'ಲೈಫ್ ಆಫ್ ಪೈ'ಗೆ ಆಸ್ಕರ್ ಬಂದ ಸಂಭ್ರಮ ಕೇವಲ ಯಾರೋ ಒಬ್ಬರಿಗೆ ಸೇರಿದ್ದಲ್ಲ. ಅದು ಹಲವರ ಪಾಲಿಗೆ ಹಂಚಿಹೋಗುವಂಥದ್ದು. ಅಂಥ ಫಲಾನುಭವಿಗಳ ಸಾಲಿನಲ್ಲಿರುವವರು ನಮ್ಮ ಬೆಂಗಳೂರಿನ ಹುಡುಗ ವರ್ಧನ್ ಮೊಗೇರಿ.
ಒಂದರ್ಥದಲ್ಲಿ ಹೇಳುವುದಾದರೆ 'ಲೈಫ್ ಆಫ್ ಪೈ'ನ ಯಶಸ್ಸು ವರ್ಧನ್ ಅವರಿಗೂ ಲೈಫ್ ನೀಡಿರುವುದು ಸುಳ್ಳಲ್ಲ. ಈ ಚಿತ್ರಕ್ಕೆ ಸಿಕ್ಕಿರುವ ನಾಲ್ಕು ಆಸ್ಕರ್ಗಳ ಪಟ್ಟಿಯಲ್ಲಿ ವಿಎಫ್ಎಕ್ಸ್ ವಿಭಾಗದಲ್ಲಿ ಬಂದಿರುವ ಪ್ರಶಸ್ತಿಯೂ ಸೇರಿರುವುದು ವರ್ಧನ್ರ ಖುಷಿಗೆ ಕಾರಣ. ಏಕೆಂದರೆ ವರ್ಧನ್ ಕೂಡ ಚಿತ್ರಕ್ಕೆ ವಿಎಫ್ಎಕ್ಸ್ ಕೆಲಸ ಮಾಡಿದ 'ರಿದಮ್ ಅಂಡ್ ಹ್ಯೂಸ್' ತಂಡದ ಸದಸ್ಯರು. ಆಸ್ಕರ್ ಪ್ರಶಸ್ತಿಯ ಮೂಲಕ ವರ್ಧಮಾನಕ್ಕೆ ಬರುತ್ತಿರುವ ಹೊಸಪ್ರತಿಭೆಗಳಲ್ಲಿ ವರ್ಧನ್ ಕೂಡ ಒಬ್ಬರು.
ಮೂಲ ಕ್ಯಾಲಿಫೋರ್ನಿಯಾದ 'ರಿದಮ್ ಅಂಡ್ ಹ್ಯೂಸ್' ತಂಡ ಒಟ್ಟು 1400 ಕಲಾವಿದರಿಗೆ ಅವಕಾಶ ಕೊಟ್ಟಿರುವ ಸಂಸ್ಥೆ. ಅದರಲ್ಲಿ 600 ಜನ ಲೈಫ್ ಆಫ್ ಪೈಗೆ ಕೆಲಸ ಮಾಡಿದ್ದಾರೆ ಎಂಬುದು ವಿಶೇಷ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವರ್ಧನ್, ಮುಂಬೈನಲ್ಲಿ ಆಧುನಿಕ ಅನಿಮೇಷನ್ ಕಲೆಗಳನ್ನು ಅರೆದು ಕುಡಿದವರು. ಎರಡು ವರ್ಷಗಳ ಹಿಂದೆ ರಿದಮ್ ಅಂಡ್ ಹ್ಯೂಸ್ ಕಂಪನಿ ಸೇರಿದ ವರ್ಧನ್ ಅವರ ಅನಿಮೇಶನ್ ಕೈ ಚಳಕ ಲೈಫ್ ಆಫ್ ಪೈ ಚಿತ್ರದಲ್ಲಿ ಬೆಳಕಿಗೆ ಬಂದಿದೆ.
ಈಗ ಅದಕ್ಕೆ ಆಸ್ಕರ್ ಕಿರೀಟವೂ ಸಿಕ್ಕಿರುವುದು ಅವರ ಉತ್ಸಾಹವನ್ನು ಇಮ್ಮಡಿಸಿದೆ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ಗಾಗಿ ಸುಮಾರು ಎಂಟು ತಿಂಗಳು ಕೆಲಸ ಮಾಡಿದ್ದೆವು, ಅದನ್ನು ನಿರ್ದೇಶಕ ಆಂಗ್ ಲೀ ಅಷ್ಟೇ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ, ಆಸ್ಕರ್ ಬಂದ ಈ ಕ್ಷಣ, ನಮ್ಮ ಸ್ಪೆಷಲ್ ಎಫೆಕ್ಟ್ಸ್ ತಂಡದ ಎಲ್ಲರಿಗೂ ನಿಜಕ್ಕೂ ಸ್ಪೆಷಲ್ ಮೊಮೆಂಟ್ ಎನ್ನುವ ವರ್ಧನ್ ಬೆಂಗಳೂರಿನ ಪತ್ರಕರ್ತ ಜಯರಾಮ ಅಡಿಗ ಅವರ ಪುತ್ರ.
ಆಸ್ಕರ್ ಮತ್ತು ವರ್ಧನ್
ನಾನು ಆರು ವರ್ಷ ಬೆಂಗಳೂರಿನ ಪ್ರೇಮ್ಬಾಕ್ಸ್ ಎಂಬ ಕಂಪನಿಯಲ್ಲಿ ಫ್ಯಾಕಲ್ಟಿ ಆಗಿ ಕೆಲಸ ಮಾಡುತ್ತಿದ್ದೆ. ಅನಿಮೇಶನ್ ನನ್ನ ಇಷ್ಟದ ಸಬ್ಜೆಕ್ಟ್. 'ಲೈಫ್ ಆಫ್ ಪೈ' ಚಿತ್ರಕ್ಕೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅದು ಸಿಕ್ಕಿದ್ದು ನಾನು ಈಗ ಕೆಲಸ ಮಾಡುತ್ತಿರುವ ರಿದಮ್ ಅಂಡ್ ಹ್ಯೂಸ್ ಕಂಪನಿಯ ಮೂಲಕ. ಅದು ಕಂಪನಿಗೆ ಸಿಕ್ಕ ಪ್ರಾಜೆಕ್ಟ್.
'ಲೈಫ್ ಆಫ್ ಪೈ'ಗೆ ಸಿಕ್ಕ ಆಸ್ಕರ್ ಒಬ್ಬೊಬ್ಬರಿಗೆ ಸಿಕ್ಕ ವೈಯಕ್ತಿಕ ಪ್ರಶಸ್ತಿ ಅಲ್ಲ, ಅದು ಎಲ್ಲರಿಗೂ ಸಲ್ಲುವಂಥದ್ದು ಎಂಬ ಅಂಶವೇ ಇನ್ನಷ್ಟು ಕೆಲಸ ಮಾಡಲು ಹುರುಪು ನೀಡುತ್ತದೆ.
ಸುಮಾರು 700 ಶಾಟ್ಗಳನ್ನು ನಿರ್ವಹಿಸುವ ಅಪರೂಪದ ಆಫರ್ ನಮ್ಮ ಸ್ಪೆಷಲ್ ಎಫೆಕ್ಟ್ಸ್ ತಂಡಕ್ಕೆ ಸಿಕ್ಕಿತ್ತು. ಇಂಥಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಆಶಯ ನಮ್ಮದಾಗಿತ್ತು. ಅದಕ್ಕೆ ತಕ್ಕಂತೆ ನಮ್ಮ ಕೆಲಸಕ್ಕೆ ಚಿತ್ರದ ಸೂಪರ್ವೈಸರ್ ಮತ್ತು ನಿರ್ದೇಶಕರಿಂದ ರೆಗ್ಯುಲರ್ ಫೀಡ್ಬ್ಯಾಕ್ ಸಿಗುತ್ತಿದ್ದುದು ಇನ್ನಷ್ಟು ಪರಿಣಾಮಕಾರಿಯಾದ ಕೆಲಸ ಮಾಡಲು ಪ್ರೇರಣೆಯಾಯ್ತು.
ಸಾಧಾರಣವಾಗಿ 3ಡಿ ಚಿತ್ರಗಳಲ್ಲಿ ಒಂದೇ ಕ್ಯಾಮೆರಾದಲ್ಲಿ ಶೂಟ್ ಮಾಡಿ ನಂತರ ಅದನ್ನು ಮರ್ಜ್ ಮಾಡುತ್ತಾರೆ. ಆದರೆ ಇಲ್ಲಿ ಎರಡು ಕ್ಯಾಮೆರಾ ಬಳಸಿ ಚಿತ್ರೀಕರಿಸಿದ ಪೋರ್ಷನ್ಗಳನ್ನು ಉಪಯೋಗಿಸಿಕೊಂಡು ಮಾಡಿದ ಕೆಲಸ ಖುಷಿಕೊಟ್ಟಿತು. 'ಲೈಫ್ ಆಫ್ ಪೈ'ನ ನಂತರ ಮೂರು ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಅಲ್ಲಿ ಸಿಕ್ಕ ತೃಪ್ತಿ ಬೇರೆಲ್ಲೂ ಸಿಕ್ಕಿಲ್ಲ.
ಈಗ ಸದ್ಯಕ್ಕೆ 'ಸೆವೆಂಥ್ ಸನ್' ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದೇನೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತವಿದೆ ಎಂಬುದು ವಿಶೇಷ. ಅಲ್ಲದೆ '300' ಚಿತ್ರದ ಸೀಕ್ವೆಲ್ನಲ್ಲೂ ವರ್ಧನ್ ತೊಡಗಿಸಿಕೊಂಡಿದ್ದೇನೆ.