ಸಿನಿಮಾ ಲೇಖನ

Next ಸಿದ್ದು

ಪಕ್ಕನೆ ನೋಡಿದರೆ ಇನ್ನೂ ಹೆಸರಿಡದ ನೆಕ್ಸ್ಟ್ ಫಿಲಂನ ಹೀರೋನಂತೆ ಕಾಣಿಸುವ ಈ ಹುಡುಗ ಗಾಂಧಿನಗರಕ್ಕೆ ಬಂದದ್ದೂ ಸಿನೆಮಾಕ್ಕಾಗಿಯೇ. ನೆಲೆ ಕಂಡುಕೊಂಡಿರುವುದು ಮಾತ್ರ ಟಿವಿ ಸೀರಿಯಲ್ ಲೋಕದಲ್ಲಿ. ಹೆಸರು ಸಿದ್ದು ಪೂರ್ಣಚಂದ್ರ.
ಇವರ ಕತೆಯನ್ನು ಮೊದಲಿನಿಂದ ಹೇಳಿದರೆ, ಅದು ಬಣ್ಣದ ಲೋಕದಲ್ಲಿ ನೆಲೆ ಕಾಣಲು ಹಂಬಲಿಸಿ ಇಲ್ಲಿಗೆ ಆಗಮಿಸುವ ಎಲ್ಲ ಕನಸುಗಂಗಳ ಹುಡುಗರ ಕತೆಯ ಒಂದು ಮಾದರಿ ಸಿಕ್ಕಂತಾಗಬಹುದು. ಹುಟ್ಟಿದ್ದು ಹೊಳೆನರಸೀಪುರದ ಕಬ್ಬೂರು. ಚೆನ್ನರಾಯಪಟ್ಟಣದಲ್ಲಿ ಪದವಿ. ಕನ್ನಡ ಸಾಹಿತ್ಯದಲ್ಲಿ ಎಂಎ. ಕಲಿತದ್ದೆಲ್ಲ ಬಿಟ್ಹಾಕಿ ಬೆಂಗಳೂರು ಬಸ್ ಹತ್ತಿ ಗಾಂಧಿನಗರದಲ್ಲಿ ಇಳಿದಾಗ, ಚಿತ್ರಗೀತಕಾರ ಆಗಬೇಕೆಂಬ ಕನಸು. ದೊಡ್ಡ ದೊಡ್ಡ ನಿರ್ದೇಶಕರ ಗರಡಿಯಲ್ಲಿ ದುಡಿಮೆ. ಹುಡುಗನ ಪ್ರತಿಭೆ ಬಳಸಿಕೊಳ್ಳುವವರೇ ಎಲ್ಲರೂ; ಕ್ರೆಡಿಟ್ ನೀಡಿದವರು ಕಡಿಮೆ. ಕಾಸು ನೀಡಿದವರು ಇನ್ನೂ ಕಡಿಮೆ.
ಬಣ್ಣದ ಲೋಕದ ಬಗ್ಗೆ ರೋಸಿ ಹೋಗಿ ಊರು ಸೇರಿದರು. ಗೀಳು ಎಲ್ಲಿ ಹೋಗುತ್ತದೆ? ಕನಸು ಮತ್ತೆ ಕರೆಯಿತು. ಈ ಸಲ ಸೀರಿಯಲ್ ರೂಪದಲ್ಲಿ. ಮನೆಮಗಳು, ಒಲವೇ ನಮ್ಮ ಬದುಕು, ಮಿ.ಭೂಪತಿ, ಪರಮೇಶಿ ಪರದಾಟ, ಅತ್ತೆ ಸೊಸೆ, ಲಕ್ಷ್ಮಿ, ಅಗ್ನಿಶಿಖೆ, ಗುಪ್ತಗಾಮಿನಿ, ಕಾವ್ಯಾಂಜಲಿ ಧಾರಾವಾಹಿಗಳಲ್ಲಿ ಸಂಚಿಕೆ, ಸಹ ನಿರ್ದೇಶನಗಳಲ್ಲಿ ಸೈ ಎನಿಸಿಕೊಂಡರು. ಇದರ ಮಧ್ಯೆಯೇ ಸಿದ್ದಪ್ಪಾಜಿ ಪವಾಡಗಳು, ಏಳುಮಲೆ ಅಂದಗಾರ, ಭೈರವೇಶ್ವರ ಮುಂತಾದ ಭಕ್ತಿ ಡಾಕ್ಯುಮೆಂಟರಿ ಫಿಲಂಗಳ ತಯಾರಿಕೆ.
ಟ್ವಿಸ್ಟ್ ಸಿಕ್ಕಿದ್ದು ಕಸ್ತೂರಿ ಚಾನೆಲ್‌ನಲ್ಲಿ ಅನಿತಾ ಕುಮಾರಸ್ವಾಮಿ ಸೀರಿಯಲ್ ನಿರ್ದೇಶನಕ್ಕೆ ಕರೆದಾಗ. 'ಯಶೋಧರ ನೆಕ್ಸ್ಟ್ ಸಿಎಂ' ಸೀರಿಯಲ್‌ನ ವಿಶಿಷ್ಟ ಕಥಾಹಂದರವನ್ನು ಬೆಳೆಸಿ ನೋಡುಗರ ಮುಂದಿಡುವ ಸವಾಲು. ನೂರು ಎಪಿಸೋಡ್ ದಾಟುತ್ತಿರುವ ಈ ಧಾರಾವಾಹಿಯ ಯಶಸ್ಸನ್ನು ಅದರ ಟಿಆರ್‌ಪಿಯೇ ಹೇಳುತ್ತಿದೆ. ಟಪೋರಿ ಹುಡುಗಿಯಂತೆ ಕಾಣಿಸುವ ಯಶೋಧರೆ ಮುಂದಿನ ಸಿಎಂ ಹೇಗಾಗ್ತಾಳೆ ಅನ್ನುವುದೇ ಇದರ ಸಸ್ಪೆನ್ಸ್.
'ಕಾವ್ಯಾಂಜಲಿಯ ರಂಗನಾಥ್  ನನ್ನ ಗುರು, ಟಿ.ಎನ್.ಸೀತಾರಾಂ ಆದರ್ಶ' ಅನ್ನುವ ಸಿದ್ದುವಿನ ಕಾಲುಗಳು ಕಿರುತೆರೆಯಲ್ಲಿ ನೆಟ್ಟಿವೆ. ಕಣ್ಣುಗಳು ದೊಡ್ಡತೆರೆಯನ್ನು ಗಮನಿಸುತ್ತಿವೆ. ಸಿನೆಮಾ ಮಾಡಬೇಕೆಂಬ ಹಂಬಲ ಎದೆಯಲ್ಲಿ. ಕತೆ ಸಿದ್ಧವಾಗಿದೆ. ನಿರ್ಮಾಪಕರೂ ಇದ್ದಾರೆ. ಸೀರಿಯಲ್‌ನ ಹೊಣೆ ಮುಗಿದ ಬಳಿಕ ಇದಕ್ಕೆ ಸ್ಟಾರ್ಟ್, ಆ್ಯಕ್ಷನ್.
'ತುಂಬಾ ಮಂದಿ ನನ್ನ ಪ್ರತಿಭೆ ಬಳಸಿಕೊಂಡು ಕೈಬಿಟ್ರು...' ಅನ್ನುವ ಸಿದ್ದು ಮಾತಿನಲ್ಲಿ ರಾಜ್ಯದ ಹಳ್ಳಿ ಮೂಲೆಯಿಂದ ಆಶಾವಾದಿಗಳಾಗಿ ಬೆಂಗಳೂರಿಗೆ ಬರುವ ಎಲ್ಲ ಪ್ರತಿಭಾವಂತ ತರುಣರ ಯಾತನೆ ಕಾಣಿಸುತ್ತದೆ. ಹಾಗೇ ಸಾಧಿಸುವ ಛಲವೂ. ಹಾಸನದಲ್ಲಿ 'ಗಂಧರ್ವ ಫಿಲಂ ಇನ್‌ಸ್ಟಿಟ್ಯೂಟ್‌' ನಡೆಸುತ್ತಿರುವ ಸಿದ್ದು ಉದ್ದೇಶ ತನ್ನಂಥ ಹೊಸ ಪ್ರತಿಭಾವಂತರನ್ನು ಗುರುತಿಸಿ ತರಬೇತಿ ನೀಡಿ ಬೆಳೆಸುವುದು. ಇವರ ಸೀರಿಯಲ್‌ನ ಮುಕ್ಕಾಲು ಪಾಲು ಇಂಥ ಹೊಸಬರೇ ಇದ್ದಾರೆ.

-ವಿಹಂಗಮ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!