ತಮ್ಮ ನಾಲ್ಕು ಕಂಬನಿಗಳ ಕಹಾನಿ ನಾಲ್ಕನೇ ವಾರದಲ್ಲಿ ಮುನ್ನುಗ್ಗುತ್ತಿರುವಾಗ ನಿರ್ದೇಶಕ ಚಂದ್ರು ಕಂಬನಿ ಬಿಟ್ಟು ಖುಷಿಯ ಮೂಡಿನಲ್ಲಿದ್ದಾರೆ. ಅವರ ಖುಷಿಗೆ ಮೊನ್ನೆ ಇನ್ನೊಂದು ಎಕ್ಟ್ರಾ ಖುಷಿ ಸೇರ್ಪಡೆಯಾಗಿದೆ. ಅದು, ರೆಬೆಲ್‌ಸ್ಟಾರ್ ಅಂಬರೀಷ್ ತಮ್ಮ ಕುಟುಂಬ ಸಮೇತ 'ಚಾರ್‌ಮಿನಾರ್' ಚಿತ್ರ ವೀಕ್ಷಿಸುವುದರ ಮೂಲಕ ಇದೊಂದು ಕುಟುಂಬ ಸಮೇತ ನೋಡುವ ಸಿನಿಮಾ ಎಂಬ ಸರ್ಟಿಫಿಕೇಟ್ ಕೊಟ್ಟ ಸುದ್ದಿ.
'ಚಾರ್‌ಮಿನಾರ್' ನೋಡಿ ಹೊರಬಂದ ಅಂಬಿ ಹೇಳಿದ್ದು 'ನಮ್ಮಲ್ಲಿ ಎಷ್ಟು ಒಳ್ಳೊಳ್ಳೆ ಸಿನಿಮಾಗಳು ಬರ್ತಾ ಇವೆ, ನಮಗೆ ಗೊತ್ತೇ ಆಗಲ್ಲ. ನಿಜಕ್ಕೂ ಬಹಳ ದಿನ ಆದಮೇಲೆ ಚಾರ್‌ಮಿನಾರ್‌ನಂಥ ಸಿನಿಮಾ ನೋಡಿ ಖುಷಿ ಆಯ್ತು'.
ಚಾರ್‌ಮಿನಾರ್ ನೋಡಲು ತಾವೇ ಒಂದು ಸ್ಪೆಷಲ್ ಶೋ ಅರೇಂಜ್ ಮಾಡಿಸಿದ್ದ ಅಂಬಿ ಚಿತ್ರ ನೋಡಿ, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. 'ನೋಡು ಚಂದ್ರು, ಇದು 80 ಪರ್ಸೆಂಟ್ ನಂದೇ ಕಥೆ' ಎನ್ನುತ್ತಾ ತಗಲು ಹಾಕಿಕೊಂಡಿದ್ದು ಪ್ರೀತಿಯಿಂದ ಚಂದ್ರು ಹೆಗಲ ಮೇಲೆ ಕೈ ಹಾಕಿ. ಆದರೆ ಅಷ್ಟರಲ್ಲೇ ಪತ್ನಿ ಸುಮಲತಾ 'ಹೌದಾ, ಹಾಗಾದ್ರೆ ಯಾರದು ರಾಧೆ?' ಎನ್ನುತ್ತಿದ್ದಂತೆ ಅಂಬಿ ಮಾತು ಬೇರೆ ಕಡೆ ಹೊರಳಿತು. ಪತ್ನಿ ಸುಮಲತ ಸೇರಿದಂತೆ ತಮ್ಮ ಕುಟುಂಬ ಮತ್ತು ಹಲವು ಸ್ನೇಹಿತರೊಂದಿಗೆ ಮೀನಾಕ್ಷಿ ಮಾಲ್‌ನಲ್ಲಿ ಅಂದು ಅಂಬಿ ಸಂಭ್ರಮ ಆಚರಿಸಿದರು. ಅಂದಹಾಗೆ, ಪ್ರೇಮ್‌ರ ಈ ಹಿಂದಿನ 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರವನ್ನು ಅಂಬಿ ಮೆಚ್ಚಿಕೊಂಡು ಅದರ ಮರುಬಿಡುಗಡೆಯ ಉಸ್ತುವಾರಿ ಹೊತ್ತಿದ್ದರು. ಆದರೆ, ಆ ಚಿತ್ರ ಯಶಸ್ಸು ಕಾಣಲಿಲ್ಲ. ಆದರೆ ಈ ಬಾರಿ ಪ್ರೇಮ್ ಚಿತ್ರಕ್ಕೆ ಜನರ ಪ್ರತಿಕ್ರಿಯೆ ನೋಡಿ ಅಂಬಿ ಖುಷಿಯಾಗಿದ್ದಾರೆ. ಅಂಬಿ ಜೊತೆಗೆ ಅಂದು ತಮ್ಮ ಫ್ಯಾಮಿಲಿ ಜೊತೆ ಬಂದಿದ್ದ ಪ್ರೇಮ್, ಚಿತ್ರದ ನಾಯಕಿ ಮೇಘನಾ, ನಿರ್ದೇಶಕ ಚಂದ್ರು ಭಾಗಿಯಾಗಿದ್ದರು.
ಚಾರ್‌ಮಿನಾರ್ ಚಿತ್ರ ಪ್ರದರ್ಶನದ ನಂತರ ಚಂದ್ರು ಮತ್ತವರ ತಂಡವನ್ನು ತಮ್ಮ ಮನೆಗೆ ಕರೆದುಕೊಂಡು ಹೋದ ಅಂಬಿ ಅಲ್ಲಿ ಅವರಿಗಾಗಿ ವಿಶೇಷ ಪಾರ್ಟಿ ಆಯೋಜಿಸಿದ್ದರು.
ಚಾರ್‌ಮಿನಾರ್ ವಿತರಕ ಜಯಣ್ಣ 'ಚಿತ್ರದ ಕಲೆಕ್ಷನ್ ಅದ್ಭುತವಾಗಿದೆ, ಚಿತ್ರ ದೊಡ್ಡ ಹಿಟ್ ಆಗುವತ್ತ ಮುನ್ನುಗ್ಗುತ್ತಿದೆ' ಎನ್ನುತ್ತಿದ್ದಾರೆ. ಕಳೆದ ವಾರ ಇನ್ನೊಂದು ಪ್ರೇಮಕಥೆಯುಳ್ಳ 'ಮೈನಾ' ಕೂಡ ಬಿಡುಗಡೆಯಾಗಿದ್ದರೂ 'ಚಾರ್‌ಮಿನಾರ್'ನ ನೆಮ್ಮದಿಗೆ ಯಾವುದೇ ಭಂಗ ಬಂದಿಲ್ಲ. ಅಲ್ಲದೆ ಮೈನಾ ಈಗಷ್ಟೇ ಹಾರಲು ಕಲಿತ ಹಕ್ಕಿ. ಹಾಗಾಗಿ ಚಾರ್‌ಮಿನಾರ್ ವಿರುದ್ಧ ಕುಟುಕು ಕಾರ್ಯಾಚರಣೆ ನಡೆಸುವ ಮಟ್ಟಕ್ಕಿನ್ನೂ ಮೈನಾ ರೆಕ್ಕೆ ಬಲಿತಿಲ್ಲವಾದ್ದರಿಂದ ತಮ್ಮ ಚಿತ್ರ ಕಲೆಕ್ಷನ್ ವಿಷಯದಲ್ಲಿ ಇನ್ನೂ ಸ್ಟ್ರಾಂಗ್ ಆಗಿದೆ ಎಂಬ ಖುಷಿ ನಿರ್ದೇಶಕ ಚಂದ್ರು ಅವರದು. ನಾಲ್ಕನೇ ವಾರದ ಕಲೆಕ್ಷನ್ ಮುಂದಿಟ್ಟುಕೊಂಡು ಮಾತಾಡುವ ಚಂದ್ರು ಸದ್ಯಕ್ಕೆ ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು ಎನ್ನುತ್ತಿದ್ದಾರೆ.
ಚಿತ್ರದ ಕಲೆಕ್ಷನ್ ಅದ್ಭುತವಾಗಿದೆ, ಚಿತ್ರ ದೊಡ್ಡ ಹಿಟ್ ಆಗುವತ್ತ ಮುನ್ನುಗ್ಗುತ್ತಿದೆ'
- ಚಾರ್‌ಮಿನಾರ್ ವಿತರಕ ಜಯಣ್ಣ
ಮೈನಾ ಈಗಷ್ಟೇ ಹಾರಲು ಕಲಿತ ಹಕ್ಕಿ. ಹಾಗಾಗಿ ಚಾರ್‌ಮಿನಾರ್ ವಿರುದ್ಧ ಕುಟುಕು ಕಾರ್ಯಾಚರಣೆ ನಡೆಸುವ ಮಟ್ಟಕ್ಕಿನ್ನೂ ಮೈನಾ ರೆಕ್ಕೆ ಬಲಿತಿಲ್ಲವಾದ್ದರಿಂದ ತಮ್ಮ ಚಿತ್ರ ಕಲೆಕ್ಷನ್ ವಿಷಯದಲ್ಲಿ ಇನ್ನೂ ಸ್ಟ್ರಾಂಗ್ ಆಗಿದೆ.
- ನಿರ್ದೇಶಕ ಚಂದ್ರು
- ಹರಿ