ಪುಣೆ: 5 ಲಕ್ಷ ನೀಡುವಂತೆ ಒತ್ತಾಯಿಸಿ ವೈದ್ಯರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಬಳಿಕ ಅವರ ಕಾರನ್ನು ಕಿತ್ತುಕೊಂಡ ಆರೋಪದ ಮೇಲೆ ‘ಬಿಗ್‌ಬಾಸ್’ ಖ್ಯಾತಿಯ ನಟಿ ಸೇರಿದಂತೆ 9 ಮಂದಿಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಬಿಗ್ ಬಾಸ್ ಮರಾಠಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಶಿಂಧೆ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಪುಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುಣೆ ಕ್ಯಾಂಟೋನ್ಮೆಂಟ್ ಬೋರ್ಡ್‌ನ ಮಾಜಿ ಮುಖ್ಯ ವೈದ್ಯಾಧಿಕಾರಿ (CMO) ಡಾ. ವಿದ್ಯಾಧರ ಗಾಯಕ್ವಾಡ್ ದೂರು ನೀಡಿದ್ದಾರೆ.
ಈ ಕಾರ್ಯಕ್ರಮವೊಂದರ ಪ್ರಚಾರಕ್ಕಾಗಿ 5 ಲಕ್ಷ ರೂ ನೀಡುವಂತೆ ದಿವ್ಯಾ ಶಿಂಧೆ ಹಾಗೂ ಇತರ ಆರೋಪಿಗಳು ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಪ್ರಕಾರ, ಆಗಸ್ಟ್‌ನಿಂದಲೇ 5 ಲಕ್ಷ ರೂ ನೀಡುವಂತೆ ಒತ್ತಾಯಿಸಿ ಫೋನ್ ಕರೆಗಳು ಬರುತ್ತಿದ್ದವು. ಸೆಪ್ಟೆಂಬರ್ 17ರಂದು ದಿವ್ಯಾ ಶಿಂಧೆ ಕೆಲವರೊಂದಿಗೆ ಗಾಯಕ್ವಾಡ್ ಅವರ ಮನೆಗೆ ಬಂದ ಬಳಿಕ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 23ರಂದು ವೈದ್ಯರನ್ನು ಹೋಟೆಲ್‌ವೊಂದಕ್ಕೆ ಕರೆಸಿಕೊಂಡು ಮತ್ತೆ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಹಣ ನೀಡದಿದ್ದರೆ ಮನೆಗೆ ಗೂಂಡಾಗಳನ್ನು ಕಳುಹಿಸಿ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು ಎಂದು ವೈದ್ಯರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ನಟಿ ಬಂಧನ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ದಿವ್ಯಾ ಶಿಂಧೆ ಅವರನ್ನು ಪುಣೆಯ ಕಾಲೇಪಾಡಲ್ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ದಿವ್ಯಾ ಶಿಂಧೆ ಅವರನ್ನು ಇಂದು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಮುಂದಿನ ರಿಮಾಂಡ್ ಹಾಗೂ ನ್ಯಾಯಾಲಯದ ವಿಚಾರಣೆಗಳು ಸೆಪ್ಟೆಂಬರ್ 30ರವರೆಗೆ ನಿಗದಿಯಾಗಿವೆ ಎಂದು ವಕೀಲರು ತಿಳಿಸಿದ್ದಾರೆ.
ವೈದ್ಯರ ಮನೆಗೆ ನುಗ್ಗಿ ಹಲ್ಲೆ ಆರೋಪ
ಮೂಲಗಳ ಪ್ರಕಾರ ಸೆಪ್ಟೆಂಬರ್ 24ರ ರಾತ್ರಿ ದಿವ್ಯಾ ಶಿಂಧೆ ಸೇರಿದಂತೆ 8 ರಿಂದ 10 ಮಂದಿ ಬಲವಂತವಾಗಿ ವೈದ್ಯರ ಮನೆಗೆ ನುಗ್ಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಆರೋಪಿಗಳು ಗಾಯಕ್ವಾಡ್ ಅವರ ಮುಖ, ಹೊಟ್ಟೆ ಮತ್ತು ಬೆನ್ನಿಗೆ ಒದ್ದು, ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಹರಿತವಾದ ಆಯುಧಗಳು, ದೊಣ್ಣೆಗಳು, ಬೆಲ್ಟ್‌ಗಳು ಹಾಗೂ ಕಬ್ಬಿಣದ ವಸ್ತುಗಳನ್ನು ಬಳಸಿ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ತಾನು ಪಾರ್ಶ್ವವಾಯುವಿನಿಂದ ಬಳಲುತ್ತಿರುವುದಾಗಿ ವೈದ್ಯರು ಮನವಿ ಮಾಡಿಕೊಂಡು ತಮ್ಮನ್ನು ಬಿಟ್ಟುಬಿಡುವಂತೆ ಕೇಳಿಕೊಂಡರೂ ಆರೋಪಿಗಳು ಹಲ್ಲೆ ಮುಂದುವರಿಸಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ ಆರೋಪಿಗಳು, 5 ಲಕ್ಷ ರೂ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವೈದ್ಯರ ಕಾರನ್ನು ಕಿತ್ತುಕೊಂಡು ಅಲ್ಲಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವೈದ್ಯನಿಗೆ ಗಂಭೀರ ಗಾಯ
ಹಲ್ಲೆಯಿಂದ ಗಾಯಕ್ವಾಡ್ ಅವರ ತಲೆಗೆ ಆಳವಾದ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ. ಮುಖದ ಇತರ ಭಾಗಗಳಲ್ಲೂ ಗಾಯಗಳಾಗಿರುವುದು ಕಂಡುಬಂದಿದೆ.
ಈ ಸಂಬಂಧ ಕಾಲೇಪಾಡಲ್ ಪೊಲೀಸರು ದಿವ್ಯಾ ಶಿಂಧೆ, ಅಣ್ಣಾ ಧಾಮಧರೆ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ವಿವಿಧ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಅಮಿತ್ ಶೆಟೆ ತನಿಖೆ ನಡೆಸುತ್ತಿದ್ದಾರೆ.