ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪ್ರಖ್ಯಾತ ನಿರ್ದೇಶಕ ಹಾಗೂ ಹಿರಿಯ ನಿರ್ಮಾಪಕ ಕುಕು ಕೊಹ್ಲಿ ಅವರು ಮಂಗಳವಾರ (ಆ. 25) ತಮ್ಮ 77ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತದಿಂದಾಗಿ ಮುಂಬೈನ ಕೊಕಿಲಾಬೆನ್ ಧಿರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಮೂಲಗಳ ಪ್ರಕಾರ, ಅರುಣಾ ಇರಾನಿ ಅವರ ಪತಿ ಕುಕು ಕೊಹ್ಲಿ ಅವರಿಗೆ ಸೋಮವಾರ ರಾತ್ರಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಸಣ್ಣ ಪ್ರಮಾಣದ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಿ, ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯ ನಂತರ ಅವರು ಚೇತರಿಸಿಕೊಳ್ಳುತ್ತಿದ್ರು. ಮತ್ತು ಮಂಗಳವಾರ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿತ್ತು. ಆದರೆ, ಮಂಗಳವಾರ ಸಂಜೆ ಸುಮಾರು ದಿಢೀರನೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿ ಅವರು ಕೊನೆಯುಸಿರೆಳೆದರು.
1991ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ‘ಫೂಲ್ ಔರ್ ಕಾಂಟೇ’ ಮೂಲಕ ಕುಕು ಕೊಹ್ಲಿ ಅವರು ಸ್ವತಂತ್ರ ನಿರ್ದೇಶಕರಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಸಿನಿಮಾದ ಮೂಲಕವೇ ಬಾಲಿವುಡ್‌ಗೆ ಪ್ರವೇಶಿಸಿದ ಅಜಯ್ ದೇವಗನ್ ಅವರನ್ನ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆಗಿ ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ʻಫೂಲ್ ಔರ್ ಕಾಂಟೇʼ ನಂತರ ಅವರು ʻಸುಹಾಗ್ʼ, ʻಹಕೀಕತ್ʼ, ʻಜುಲ್ಮಿʼ, ʻಅನಾರಿ ನಂ.1’ ಹಾಗೂ `ಯಹೇ ದಿಲ್ ಆಶಿಕಾನಾ’ ಸೇರಿದಂತೆ ಮುಂತಾದ ಹಲವು ಹಿಟ್ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ.
ಅದಕ್ಕೂ ಮುನ್ನ, ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ದಿಗ್ಗಜ ನಿರ್ದೇಶಕ ರಾಜ್ ಕಪೂರ್ ಅವರ ಜೊತೆ ʻಬಾಬಿʼ, ʻಪ್ರೇಮ್ ರೋಗ್ʼ ಮತ್ತು ʻಸತ್ಯಂ ಶಿವಂ ಸುಂದರಂʼ ಮುಂತಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.