ರಕ್ಷಾ ಬಂಧನ್ ಹಬ್ಬದ ಅವಧಿಯಲ್ಲಿ ನಟಿ ಕೃತಿ ಸನೋನ್ ಅವರು ಕಾಣಿಸಿಕೊಂಡಿದ್ದ ಜಾಹಿರಾತು ವಿವಾದಕ್ಕೊಳಗಾದ ನಂತರ ಈಗ ಗಣೇಶ ಹಬ್ಬದ ಸಂದರ್ಭದಲ್ಲಿ ದಿಶಾ ಪಠಾಣಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮುಂಬೈ ನಲ್ಲಿ ಅಂಬಾನಿ ನಿವಾಸದಲ್ಲಿ ನಡೆದ ಗಣೇಶ ಪೂಜೆಯಲ್ಲಿ ಹಲವು ಸೆಲಬ್ರಿಟಿಗಳು ಭಾಗಿಯಾಗಿದ್ದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದಿಶಾ ಪಠಾಣಿ ಸಹ ಇದ್ದರು. ಆದರೆ ಆಕೆ ಧರಿಸಿದ್ದ ಉಡುಪು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.
ದಿಶಾ ಪಠಾಣಿ ಲೆಹೆಂಗಾ ಧರಿಸಿ ಅಂಬಾನಿ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ ಅವರು ಆ ಲೆಹೆಂಗಾ ಗೆ ಆಳವಾದ ಕುತ್ತಿಗೆಯ ವಿನ್ಯಾಸವಿರುವ (plunging neckline) ಬ್ಲೌಸ್ ಧರಿಸಿದ್ದಕ್ಕಾಗಿ ದಿಶಾ ಪಟಾನಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಕಾರ್ಯಕ್ರಮಕ್ಕೆ ನಟಿ ಆಗಮಿಸುತ್ತಿರುವ ವಿಡಿಯೋಗಳು ವೈರಲ್ ಆದವು ಮತ್ತು ಧಾರ್ಮಿಕ ಸಮಾರಂಭವೊಂದಕ್ಕೆ ಅವರ ಉಡುಪು ಸೂಕ್ತವೇ ಎಂದು ಅನೇಕ ಬಳಕೆದಾರರು ಪ್ರಶ್ನಿಸಿದ್ದಾರೆ.
ಆನ್‌ಲೈನ್ ಪ್ರತಿಕ್ರಿಯೆಗಳು ನಟಿಯ ಹಬ್ಬದ ಉಡುಪಿನ ಸುತ್ತ ಕೇಂದ್ರೀಕೃತವಾಗಿದ್ದವು; ಅನೇಕ 'X' (ಟ್ವಿಟರ್) ಬಳಕೆದಾರರು ಧಾರ್ಮಿಕ ಕೂಟಗಳಲ್ಲಿನ ಉಡುಪಿನ ಆಯ್ಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಟೀಕೆಗಳು, ಆಭರಣ ಬ್ರಾಂಡ್ 'GIVA'ಗಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದ ರಕ್ಷಾ ಬಂಧನ ಜಾಹೀರಾತಿನ ವಿರುದ್ಧ ವ್ಯಕ್ತವಾದ ಆಕ್ರೋಶದೊಂದಿಗೂ ಹೋಲಿಕೆಗೆ ಕಾರಣವಾದವು (ಆ ಜಾಹೀರಾತನ್ನು ನಂತರ ಹಿಂಪಡೆಯಲಾಗಿತ್ತು).
ಅಂಬಾನಿ ನಿವಾಸಕ್ಕೆ ಆಗಮಿಸಿದ್ದ ದಿಶಾ ಕೆಂಪು ಘಾಗ್ರಾ, ಅದಕ್ಕೆ ಹೊಂದಿಕೆಯಾಗುವ ಆಳವಾದ ಕುತ್ತಿಗೆಯ ವಿನ್ಯಾಸದ ಬ್ಲೌಸ್ ಮತ್ತು ಒಂದು ಭುಜದ ಮೇಲೆ ಕೆಂಪು ದುಪಟ್ಟಾ, ಆಕರ್ಷಕ ಕಿವಿಯೋಲೆಗಳು, ಬಳೆಗಳನ್ನು ಧರಿಸಿದ್ದರು. ಅವರು ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿರುವುದು ಕೂಡ ಕಂಡುಬಂದಿತು.
ಅವರ ಉಡುಪು ಶೀಘ್ರದಲ್ಲೇ ಆನ್‌ಲೈನ್ ಟ್ರೋಲ್‌ಗೆ ವಿಷಯವಾಯಿತು. "ಗಣಪತಿ ಹಬ್ಬದ ಆಚರಣೆಗೆ ಎಂತಹ ವಿಚಿತ್ರವಾದ ಉಡುಪು ಇದು? ಹಬ್ಬ, ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುವವರಿಗೆ ಒಂದು ನಿರ್ದಿಷ್ಟ ಉಡುಪು ಸಂಹಿತೆ (dress code) ಇರಬೇಕು." ಎಂದು ಓರ್ವ ವ್ಯಕ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಮೊದಲು ಕೃತಿ ಸನೋನ್ ಮತ್ತು ಈಗ ದಿಶಾ ಪಟಾನಿ - ಅವರು ಧರಿಸಿರುವ ಉಡುಪು ಗಣಪತಿ ಹಬ್ಬಕ್ಕೆ ಸೂಕ್ತವೇ?? ಈ ಬಾಲಿವುಡ್ ತಾರೆಯರಿಗೆ ಹಿಂದೂ ಹಬ್ಬಗಳ ಪಾವಿತ್ರ್ಯತೆಯ ಬಗ್ಗೆ ಕಿಂಚಿತ್ತೂ ಗೌರವವಿಲ್ಲ." ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಅವರು ನಿಜವಾಗಿಯೂ ಗಣಪತಿ ಆಚರಣೆಗೆ ಬಂದಿದ್ದಾರೋ ಅಥವಾ ರಾಂಪ್ ವಾಕ್ (ಫ್ಯಾಷನ್ ಶೋ) ಮಾಡಲು ಬಂದಿದ್ದಾರೋ? ದಿಶಾ ಪಠಾನಿ?!!" ಎಂದು ಹಲವು ನೆಟ್ಟಿಗರು ದಿಶಾ ಪಠಾಣಿ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
"ಗಣಪತಿ ಆಚರಣೆಯಲ್ಲಿ ದಿಶಾ ಪಟಾನಿ ಕಾಣಿಸಿಕೊಂಡಿರುವುದು, ಧಾರ್ಮಿಕ ಕೂಟಗಳಲ್ಲಿ ಮೂಲಭೂತ ಉಡುಪು ಸಂಹಿತೆ ಇರಬಾರದೇ? ಒಂದು ಸರಳ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದು ನೀವು ಅಲ್ಲಿಗೆ ಹೋಗಿರುವುದು ಗಣಪತಿ ದರ್ಶನ ಮತ್ತು ಭಕ್ತಿಗಾಗಿ ರಾಂಪ್ ವಾಕ್ ಮಾಡುವುದಕ್ಕಲ್ಲ. ಆ ಸಂದರ್ಭದ ಪಾವಿತ್ರ್ಯತೆಯನ್ನು ಗೌರವಿಸಬೇಕು." ಎಂದು ಸಲಹೆ ನೀಡಿದ್ದಾರೆ.
"ಗಣಪತಿ ದರ್ಶನಕ್ಕಾಗಿ ದಿಶಾ ಪಠಾಣಿ ಧರಿಸಿದ್ದು ಇದನ್ನೇನಾ? ಅವರು ಗಣೇಶ ಪೂಜೆಗೆ ಬಂದಿದ್ದರೋ ಅಥವಾ ಡ್ಯಾನ್ಸ್ ಪಾರ್ಟಿಗೋ? ದಿಶಾ ಪಠಾನಿಗೆ ತಮಗೆ ಇಷ್ಟವಾದದ್ದನ್ನು ಧರಿಸುವ ಹಕ್ಕಿಲ್ಲ ಎಂದು ಯಾರೂ ಹೇಳುತ್ತಿಲ್ಲ. ಖಂಡಿತವಾಗಿಯೂ ಅವರಿಗೆ ಆ ಹಕ್ಕಿದೆ. ಆದರೆ ಗಣಪತಿ ದರ್ಶನವು ಒಂದು ಧಾರ್ಮಿಕ ಸಂದರ್ಭ, ನೈಟ್‌ಕ್ಲಬ್, ಡ್ಯಾನ್ಸ್ ಪಾರ್ಟಿ ಅಥವಾ ಫ್ಯಾಷನ್ ಕಾರ್ಯಕ್ರಮವಲ್ಲ. ಪ್ರತಿಯೊಂದು ಸ್ಥಳಕ್ಕೂ ಅದರದೇ ಆದ ಘನತೆ ಮತ್ತು ಉಡುಪಿನ ನಿರೀಕ್ಷೆಗಳಿರುತ್ತವೆ. ಸೆಲೆಬ್ರಿಟಿಯೊಬ್ಬರು ಉದ್ದೇಶಪೂರ್ವಕವಾಗಿ ಮೈತೋರಿಸುವಂತಹ ಉಡುಪನ್ನು ಧರಿಸಿ ಹಿಂದೂ ಹಬ್ಬದಲ್ಲಿ ಭಾಗವಹಿಸಿದಾಗ, ಗಮನವು ಭಕ್ತಿಯ ಮೇಲಿದೆಯೋ ಅಥವಾ ಪ್ರಚಾರದ ಮೇಲಿದೆಯೋ ಎಂದು ಜನರು ಪ್ರಶ್ನಿಸುವುದು ಸಮಂಜಸವಾಗಿದೆ." "ಇದು ಮಹಿಳೆಯರ ದೇಹದ ಮೇಲೆ ನಿಯಂತ್ರಣ ಹೇರುವ ವಿಷಯವಲ್ಲ. ಇದು ಸಂದರ್ಭಕ್ಕೆ ಗೌರವ ನೀಡುವ ವಿಷಯ. ವೈಯಕ್ತಿಕ ಸ್ವಾತಂತ್ರ್ಯ ಮುಖ್ಯ, ಆದರೆ ಸಾಂಸ್ಕೃತಿಕ ಸಂವೇದನೆಯೂ ಅಷ್ಟೇ ಮುಖ್ಯ. ಧಾರ್ಮಿಕ ಹಬ್ಬವನ್ನು ಗೌರವದಿಂದ ಕಾಣಬೇಕೇ ಹೊರತು, ಅದನ್ನು ಗ್ಲಾಮರ್ ಮತ್ತು ಪ್ರಚಾರ ಪಡೆಯುವ ಮತ್ತೊಂದು ಅವಕಾಶವನ್ನಾಗಿ ಪರಿಗಣಿಸಬಾರದು. ಮೊದಲು ರಕ್ಷಾಬಂಧನದ ಸಂದರ್ಭದಲ್ಲಿ ಕೃತಿ ಸನೋನ್ ಮತ್ತು ಈಗ ಗಣೇಶ ಚತುರ್ಥಿಯಂದು ದಿಶಾ ಪಟಾನಿ. ಆದರೆ ಹಿಂದೂ ಹಬ್ಬಗಳ ಸಮಯದಲ್ಲಿ ಸೆಲೆಬ್ರಿಟಿಗಳು ಏಕೆ ಈ ರೀತಿ ಉಡುಪು ಧರಿಸುತ್ತಾರೆ?" ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ಕೃತಿ ಸನೋನ್ ಅವರ ಜಾಹೀರಾತಿನ ಸುತ್ತ ವಿವಾದ ಉಂಟಾಗಿತ್ತು
ಕೃತಿ ಸನೋನ್ ಅವರ ಜಾಹೀರಾತಿಗೆ ಸಂಬಂಧಿಸಿದ ಇತ್ತೀಚಿನ ಸಾಮಾಜಿಕ ಜಾಲತಾಣದ ವಿವಾದದ ನಡುವೆಯೇ ದಿಶಾ ಅವರ ಈ ಉಡುಪಿನ ಕುರಿತು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆಭರಣ ಬ್ರಾಂಡ್ 'GIVA', ಕೃತಿ ಧರಿಸಿದ್ದ ಉಡುಪಿನ ಬಗ್ಗೆ ಟೀಕೆಗಳು ವ್ಯಕ್ತವಾದ ನಂತರ, ಅವರನ್ನು ಒಳಗೊಂಡಿದ್ದ ರಕ್ಷಾಬಂಧನ ಜಾಹೀರಾತನ್ನು ಹಿಂಪಡೆದುಕೊಂಡಿತು.