ಮುಂಬೈ: ಬಾಲಿವುಡ್ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಿಗೆ ಹೆಣ್ಣು ಮಗು ಜನಿಸಿದ್ದು, ಈ ವಿಚಾರವನ್ನು ದಂಪತಿಗಳೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಶನಿವಾರ ಸಂಜೆ ತಮ್ಮ ಎರಡನೇ ಮಗುವಿನ ಆಗಮನದ ಸಂತಸವನ್ನು ದೀಪಿಕಾ ಮತ್ತು ರಣವೀರ್ ಸಿಂಗ್ ದಂಪತಿ ಜಂಟಿ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಪುಟ್ಟ ಮಗುವಿನ ಪಾದದ ಗುರುತಿನ ಮುದ್ದಾದ ಚಿತ್ರವನ್ನು ಹಂಚಿಕೊಂಡಿರುವ ದಂಪತಿ, ತಮ್ಮ ಕುಟುಂಬ ಇದೀಗ ಮೂವರಿಂದ ನಾಲ್ವರಿಗೆ ವಿಸ್ತರಿಸಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
“ವೆಲ್ಕಮ್ ಬೇಬಿ ಗರ್ಲ್. 19|9|2026. ದುವಾ, ದೀಪಿಕಾ ಮತ್ತು ರಣವೀರ್” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಈಗಾಗಲೇ ದುವಾ ಎಂಬ ಹೆಣ್ಣು ಮಗುವಿನ ಪೋಷಕರಾಗಿರುವ ದೀಪಿಕಾ ಮತ್ತು ರಣವೀರ್, ಹೊಸ ಪೋಸ್ಟ್‌ಗೆ ಕೇವಲ ದೃಷ್ಟಿ ಬೀಳದಿರಲಿ ಎಂಬ ಸಂಕೇತದ ಎಮೋಜಿಯನ್ನು ಕ್ಯಾಪ್ಷನ್ ಆಗಿ ಹಾಕಿದ್ದಾರೆ.
ಸಿದ್ಧಿವಿನಾಯಕ ದರ್ಶನ ಪಡೆದಿದ್ದ ದಂಪತಿ
ಹೆಣ್ಣು ಮಗುವಿನ ಆಗಮನದ ಒಂದು ದಿನ ಮುನ್ನ, ಶುಕ್ರವಾರ ದೀಪಿಕಾ ಮತ್ತು ರಣವೀರ್ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದರು.
2ನೇ ಮಗು
ಇತ್ತೀಚೆಗೆ ದಂಪತಿ ತಮ್ಮ ಪುತ್ರಿ ದುವಾ ಅವರ ಎರಡನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕಪ್ಪು-ಬಿಳುಪು ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ರಣವೀರ್, ದೀಪಿಕಾ ಅವರ ಬೇಬಿ ಬಂಪ್ ಅನ್ನು ಪ್ರೀತಿಯಿಂದ ಹಿಡಿದುಕೊಂಡಿರುವ ಫೋಟೋ ಕೂಡ ಗಮನ ಸೆಳೆದಿತ್ತು.
ಅಂದಹಾಗೆ ನಟಿ ದೀಪಿಕಾ ಪಡುಕೋಣೆ ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದರ ಜತೆಗೆ ಅಲ್ಲು ಅರ್ಜುನ್ ನಾಯಕತ್ವದ ಅಟ್ಲೀ ನಿರ್ದೇಶನದ ಸೈನ್ಸ್‌ಫಿಕ್ಷನ್ ಆ್ಯಕ್ಷನ್ ಚಿತ್ರ ‘ರಾಕಾ’ದಲ್ಲೂ ದೀಪಿಕಾ ನಟಿಸುತ್ತಿದ್ದಾರೆ. ಅಂತೆಯೇ ರಣವೀರ್ ಸಿಂಗ್ ಸದ್ಯ ‘ಪ್ರಳಯ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.