ಮುಂಬೈ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ 75 ನೇ ಹುಟ್ಟುಹಬ್ಬದ ನಿಮಿತ್ತ ಬಾಲಿವುಡ್ ನಟ ಅಮೀರ್ ಖಾನ್ ಶುಭ ಕೋರಿದ್ದು, ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಹೌದು.. ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ದೇಶದ ವಿವಿಧ ರಂಗಗಳ ಗಣ್ಯರು ಅವರಿಗೆ ಶುಭ ಹಾರೈಸುತ್ತಿದ್ದಾರೆ.
ಇದರ ಭಾಗವಾಗಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟ ಅಮೀರ್ ಖಾನ್ ಅವರಂತಹ ಸೆಲೆಬ್ರಿಟಿಗಳು ಪ್ರಧಾನಿ ಮೋದಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಣ್ಣ ನಗರದಿಂದ ವಿಶ್ವ ವೇದಿಕೆಗೆ ನಿಮ್ಮ ಪ್ರಯಾಣ ಸ್ಪೂರ್ತಿ ದಾಯಕ ಎಂದ ಶಾರುಖ್
ಇನ್ನು ನರೇಂದ್ರ ಮೋದಿ ಅವರಿಗೆ ಶುಭಕೋರಿದ ಬಾಲಿವುಡ್ ನಟ ಶಾರುಖ್ ಖಾನ್, 'ಇಂದು, ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ನಾನು ಅವರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ.
'ಸಣ್ಣ ನಗರದಿಂದ ವಿಶ್ವ ವೇದಿಕೆಗೆ ನಿಮ್ಮ ಪ್ರಯಾಣವು ತುಂಬಾ ಸ್ಪೂರ್ತಿದಾಯಕವಾಗಿದೆ. ಶಿಸ್ತು, ಕಠಿಣ ಪರಿಶ್ರಮ ಮತ್ತು ದೇಶಕ್ಕಾಗಿ ಸಮರ್ಪಣೆ ಈ ಪ್ರಯಾಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. 75 ನೇ ವಯಸ್ಸಿನಲ್ಲಿಯೂ ಸಹ, ನಿಮ್ಮ ಶಕ್ತಿ ನಮ್ಮ ಯುವಕರಿಗೆ ಸ್ಫೂರ್ತಿಯಾಗಿದೆ. ನೀವು ಯಾವಾಗಲೂ ಆರೋಗ್ಯವಾಗಿ ಮತ್ತು ಸಂತೋಷವಾಗಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ' ಎಂದು ಶಾರುಖ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ.
ಅಮೀರ್ ಖಾನ್ ವಿಡಿಯೋ ವೈರಲ್
ಇನ್ನು ಅದೇ ಸಮಯದಲ್ಲಿ ಮತ್ತೋರ್ವ ಬಾಲಿವುಡ್ ನಟ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಮೀರ್ ಖಾನ್ ಕೂಡ ಪ್ರಧಾನಿ ಮೋದಿಗೆ ವಿಡಿಯೋ ಸಂದೇಶ ಕಳುಹಿಸಿದ್ದು, ವಿಶೇಷ ಎಂದರೆ ಅಮೀರ್ ಖಾನ್ ಈ ವಿಡಿಯೋ ಮಾಡುವ ಸಂದರ್ಭದಲ್ಲಿ ಹಣೆಗೆ ತಿಲಕ ಇಟ್ಟು ಕೈಯಲ್ಲಿ ಕೆಂಪುದಾರ ಕಟ್ಟಿಕೊಂಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಅಮೀರ್ ಖಾನ್ ಹೇಳಿದ್ದೇನು?
ವಿಡಿಯೋ ಸಂದೇಶದಲ್ಲಿ, "ಪ್ರಧಾನ ಮಂತ್ರಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳು ಸರ್. ಭಾರತದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಯಾವಾಗಲೂ ಸ್ಮರಣೀಯವಾಗಿರುತ್ತದೆ. ಈ ಸಂತೋಷದ ಸಂದರ್ಭದಲ್ಲಿ, ನೀವು ದೀರ್ಘಕಾಲ ಬದುಕಬೇಕು ಮತ್ತು ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಬೇಕೆಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ." ಪ್ರಧಾನಿ ಮೋದಿಯವರ 75 ನೇ ವಾರ್ಷಿಕೋತ್ಸವ ಮತ್ತು ಅವರ ಸೇವೆಗಳ ಪರಿಣಾಮವನ್ನು ಗುರುತಿಸಿ, ಈ ಶುಭಾಶಯಗಳು ಎಲ್ಲರಿಗೂ ಸ್ಪೂರ್ತಿದಾಯಕವಾಗಿವೆ' ಎಂದು ಅಮೀರ್ ಖಾನ್ ಹೇಳಿದ್ದಾರೆ.
ಇನ್ನು ನಟ ಅಮೀರ್ ಖಾನ್, ಶಾರುಖ್ ಖಾನ್ ಮಾತ್ರವಲ್ಲದೇ ಬಾಲಿವುಡ್ ನಟಿ ಆಲಿಯಾ ಭಟ್, ನಟ ವಿವೇಕ್ ಒಬೆರಾಯ್ ಮತ್ತು ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೂಡ ವಿಡಿಯೋ ಸಂದೇಶಗಳ ಮೂಲಕ ಪ್ರಧಾನಿ ಮೋದಿಯವರಿಗೆ ಶುಭ ಹಾರೈಸಿದ್ದಾರೆ.