ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ, ತಮ್ಮ ಮುಂದಿನ ಐತಿಹಾಸಿಕ ಚಿತ್ರ 'ಬಟ್ವಾರಾ 1947'ರ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 14 ರಂದು ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಚಾರ ಅಭಿಯಾನದ ಭಾಗವಾಗಿ ಇವರು ಲಖನೌಗೆ ತೆರಳಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದಾರೆ.
ಈ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭೇಟಿ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಮ ಲಲ್ಲಾ ವಿಗ್ರಹವನ್ನೂ ಉಡುಗೊರೆಯಾಗಿ ನೀಡಿದ್ದಾರೆ.
'ಬಟ್ವಾರಾ 1947' ಚಿತ್ರದ ಪ್ರಚಾರಕ್ಕಾಗಿ ಸನ್ನಿ ಡಿಯೋಲ್, ಪ್ರೀತಿ ಜಿಂಟಾ ಮತ್ತು ಕರಣ್ ಡಿಯೋಲ್ ಶುಕ್ರವಾರ ಲಖನೌಗೆ ಭೇಟಿ ನೀಡಿದ್ದು, ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೇ, ನಗರದಾದ್ಯಂತ ನಡೆದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯವರ ಕಚೇರಿಗೆ ತೆರಳುವ ಮುನ್ನ ಪ್ರಸಿದ್ಧ 'ರೂಮಿ ಗೇಟ್' ಬಳಿ ಸಾಂಪ್ರದಾಯಿಕ ಟಾಂಗಾ ಸವಾರಿಯನ್ನೂ ಆನಂದಿಸಿದ್ದಾರೆ.
ಲಖನೌದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದದ್ದು ಸಂತೋಷದ ವಿಷಯವಾಗಿತ್ತು. ಅವರೊಂದಿಗೆ ಅತ್ಯಂತ ಸೌಹಾರ್ದಯುತ ಮಾತುಕತೆ ನಡೆಯಿತು ಎಂದು ಸನ್ನಿ ಡಿಯೋಲ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಭೇಟಿ ವೇಳೆಯಲ್ಲಿ ಪ್ರೀತಿ ಜಿಂಟಾ ಕೂಡಾ ಉಪಸ್ಥಿತರಿದ್ದರು.
ಬಟ್ವಾರಾ 1947' (Batwara 1947) ಸಿನಿಮಾದಲ್ಲಿ ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಜೊತೆಯಾಗಿದ್ದಾರೆ. ಈ ಇಬ್ಬರೂ ಕೊನೆಯದಾಗಿ 'ಭಯಾಜಿ ಸೂಪರ್‌ಹಿಟ್' (Bhaiaji Superhit) ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಸುಮಾರು ಎಂಟು ವರ್ಷಗಳ ಅಂತರದ ನಂತರ ಈ ಹೊಸ ಸಿನಿಮಾ ಮೂಲಕ ಅವರು ಮತ್ತೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ.
ಈ ಚಿತ್ರವನ್ನು ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಜೋಡಿಯು ಸುಮಾರು 29 ವರ್ಷಗಳ ನಂತರ ಮತ್ತೆ ಒಂದಾಗುತ್ತಿರುವುದು ಇದರ ವಿಶೇಷತೆಯಾಗಿದೆ. ಈ ಚಿತ್ರವನ್ನು 'ಆಮಿರ್ ಖಾನ್ ಪ್ರೊಡಕ್ಷನ್ಸ್' ನಿರ್ಮಿಸುತ್ತಿದೆ.