ಮುಂಬೈ: ಬಾಲಿವುಡ್ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರು ತಮ್ಮ ಹಳೆಯ ಕಚೇರಿಯನ್ನು ಬರೋಬ್ಬರಿ 4.85 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದು, ಶೇ. 824 ರಷ್ಟು ಲಾಭ ಗಳಿಸಿದ್ದಾರೆ.
18 ವರ್ಷಗಳ ಹಿಂದೆ ದೇಶದ ವಾಣಿಜ್ಯ ನಗರಿ ಮುಂಬೈನ ಅಂಧೇರಿಯಲ್ಲಿ ಕೇವಲ 52.5 ಲಕ್ಷಕ್ಕೆ ಖರೀದಿಸಿದ್ದ ಕಚೇರಿಯನ್ನು ಇದೀಗ 4.85 ಕೋಟಿ ರೂ. ಗೆ ಮಾರಾಟ ಮಾಡಿದ್ದಾರೆ.
ಸಿಆರ್‌ಇ ಮ್ಯಾಟ್ರಿಕ್ಸ್ ವರದಿಯ ಪ್ರಕಾರ, ಈ ಆಸ್ತಿ ಮಾರಾಟದಿಂದ ಅವರಿಗೆ ಹೂಡಿಕೆ ಮಾಡಿದ ಮೊತ್ತಕ್ಕಿಂತ ಸುಮಾರು ಒಂಬತ್ತು ಪಟ್ಟು ಹೆಚ್ಚು ಲಾಭ ಸಿಕ್ಕಿದೆ.
ಫ್ರೇಮ್ಸ್ ಪ್ರೊಡಕ್ಷನ್ ಕಂಪನಿ ಪ್ರೈವೇಟ್ ಲಿಮಿಟೆಡ್ ಮಾಧುರಿ ದೀಕ್ಷಿತ್ ಅವರ ವಾಣಿಜ್ಯ ಕಚೇರಿ ಸ್ಥಳವನ್ನು ಸ್ವಾಧೀನಪಡಿಸಿಕೊಂಡಿದೆ. ಮಾರಾಟ ಪತ್ರವನ್ನು ಜೂನ್ 23, 2026 ರಂದು ನೋಂದಾಯಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ವಾಣಿಜ್ಯ ಆಸ್ತಿಯು ಅಂಧೇರಿ ಪಶ್ಚಿಮದ ಓಶಿವಾರಾದ ಲಿಂಕ್ ರಸ್ತೆ ಬಳಿ ಇರುವ 'ಮೋರಿಯಾ ಲ್ಯಾಂಡ್‌ಮಾರ್ಕ್-II ಪ್ರಿಮಿಸಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್' ಕಟ್ಟಡದ ನಾಲ್ಕನೇ ಮಹಡಿಯಲ್ಲಿದೆ.
ಸುಮಾರು 1,594.24 ಚದರ ಅಡಿ ಕಾರ್ಪೆಟ್ ವಿಸ್ತೀರ್ಣ ಹೊಂದಿರುವ ಈ ಜಾಗವು ಮೂರು ವಾಹನಗಳ ಪಾರ್ಕಿಂಗ್ ಸೌಲಭ್ಯವನ್ನೂ ಒಳಗೊಂಡಿದೆ. ಬರೋಬ್ಬರಿ 4.85 ಕೋಟಿಗೆ ಈ ಆಸ್ತಿಯನ್ನು ಮಾರಾಟ ಮಾಡಲಾಗಿದ್ದು, ಇದರ ನೋಂದಣಿಗಾಗಿ 29.1 ಲಕ್ಷ ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ.
ದಾಖಲೆಗಳ ಪ್ರಕಾರ, ಮಾಧುರಿ ಅವರು ಮೇ 14, 2008 ರಂದು 52.5 ಲಕ್ಷ ರೂ.ಗೆ ಈ ಆಸ್ತಿಯನ್ನು ಖರೀದಿಸಿದ್ದರು. ಇತ್ತೀಚಿನ ವಹಿವಾಟಿನಲ್ಲಿ ಸುಮಾರು ಶೇ. 824 ರಷ್ಟು ಹೆಚ್ಚಳವಾಗಿದ್ದು, ಈ ಪ್ರದೇಶದಲ್ಲಿ ವಾಣಿಜ್ಯ ರಿಯಲ್ ಎಸ್ಟೇಟ್ ಮೌಲ್ಯಗಳಲ್ಲಿನ ತೀವ್ರ ಏರಿಕೆಯನ್ನು ಪ್ರತಿಬಿಂಬಿಸುತ್ತದೆ.