ಗಣೇಶನ ಪರಮ ಭಕ್ತೆ ಬಾಲಿವುಡ್ ನಟಿ ಆಲಿಯಾ ಭಟ್, ತಮ್ಮ ಮುಂಬೈ ಮನೆಗೆ ಗಣೇಶನ ಅದ್ಭುತ ವಿಗ್ರಹವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ಮೈಸೂರಿನ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ನಾಲ್ಕು ಅಡಿ ಎತ್ತರದ ಗಣೇಶ ವಿಗ್ರಹವನ್ನು ಸಾಂಪ್ರದಾಯಿಕ ಹೊಯ್ಸಳ ಮತ್ತು ಮೈಸೂರು ಶೈಲಿಯಲ್ಲಿ ಕೆತ್ತಲಾಗಿದೆ. ಪೀಠವು ಮೂರು ಅಡಿ ಎತ್ತರದಲ್ಲಿದೆ. ಈ ವಿಗ್ರಹ ಕೆತ್ತಲು ಸುಮಾರು ಆರು ತಿಂಗಳು ಸಮಯಾವಕಾಶ ತೆಗೆದುಕೊಂಡಿತು, ಯೋಗಿರಾಜ್ ಆಲಿಯಾ ಅವರ ದೃಷ್ಟಿಕೋನಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುವ ಒಂದು ಮೇರುಕೃತಿಯನ್ನು ರಚಿಸಿದ್ದಾರೆ ಎನ್ನಲಾಗಿದೆ.
ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಿರುವ ಅರುಣ್ ಯೋಗಿರಾಜ್ ಅವರಿಂದಲೇ ವಿಗ್ರಹ ಕೆತ್ತಿಸಬೇಕೆಂದು ಅಲಿಯಾ ಭಟ್ ಕುಟುಂಬ ನಿರ್ಧರಿಸಿತ್ತು. ಅಂತೆಯೇ ಅರುಣ್ ಯೋಗಿರಾಜ್ ಅವರನ್ನು ಮುಂಬೈಗೆ ಕರೆಸಿಕೊಂಡು ಮಾಹಿತಿ ನೀಡಿದ್ದರು. ಅದರಂತೆ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಸ್ಟಾರ್ ದಂಪತಿಯ ಮನೆಯ ವಾತಾವರಣ ನೋಡಿ, ಅಲ್ಲಿಗೆ ಸೂಕ್ತ ಎನಿಸುವ ಗಣಪತಿ ವಿಗ್ರಹ ಕೆತ್ತಿದ್ದಾರೆ.
ಆಲಿಯಾ ಭಟ್ ಅವರ ಕುಟುಂಬವು ಸೆಪ್ಟೆಂಬರ್ 17 ರಂದು ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನಡೆಸಿತು, ಇಂದು ವಿಗ್ರಹವವನ್ನು ಮುಂಬೈನಲ್ಲಿರುವ ಆಲಿಯಾ ಹೊಸ ಮನೆಗೆ ಸಾಗಿಸಲಾಗುತ್ತಿದೆ.