಳು ಧರ್ಮೇಂದ್ರ ಅವರ ಸಾವಿನ ಬಗ್ಗೆ ವರದಿ ಮಾಡಿದ್ದವು ಆದರೆ ಕುಟುಂಬವು ಅದನ್ನು ನಿರಾಕರಿಸಿ ಗೌಪ್ಯತೆ ಕಾಪಾಡಿಕೊಳ್ಳಲು ಸಹಕರಿಸಬೇಕೆಂದು ಮನವಿ ಮಾಡಿದ್ದರು.
ಮಾಧ್ಯಮಗಳು ಅತಿರೇಕದಲ್ಲಿದ್ದು ಸುಳ್ಳು ಸುದ್ದಿಗಳನ್ನು ಹರಡುತ್ತಿರುವಂತೆ ತೋರುತ್ತಿದೆ. ನನ್ನ ತಂದೆ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಗೌಪ್ಯತೆಯನ್ನು ನೀಡುವಂತೆ ನಾವು ಎಲ್ಲರಿಗೂ ವಿನಂತಿಸುತ್ತೇವೆ. ಅಪ್ಪನ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದು ಮಗಳು ಇಶಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಧರ್ಮೇಂದ್ರ ಅವರ ಪತ್ನಿ, ನಟಿ-ರಾಜಕಾರಣಿ ಹೇಮಾ ಮಾಲಿನಿ ಕೂಡ ಎಕ್ಸ್ ಪೋಸ್ಟ್‌ನಲ್ಲಿ ಹಿರಿಯ ನಟನ ಆರೋಗ್ಯದ ಬಗ್ಗೆ ಬೇಜವಾಬ್ದಾರಿಯುತವಾಗಿ ಮಾಧ್ಯಮಗಳು ಸುದ್ದಿ ಮಾಡಿವೆ ಎಂದು ಕಿಡಿ ಕಾರಿದ್ದರು. ಶಾರುಖ್ ಖಾನ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಆಸ್ಪತ್ರೆಯಲ್ಲಿ ಹಿರಿಯ ನಟನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.
ಬಾಲಿವುಡ್ ಶೋಮ್ಯಾನ್ ಎಂದು ಕರೆಸಿಕೊಳ್ಳುವ ಧರ್ಮೇಂದ್ರ, ಶೋಲೆ, ಧರಮ್ ವೀರ್, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್‌ನಂತಹ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಧರ್ಮೇಂದ್ರ ಕೊನೆಯದಾಗಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ (2024) ಚಿತ್ರದಲ್ಲಿ ಪರದೆಯ ಮೇಲೆ ಕಾಣಿಸಿಕೊಂಡರು.
ಅಗಸ್ತ್ಯ ನಂದಾ ಅವರೊಂದಿಗೆ ಶ್ರೀರಾಮ್ ರಾಘವನ್ ಅವರ ಇಕ್ಕಿಸ್‌ನಲ್ಲಿ ನಟಿಸುವವರಿದ್ದರು. ಇದು ಪರಮ ವೀರ ಚಕ್ರವನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ ಅರುಣ್ ಖೇತರ್ಪಾಲ್ ಅವರ ಜೀವನವನ್ನು ಆಧರಿಸಿದ ಕಥೆಯಾಗಿದೆ.