ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರಕ್ಕೆ ಆರಂಭದಿಂದಲೂ ಇಂಥ ಅಡ್ಡಿ ಆತಂಕಗಳು ಇದ್ದವು. ಆದರೆ, ಈಗ ಅದಕ್ಕೆಲ್ಲ ಒಂದು ಕೊನೆ ಹಾಡುವ ಹಂತ. ಚಿತ್ರದಲ್ಲಿ ಈ ಮೊದಲು ಶ್ರೀಯಾ ಜಾಗದಲ್ಲಿ ಅಭಿನಯಿಸಬೇಕಿದ್ದ ರಮ್ಯಾ ಗೆಟ್ ಔಟ್ ಆಗಿದ್ದಕ್ಕೆ ಬೇಸರ ಮಾಡಿಕೊಂಡಿದ್ದ ರಮ್ಯಾ ಗೆಳೆಯರ ಬಳಗ, ಪ್ರೇಕ್ಷಕ ಚಂದ್ರನಿಗೆ ಕೈಚಾಚುತ್ತಿರುವಾಗ ಚಂದ್ರನ ಕಾಲೆಳೆಯುವ ಪ್ರಯತ್ನ ಮಾಡುತ್ತಿರುವುದೂ ನಡೆದೇ ಇದ್ದರೂ ತಮ್ಮ ಸಿನಿಮಾ ಕೂಡ ಚೆನ್ನಾಗಿ ನಡೆಯುತ್ತಿದೆ ಎಂಬುದು ಇಂಡಿಯಾ ಕ್ಲಾಸಿಕ್ ಆರ್ಟ್ಸ್‌ನ ರೂಪಾ ಅಯ್ಯರ್ ಅವರ ಖುಷಿ.
'ನನಗೆ ಮೊದಲೇ ಗೊತ್ತಿತ್ತು. ಇದು ಕೌಟುಂಬಿಕ ಸಿನಿಪ್ರಿಯರನ್ನು ಸೆಳೆಯುವ ಚಿತ್ರ ಎಂದು. ಹಾಗಾಗಿ ನಾನು ಧೂಮ್ ಧಮಾಕಾ ಎನ್ನುವಂಥ ಓಪನಿಂಗ್ ಅನ್ನು ನಿರೀಕ್ಷಿಸಿರಲಿಲ್ಲ. ಆದರೆ ಈಗ ನಾನಂದುಕೊಂಡಂತೆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಯೇ ಬರುತ್ತಿದೆ. ವಿಶೇಷವಾಗಿ ಸಿನಿಮಾಗಳಿಂದ ದೂರವಿದ್ದ ಮಹಿಳಾ ಪ್ರೇಕ್ಷಕರು ಹೆಚ್ಚಾಗಿ ಬರುತ್ತಿರುವುದು ನಿಜಕ್ಕೂ ಒಬ್ಬ ಮಹಿಳಾ ನಿರ್ದೇಶಕಿಯಾಗಿ ಖುಷಿಕೊಡುವ ಸಂಗತಿ' ಎನ್ನುತ್ತಾರೆ ರೂಪಾ.
ಚಿತ್ರದ ಕಥೆ ಮತ್ತು ಚಿತ್ರಕಥೆಯಂತೆ 'ಚಂದ್ರ' ಚಿತ್ರದ ಕಲೆಕ್ಷನ್ ಕೂಡ ಒಂದೇ ಗ್ರಾಫ್‌ನಲ್ಲಿ ದೃಢವಾಗಿದೆ ಎಂಬುದು ಬಾಕ್ಸ್ ಆಫೀಸ್ ರಿಪೋರ್ಟ್. ಕಳೆದ ವಾರ ಬಿಡುಗಡೆಯಾದ ನಾಲ್ಕು ಚಿತ್ರಗಳಲ್ಲಂತೂ 'ಚಂದ್ರ' ಟಾಪ್ ರ್ಯಾಂಕಿಂಗ್ ಪಡೆದುಕೊಂಡಿದೆ. ಮೆಲ್ಲಮೆಲ್ಲನೆ ಪ್ರೇಕ್ಷಕರು ಚಿತ್ರಮಂದಿರದತ್ತ ಪ್ರಯಾಣ ಬೆಳೆಸುತ್ತಿದ್ದಂತೆ 'ಚಂದ್ರ' ಚಿತ್ರತಂಡ ಕೂಡಾ ಪ್ರಚಾರದ ಕೆಲಸಕ್ಕೆ ಇನ್ನಷ್ಟು ಅಬ್ಬರ ತುಂಬುವ ಪ್ರಯತ್ನ ಮಾಡುತ್ತಿದೆ. ಶೀಘ್ರದಲ್ಲೇ ರಾಜ್ಯದ ಚಿತ್ರಮಂದಿರಗಳ ಭೇಟಿಗೆ ಸಮಯ ನಿಗದಿ ಮಾಡುತ್ತಿದೆ.
ಒಂದು ಸಾಧಾರಣ ಕಥೆಯಿದ್ದರೂ ತನ್ನ ಪ್ರೆಸೆಂಟೇಶನ್‌ನಿಂದಾಗಿ 'ಚಂದ್ರ' ಗಮನ ಸೆಳೆಯುತ್ತಿದೆ. ಚಿತ್ರದ ಕಥೆ ಪ್ರೇಕ್ಷಕರಿಗೆ ತುಂಬಾ ಪ್ಲೆಸೆಂಟ್ ಎನಿಸುವ ಅನುಭವ ಕೊಡುವಂಥದ್ದು. ಪ್ರೀತಿ ಪ್ರೇಮದ ಕಥೆಯಲ್ಲಿ ಸೌಂದರ್ಯ ಪ್ರಜ್ಞೆ ತುಂಬಿ ಅದಕ್ಕೆ ಸಂಗೀತದ ಸ್ಪರ್ಶ ಕೊಟ್ಟ ರೂಪಾ ಅಯ್ಯರ್ ಪ್ರಯತ್ನ ಫಲ ನೀಡುತ್ತಿದೆ. ಚಿತ್ರದ ಪ್ರಮುಖ ಆಕರ್ಷಣೆ ನಾಯಕಿ ಶ್ರೀಯಾ ಎಂಬುದು ಎಲ್ಲರ ಮಾತು. ಹಾಗಾಗಿ, ನಾಯಕಿಯನ್ನು ನೋಡಲೆಂದೇ ಪ್ರೇಕ್ಷಕರು ಸಿನಿಮಾಕ್ಕೆ ಬರುವಂಥ ಸಂಪ್ರದಾಯ ಮತ್ತೆ ಶುರುವಾಗಿರುವುದು ನನ್ನ ಚಿತ್ರದ ಮೂಲಕ ಎಂದು ಥ್ರಿಲ್ ಆಗುತ್ತಾರೆ ರೂಪಾ ಅಯ್ಯರ್.
'ಮುಖಪುಟ' ಚಿತ್ರದ ಮೂಲಕ ತಮ್ಮ ನಿರ್ದೇಶನದ ಝಲಕ್ ತೋರಿಸಿದ್ದ ರೂಪಾ ಅಯ್ಯರ್ ಅವರ ಎರಡನೇ ಪ್ರಯತ್ನ 'ಚಂದ್ರ'. ಅವರಿಗೀಗ, ತಮ್ಮ ಎರಡನೇ ಚಿತ್ರಕ್ಕೂ ಫಸ್ಟ್ ಕ್ಲಾಸ್ ಎಂದು ಪ್ರಥಮ ದರ್ಜೆಯನ್ನೇ ಕೊಟ್ಟದ್ದಾನೆ ಪ್ರೇಕ್ಷಕ. 'ಚಂದ್ರ' ಚಿತ್ರ ಕೇವಲ ಸಂಗೀತ, ಸೌಂದರ್ಯದಿಂದಲೇ ಎಲ್ಲರ ಗಮನಸೆಳೆಯುತ್ತಿದೆ ಎನಿಸಿದರೂ ಚಿತ್ರದಲ್ಲಿ ಶ್ರೀಯಾ ಅವರದ್ದು ಮೈಮರೆತ ಮತ್ತು ಮೈಮರೆಸುವ ಅಭಿನಯ.
ಚಿತ್ರದುದ್ದಕ್ಕೂ ಪ್ರತಿ ಫ್ರೇಮ್‌ನಲ್ಲೂ ಶ್ರೀಯಾ ಅವರ ಸೌಂದರ್ಯ ಸಮರವನ್ನು ನೋಡಿ ಖುಷಿಪಡುತ್ತಿದ್ದರೂ ನಾಯಕ ಪ್ರೇಮ್ ಕೂಡ ಎಂದಿಗಿಂತ ಹೆಚ್ಚು ಚಾರ್ಮಿಂಗ್ ಆಗಿ ಕಾಣಿಸಿದ್ದಾರೆ. ಹಾಗಾಗಿ, ಚಿತ್ರದ ನಾಯಕ ಪ್ರೇಮ್ ಅಂತೂ ಹ್ಯಾಂಡ್‌ಸಮ್ ಹೀರೋ ಎಂಬ ತಮ್ಮ ಬಿರುದಿಗೆ ತಕ್ಕಂತೆ ಕಾಣಿಸಿಕೊಂಡಿದ್ದಾರೆ ಎಂಬುದು ಪ್ರೇಮ್‌ರ ಮಹಿಳಾ ಅಭಿಮಾನಿಗಳ ಮಾತು. ಇನ್ನು ಪ್ರಣಯರಾಜ ಶ್ರೀನಾಥ್ ಅವರಿಗೂ ಹೇಳಿ ಮಾಡಿಸಿದ ಪ್ರೇಮ ಚಿತ್ರ. ಜೊತೆಗೆ ತಮಿಳಿನ ಕಾಮಿಡಿ ಸ್ಟಾರ್ ವಿವೇಕ್‌ರ ಕನ್ನಡದ ಕಂಪು.
ಕೇವಲ ಕನ್ನಡದ ಪ್ರೇಕ್ಷಕರಷ್ಟೇ ಅಲ್ಲದೆ ಪರಭಾಷಾ ಪ್ರೇಕ್ಷಕರೂ ಕೂಡ ಕನ್ನಡ ಸಿನಿಮಾ ನೋಡುತ್ತಿದ್ದರೆ ಅದಕ್ಕೆ ಕಾರಣ ಚಿತ್ರದ ನಾಯಕಿ ಶ್ರೀಯಾ. ಕರ್ನಾಟಕದ ಶ್ರೀಯಾ ಅಭಿಮಾನಿಗಳು ಮೊದಲ ದಿನವೇ ಚಿತ್ರಮಂದಿರಗಳ ಮುಂದೆ ಹಾಜರಿದ್ದು, ಹಾಲಿನಂಥ ಸುಂದರಿಯ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಹಾಗಾಗಿ ತೆಲುಗು ಪ್ರೇಕ್ಷಕರೂ ಕೂಡ ಕನ್ನಡ ಸಿನಿಮಾ ನೋಡುವಂತೆ ಮಾಡಿದ್ದು ಚಂದ್ರ ಚಿತ್ರದ ಹೆಗ್ಗಳಿಕೆ ಎನ್ನಬಹುದು.
ನನ್ನ ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆ ನೋಡಿ ನನ್ನ ಪ್ರಯತ್ನ ಸಾರ್ಥಕವಾಗಿದೆ ಎನಿಸುತ್ತಿದೆ. ಹಾಗಂತ, ನನ್ನ ಚಿತ್ರ ಅಷ್ಟು ಇಷ್ಟು ಕೋಟಿ ಬಾಚಿದೆ ಎಂದು ಹೇಳುವುದಿಲ್ಲ. ಆದರೆ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ಎಲ್ಲ ಲಕ್ಷಣಗಳನ್ನೂ ತೋರಿಸಿದೆ. ಚಿತ್ರದ ಸದ್ಯದ ಗಳಿಕೆಯ ಬಗ್ಗೆ ನನಗೆ ಖುಷಿ ಇದೆ. ಮುಂದಿನ ವಾರದ ಹೊತ್ತಿಗೆ ನನ್ನ ಚಿತ್ರದ ಕಲೆಕ್ಷನ್ ಬಗ್ಗೆ ಸ್ಪಷ್ಟ ಚಿತ್ರಣ ಕೊಡುತ್ತೇನೆ ಎನ್ನುತ್ತಾರೆ ಚಂದ್ರ ಚಿತ್ರಕ್ಕೆ ನಿರ್ಮಾಪಕಿ ಕಮ್ ನಿರ್ದೇಶಕಿಯಾಗಿರುವ ರೂಪಾ.