ನಟ, ನಿರ್ದೇಶಕ ರಮೇಶ್ ಅರವಿಂದ್ರ 'ಖುಷಿಯಿಂದ ರಮೇಶ್' ಪುಸ್ತಕ ಇತ್ತೀಚೆಗಷ್ಟೆ ಬಿಡುಗಡೆಯಾತು. ರಮೇಶ್ ಜೀವನದಲ್ಲಿ ನಡೆದ ಹಾಗೂ ಅವರು ನೋಡಿದ ಅತ್ಯಂತ ಕುತೂಹಲಕಾರಿ ಘಟನೆ, ಸನ್ನಿವೇಶಗಳನ್ನು ಒಳಗೊಂಡ ಈ ಪುಸ್ತಕವನ್ನು ಪತ್ರಕರ್ತ ಚೇತನ್ ನಾಡಿಗೇರ್ ಸೊಗಸಾಗಿ ನಿರೂಪಿಸಿದ್ದಾರೆ. ಪುಸ್ತಕದ ಶೀರ್ಷಿಕೆಯಂತೆ ರಮೇಶ್ ಸಿನಿಮಾ ಜೀವನ ಈಗ ನಿಜಕ್ಕೂ ಖುಷಿಯಿಂದ ಕೂಡಿದೆ.
ಹೌದು. ಸೋಲು, ಗೆಲುವುಗಳೇನೇ ಇರಲಿ. ರಮೇಶ್ ಯಾವಾಗಲೂ ಹ್ಯಾಪಿ ಪರ್ಸನ್. 'ಒಳ್ಳೆಯ ಸಿನಿಮಾ ಕೊಡಬೇಕು. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರನ್ನು ಮನಸಾರೆ ನಗಿಸಬೇಕು. ನಮ್ಮ ಚಿತ್ರಗಳಿಂದ ಅವನಿಗೆ ಫುಲ್ ಟೈಮ್ ಎಂಟರ್ಟೈನ್ಮೆಂಟ್ ಸಿಗಬೇಕು ಎಂದು ಪ್ರತಿಕ್ಷಣ ಯೋಚಿಸುತ್ತೇನೆ. ಇತ್ತೀಚೆಗೆ ನಾನು ಒಪ್ಪಿಕೊಳ್ಳುತ್ತಿರುವ ಹಾಗೂ ಮಾಡುತ್ತಿರುವ ಚಿತ್ರಗಳು ಕೂಡ ಪ್ರೇಕ್ಷಕನಿಗೆ ಮನರಂಜನೆ ಕೊಡುವ ಚಿತ್ರಗಳೇ' ಎನ್ನುವ ರಮೇಶ್ ಮುಂದೆ ಈಗ ಮೂರು ಚಿತ್ರಗಳಿವೆ. ಜೊತೆಗೆ ಅವರೇ ನಿರ್ದೇಶಿಸಲಿರುವ ಚಿತ್ರದ ಸಿದ್ಧತೆಗಳೂ ನಡೆಯುತ್ತಿವೆ. ಇವು ಒಂದಾದ ಮೇಲೊಂದರಂತೆ ಬಿಡುಗಡೆಗೆ ಸಿದ್ಧವಾಗಲಿವೆ.
'ಮುಸಂಜೆ' ಮಹೇಶ್ ನಿರ್ದೇಶನದ 'ತುಂತುರು', ರಾಜೇಂದ್ರಕಾರಂತ್ ನಿರ್ದೇಶನದ 'ಮಂಗನ ಕೈಯಲ್ಲಿ ಮಾಣಿಕ್ಯ' ಹಾಗೂ ಎಸ್.ನಾರಾಯಣ್ ನಿರ್ದೇಶನದ 'ಛತ್ರಿಗಳು ಸಾರ್ ಛತ್ರಿಗಳು'. ಈ ಮೂರೂ ಚಿತ್ರೀಕರಣ ಮುಗಿಸಿಕೊಂಡಿವೆ. ಇತ್ತೀಚೆಗಷ್ಟೆ ಚಿತ್ರೀಕರಣ ಮುಗಿದ 'ಛತ್ರಿಗಳು ಸಾರ್ ಛತ್ರಿಗಳು' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ರಮೇಶ್. ಆದರೆ ಮೊದಲು 'ಮಂಗನ ಕೈಯಲ್ಲಿ ಮಾಣಿಕ್ಯ' ಬಿಡುಗಡೆಯಾಗಲಿದೆ.
'ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಎಲ್ಲ ಕೆಲಸಗಳೂ ಮುಗಿದಿವೆ. ಹಾಸ್ಯವೇ ಚಿತ್ರದ ಹೈಲೈಟ್. ಸಿಕ್ಕಾಪಟ್ಟೆ ಟೆನ್ಷನ್ಗೆ ಒಳಗಾಗುವವನು ತನಗೆ ಗೊತ್ತಿಲ್ಲದೇ ಹಲವು ಬಾರಿ ತಿಕ್ಕಾಟಗಳಿಗೆ ಸಿಕ್ಕಿಕೊಳ್ಳುತ್ತಾನೆ. ಅದರಿಂದ ಹೊರಬರಲು ಒದ್ದಾಡುತ್ತಾನೆ. ಹೀಗೆ ಸಖತ್ ಟೆನ್ಸ್ಡ್ ಸನ್ನಿವೇಶ, ವ್ಯಕ್ತಿಯ ಸುತ್ತ ಕಥೆ ಸಾಗುತ್ತದೆ. ನಿಜ ಜೀವನದಲ್ಲಿ ನಗು ನಗುತ್ತಲೇ ಇರುವ ನನಗೆ ಈ ಕಥೆ ಸಂಪೂರ್ಣ ತದ್ವಿರುದ್ಧ. ಪ್ರೇಕ್ಷಕರಿಗೆ ಇಷ್ಟವಾಗುತ್ತದೆ' ಎನ್ನುತ್ತಾರೆ ರಮೇಶ್.
ಅವರ ಮಾತು, 'ಛತ್ರಿಗಳ' ಕಡೆಗೆ ಹೊರಳುತ್ತದೆ. ಎಸ್.ನಾರಾಯಣ್, ಮೋಹನ್ ಹಾಗೂ ರಮೇಶ್ ಅವರದ್ದು ಹಳೇ ಕಾಂಬಿನೇಷನ್. ಇವರ ಅಭಿನಯದಲ್ಲಿ 'ಕುರಿಗಳು ಸಾರ್ ಕುರಿಗಳು', 'ಕತ್ತೆಗಳು ಸಾರ್ ಕತ್ತೆಗಳು' ಚಿತ್ರಗಳು ತೆರೆಕಂಡು ಗಳಿಕೆ ಮತ್ತು ಜನಪ್ರಿಯತೆಯಲ್ಲಿ ಹೊಸ ದಾಖಲೆ ಮಾಡಿದವು. ಇದೀಗ ಸಾಕಷ್ಟು ವರ್ಷಗಳ ನಂತರ 'ಛತ್ರಿಗಳು ಸಾರ್ ಛತ್ರಿಗಳು' ಚಿತ್ರದ ಮೂಲಕ ಒಂದಾಗಿದ್ದಾರೆ. ಮೂವರೂ ಈಗ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಕಾರಣ ಚಿತ್ರ ವಿಶೇಷ ಎನಿಸುತ್ತದೆ. ಅಂದಹಾಗೆ ಈ ಚಿತ್ರ ಎಸ್.ನಾರಾಯಣ್ ನಿರ್ದೇಶನದಲ್ಲಿ ಮೂಡಿದ್ದರೂ ಕಥೆ ಮಾತ್ರ ರಮೇಶ್ ಅವರದ್ದೇ.
'ನಾನು ನಿರ್ದೇಶಕನಾಗಬೇಕೆಂಬ ಕನಸು ಕಂಡ ದಿನಗಳಲ್ಲಿ 'ಛತ್ರಿಗಳು' ಚಿತ್ರದ ಕಥೆಯ ಒಂದು ಸಾಲು ಹೊಳೆದಿತ್ತು. ಆಗಲೇ ಕಥೆಯನ್ನು ರಫ್ ಆಗಿ ಬರೆದಿಟ್ಟಿದ್ದೆ. ಒಮ್ಮೆ ನಾರಾಯಣ್ ಅವರಿಗೆ ಕಥೆ ಹೇಳಿದಾಗ 'ನಾವು ಮೂವರು (ನಾರಾಯಣ್, ರಮೇಶ್, ಮೋಹನ್) ಮತ್ತೆ ಸೇರಲು ಸರಿಯಾದ ಕಥೆ ಇದು' ಎಂದು ಒಪ್ಪಿಗೆ ಕೊಟ್ಟರು. ಈಗಿನ ಕೆಲ ಘಟನೆಗಳನ್ನು ಸೇರಿಸಿಕೊಂಡು ಕಥೆ ಮಾಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. 30 ದಿನ ಚಿತ್ರೀಕರಣ ಮಾಡಿದ್ದೇವೆ. ಪಕ್ಕಾ ಹಾಸ್ಯಮಯ ಚಿತ್ರ. ಪ್ರೇಕ್ಷಕರು ಹೊಟ್ಟೆ ತುಂಬಾ ನಗುವುದು ಗ್ಯಾರಂಟಿ' ಎನ್ನುತ್ತಾರೆ ರಮೇಶ್.
ಸಾಧುಕೋಕಿಲಾ, ರಂಗಾಯಣ ರಘು, ಉಮಾಶ್ರೀ, ಬುಲೆಟ್ ಪ್ರಕಾಶ್ ಸೇರಿದಂತೆ ಏಳೆಂಟು ಮಂದಿ ಪ್ರಮುಖ ಹಾಸ್ಯ ನಟರು, 13 ಮುಖ್ಯ ಕಲಾವಿದರು ಚಿತ್ರದಲ್ಲಿದ್ದಾರೆ. ವಿಶೇಷ ಅಂದರೆ 80ರ ದಶಕದ ಕೆಲ ಗೆಟಪ್ಗಳನ್ನು ಸಖತ್ ಹ್ಯೂಮರಸ್ ಆಗಿ ಬಳಸಿಕೊಂಡಿದ್ದಾರೆ. ಉದಾ: ಅಮರ್, ಅಕ್ಬರ್, ಅಂಥೋನಿಯ ಪಾತ್ರಗಳು. ವಿಶೇಷವಾಗಿ ರಮೇಶ್ ಅರವಿಂದ್ ಅವರ ನಿಗ್ರೋ ಗೆಟಪ್ ತುಂಬಾ ಚೆನ್ನಾಗಿದೆಯಂತೆ. 'ಛತ್ರಿಗಳು' ಹಾಸ್ಯ ಚಿತ್ರವಾದರೂ 4 ಅದ್ದೂರಿ ಮತ್ತು ಕರ್ಷಿಯಲ್ ಹಾಡುಗಳನ್ನು ಅರ್ಜುನ್ ಜನ್ಯ ಕೊಟ್ಟಿದ್ದಾರೆ ಎಂಬುದು ರಮೇಶ್ರ ವಿವರಣೆ. 'ಛತ್ರಿಗಳು' ನಂತರ 'ತುಂತುರು' ಬರಲಿದೆ. ಇದು ಪ್ರಸ್ತುತ ಘಟನೆಗಳೊಂದಿಗೆ ಸಾಗುವ ಸಸ್ಪೆನ್ಸ್ ಸಿನಿಮಾ. ಈ ಮೂರು ಚಿತ್ರಗಳ ನಂತರ ನನ್ನದೇ ನಿರ್ದೇಶನದಲ್ಲಿ ಸಿನಿಮಾ ಶುರುವಾಗಲಿದೆ. ಅದು ಕೂಡ ಕಾಮಿಡಿ ಚಿತ್ರ. ಈಗಾಗಲೇ ಕಥೆ ರೆಡಿ ಮಾಡಿಕೊಂಡಿದ್ದೇನೆ. ಮತ್ತೆ ನಿರ್ದೇಶಕನಾಗಿ ನಿಮ್ಮ ಮುಂದೆ ಬರುತ್ತೇನೆ' ಎನ್ನುತ್ತಾರೆ ರಮೇಶ್.
ಆಲ್ ದಿ ವೆರಿಬೆಸ್ಟ್ ಎನ್ನೋಣವೇ?
- ಆರ್. ಕೇಶವಮೂರ್ತಿ