'ಚಿನ್ನಾರಿ ಮುತ್ತ'ರನ್ನು ಇನ್ನು ಮುಂದೆ 'ಬಿಗ್ ಬಾಸ್' ಅಂತ ಕರೆಯಬಹುದೇ?
ದಯವಿಟ್ಟು ಹಾಗೆ ಕರೆಯಬೇಡಿ. ಯಾಕೆಂದರೆ ಬಿಗ್ ಬಾಸ್ ನಾನಲ್ಲ. ನಾನು ಬಿಗ್ ಬಾಸ್ ಮನೆಯ ಸದಸ್ಯ ಅಷ್ಟೆ. ಒಂದು ವೇಳೆ ಯಾರಾದರೂ ಬಿಗ್ ಬಾಸ್ ವಿಜಯ್ ಅಂತ ಕರೆದಾಗ ಬಹುಶಃ ಶೋನಿಂದ ಗುರುತಿಸುತ್ತಿದ್ದಾರೆ ಹೊರತು ನನ್ನ ಬಿಗ್ ಬಾಸ್ ಅಂತ ಕರೆಯುತ್ತಿಲ್ಲ ಎಂದುಕೊಳ್ಳುತ್ತೇನೆ.
ಈಗ ಬಿಗ್ ಬಾಸ್ ನಿಮ್ಮ ಪ್ರಕಾರ ಲೈಫಾ? ಗೇಮ್ ಶೋನಾ?
ಖಂಡಿತ ಇದು ಗೇಮ್ ಅಲ್ಲ, ಜೀವನ. ಒಂದು ದೊಡ್ಡ ಮನೆ, ಅಲ್ಲಿ ಹತ್ತಾರು ಮಂದಿ ಸದಸ್ಯರು, ಆ ಮನೆಯಲ್ಲಿ ಒಂದಿಷ್ಟು ನೀತಿ, ನಿಯಮಗಳು, ಅವುಗಳ ಜೊತೆ ಹೊಂದಿಕೊಂಡು ಬದುಕುವುದು. ಇದು ಒಂದು ಕುಟುಂಬದ ಕಲ್ಪನೆಯಂತೆ. ಹೀಗಾಗಿ ಬಿಗ್ ಬಾಸ್ ಗೇಮ್ ಅಲ್ಲ.
ನೀವೇ ಗುರುತಿಸಿರುವಂತೆ ನಿಮ್ಮ ಗೆಲುವಿಗೆ ಕಾರಣವಾದದ್ದೇನು?
ನಾನು ನಟನಾಗಿ ಹೇಗಿದ್ದೆನೋ ಬಿಗ್ ಬಾಸ್ ಮನೆಯಲ್ಲೂ ಹಾಗೆ ಇರಬೇಕೆಂಬ ನನ್ನ ದೃಢ ನಂಬಿಕೆ. ಒಳಗಡೆ ಹೋದ ಮೇಲೂ ಜನ ನನ್ನ ಮೇಲೆ ತೋರಿಸಿದ ಪ್ರೀತಿ. ಅಲ್ಲಿ ನಾನು ಆಟವಾಡಲು ಹೋಗಲಿಲ್ಲ. ಬದುಕನ್ನು ಅರ್ಥ ಮಾಡಿಕೊಳ್ಳಲು ಹೋಗಿದ್ದೆ. ಜೊತೆಗೆ ನನ್ನ ದೌರ್ಬಲ್ಯಗಳನ್ನು ನಾನೇ ಕಡಿಮೆ ಮಾಡಿಕೊಳ್ಳುತ್ತ ಬಂದೆ. ಇವು ನನ್ನ ಗೆಲುವಿಗೆ ಕಾರಣವಾಗಿರಬಹುದು.
ಒಂದು ವೇಳೆ ನಿರೂಪಕರಾಗಿ ಸುದೀಪ್ ಇಲ್ದಿದ್ರೆ ನೀವು ಶೋನಲ್ಲಿ ಭಾಗವಹಿಸುತ್ತಿದ್ರೆ?
ಭಾಗವಹಿಸಬೇಕಾ, ಬೇಡವಾ? ಅಂತ ಯೋಚನೆ ಮಾಡುತ್ತಿದ್ದೆ. ಆದರೆ ಹೋಗ್ತಾನೇ ಇರಲಿಲ್ಲ ಅಂತ ಹೇಳಲಾರೆ. ಸುದೀಪ್ ಇಲ್ಲದಿದ್ದರೆ ಸ್ವರ್ಧಿಸುವ ಬಗ್ಗೆ ಹೆಚ್ಚಾಗಿ ಯೋಚಿಸುತ್ತಿದ್ದೆ ಅಷ್ಟೆ.
98 ದಿನಗಳ ಪಯಣದಲ್ಲಿ ಮರೆಯಲಾಗದ ಘಟನೆಗಳು?
ತುಂಬಾ ಘಟನೆಗಳಿವೆ. ಆದರೆ ಶೋ ಮುಗಿಯುವ ತನಕ ನಾವು ಪರಸ್ಪರ ಒಬ್ಬರ ಮೇಲೆ ಒಬ್ಬರು ಹಾಸ್ಯ ಮಾಡಿಕೊಂಡು ನಕ್ಕಿದ್ದು, ನಮ್ಮ ಪ್ರತಿಭೆಯನ್ನು ತೋರಿಸುವ ಟಾಸ್ಕ್ಗಳಲ್ಲಿ ಭಾಗವಹಿಸಿದ್ದು ಮರೆಯಲಾಗದು.
ನಿಮ್ಮ ಪ್ರತಿಸ್ಪರ್ಧಿ ಅರುಣ್ ಸಾಗರ್ ಕುರಿತು ನಿಮ್ಮ ಅಭಿಪ್ರಾಯ?
ಬಿಗ್ ಬಾಸ್ಗೆ ಹೋಗುವ ಮುನ್ನ ನಾನು ಅರುಣ್ ಸಾಗರ್ರನ್ನು ಕೇವಲ ಹೆಸರಿಟ್ಟು ಕರೆಯುತ್ತಿದ್ದೆ. ಈಗ ಅರುಣ್ ಅಣ್ಣ ಅಂತ ಕರೆಯುತ್ತೇನೆ. ಅವರಲ್ಲಿ ಅಣ್ಣನ ಗುಣಗಳನ್ನು ಕಂಡಿದ್ದೇನೆ. ನಮ್ಮ ನಡುವೆ ಒಂದು ಗಟ್ಟಿ ಬಾಂಧವ್ಯ ಏರ್ಪಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅರುಣ್ ಅದ್ಭುತ ಪ್ರತಿಭಾವಂತ.
ನೀವು ಒಬ್ಬ ಸಿನಿಮಾ ನಟ. ಜನಸಾಮಾನ್ಯರಿಗೆ ಸಿನಿಮಾದವರ ಮೇಲೆ ಗೌರವ ಮತ್ತು ಪ್ರೀತಿ ಇರುತ್ತದೆ. ಆದರೆ ನೀವು ಎಲ್ಲರ ಮುಂದೆ ಗೋಳೋ ಅಂತ ಅತ್ತಿದ್ದೀರಿ, ಜಗಳವಾಡಿದ್ದೀರಿ, ಕೋಪ ಮಾಡಿಕೊಂಡಿದ್ದೀರಿ, ಬೈದಿದ್ದೀರಿ... ಇದನ್ನು ನೋಡಿರುವ ಜನ ಮುಂದೆ ನಿಮ್ಮನ್ನು ಮತ್ತು ನಿಮ್ಮ ಸಿನಿಮಾಗಳನ್ನು ಯಾವ ರೀತಿ ಸ್ವೀಕರಿಸಬಹುದು?
ಜನಕ್ಕೆ ನನ್ನ ಬಗ್ಗೆ ಎಲ್ಲ ಗೊತ್ತಿದೆ. ಇಷ್ಟು ದಿನ ಅವರು ನನ್ನ ಒಬ್ಬ ನಟನಾಗಿ ನೋಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಾಮಾನ್ಯ ವಿಜಯ್ರನ್ನು ಕಂಡಿದ್ದಾರೆ. ಈಗ ಜನಕ್ಕೆ ನಿಜಕ್ಕೂ ತುಂಬಾ ಹತ್ತಿರವಾಗಿದ್ದೇನೆ ಅನ್ನಿಸುತ್ತಿದೆ. ಕೋಪ ಮಾಡಿಕೊಂಡಿದ್ದು ನಿಜ, ಜಗಳವಾಡಿದ್ದೂ ಹೌದು, ಬೈದಿದ್ದೀನಿ ಕೂಡ. ಯಾಕೆಂದರೆ ನಾನು ಮನುಷ್ಯ ತಾನೇ?
ಬಿಗ್ ಬಾಸ್ ಮನೆಯಲ್ಲಿ ಗಲಾಟೆ, ಜಗಳ ನಡೆಯುತ್ತಿದ್ದಾಗ ಸಾಕಷ್ಟು ಸಂದರ್ಭಗಳಲ್ಲಿ 'ನನಗ್ಯಾಕೆ' ಅಂತ ನಿಮ್ಮ ಪಾಡಿಗೆ ನೀವು ಇದ್ದಿದ್ದುಂಟು. ಹಾಗೆ ಮೌನವಾಗಿರುವುದೇ ಒಳ್ಳೆಯತನವೇ?
ಮೂಲತಃ ನಾನು ಮೌನಿ. ಯಾವುದೇ ಸಮಸ್ಯೆ ನನ್ನವರೆಗೂ ಬಂದಾಗ ನಾನು ಪ್ರತಿಕ್ರಿಯಿಸಿದ್ದೇನೆ. ಸುಖಾ ಸುಮ್ಮನೆ ಹೋಗಲ್ಲ. ನನಗೆ ನೆಮ್ಮದಿ, ಶಾಂತಿ ಬೇಕು. ಅದಕ್ಕೆ ತೊಂದರೆ ಆದಾಗ ಸುಮ್ಮನಿದ್ದ ಉದಾಹರಣೆಗಳಿಲ್ಲ. ಆದರೆ ನನ್ನ ಅಗತ್ಯವೇ ಬೇಡ, ನೀನು ಯಾರೋ ಮಾತನಾಡಕ್ಕೆ ಅಂತ ಅನ್ನಿಸಿಕೊಳ್ಳುವಂಥ ಗಲಾಟೆಗಳಲ್ಲಿ ಮೂಗು ತೂರಿಸಲ್ಲ. ಯಾಕೆಂದರೆ ಇದು ಮರ್ಯಾದೆ ಪ್ರಶ್ನೆ.
ರಿಯಾಲಿಟಿ ಶೋಗಳ ಅಗತ್ಯವೇನು? ಇದರಿಂದ ಮೌಲ್ಯಗಳನ್ನು ಕಲಿಯಬಹುದೇ?
ರಿಯಾಲಿಟಿ ಶೋಗಳು ಬೇಕೇ ಬೇಡವೇ ಎನ್ನುವುದು ನೋಡುವ ಜನರನ್ನು ಅವಲಂಬಿಸಿದೆ. ಆದರೆ ನಿಜಕ್ಕೂ ಇಂಥ ಶೋಗಳಿಂದ ಕಲಿಯುವುದು ಸಾಕಷ್ಟಿದೆ. 'ನೀವು ನಿಮ್ಮ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತೀರಿ?' ಅಂತ ಬಿಗ್ ಬಾಸ್ನ ಪ್ರಶ್ನೆಗೆ ಉತ್ತರಿಸುವಾಗ ನನ್ನ ಮನೆಯ ಬದುಕಿನ ರೀತಿ ಬೇರೆಯವರಿಗೆ ಗೊತ್ತಾಗುತ್ತದೆ. ಜೊತೆಗೆ ನಾನು ಜೀವನದಲ್ಲಿ ಹೇಗಿರಬೇಕು ಅಂತ ಕಲಿಯುತ್ತೇನೆ. ಇದನ್ನು ನೋಡಿದವರು ಒಂದು ಮಟ್ಟಕ್ಕಾದರೂ ಬದಲಾಗುತ್ತಾರೆಂಬ ನಂಬಿಕೆ ಇದೆ.
ನಿಜ ಹೇಳಿ, ಯಾರು ಇಲ್ಲಿ ಬಿಗ್ ಬಾಸ್? (ನಿರೂಪಕನಾ, ಗೆದ್ದವರಾ, ಹೌದು ಸ್ವಾಮಿ ಎಂದವರಾ, ಕಾರ್ಯಕ್ರಮದ ನಿರ್ವಾಹಕರಾ ಅಥವಾ ವಾಹಿನಿಯಾ?)
ಒಂದು ಪಾತ್ರ. ಮೈಂಡ್, ಹಾರ್ಟ್, ಪವರ್, ಸೋರ್ಸ್... ಇದೆಲ್ಲವೂ ಇರುವ ಒಂದು ಪಾತ್ರವೇ ಬಿಗ್ ಬಾಸ್. ಆದರೆ ನಾನು ಇಲ್ಲಿ ಬಿಗ್ ಬಾಸ್ ಯಾರು? ಅಂತ ಯಾರನ್ನೂ ಪ್ರಶ್ನಿಸಲಿಲ್ಲ. ವೈಯಕ್ತಿಕ ಜೀವನದಲ್ಲಿ ನಾನು ನಂಬುವ ಶಕ್ತಿ ಅಥವಾ ದೇವರನ್ನೇ ನಾನು ಬಿಗ್ ಬಾಸ್ ಎಂದುಕೊಳ್ಳುತ್ತೇನೆ.
ನಾನು ಮತ್ತು ರಾಘವೇಂದ್ರ ಹಗಲು ರಾತ್ರಿ ಈ ಕಾರ್ಯಕ್ರಮದ ಯೋಜನೆಗೆ ದುಡಿದಿದ್ದೇವೆ. ನನಗಿಂತ ರಾಘು ಹೆಚ್ಚು ಕೆಲಸ ಮಾಡಿದ್ದಾರೆ. ನಮ್ಮ ನಿರೀಕ್ಷೆಗಿಂತ ಹೆಚ್ಚಾಗಿಯೆ ಕಾರ್ಯಕ್ರಮ ಗೆದ್ದಿದೆ. ಮೊದಲು ಶೇ. 3ರಿಂದ 3.5ರಷ್ಟು ಜನ ನೋಡುತ್ತಾರೆ ಎಂದುಕೊಂಡಿದ್ವಿ. ಆದರೆ ನಮ್ಮ ನಿರೀಕ್ಷೆಯ ಎರಡು ಪಟ್ಟು ಜನರಿಗೆ ಕಾರ್ಯಕ್ರಮ ತಲುಪಿದೆ. 'ಅಯ್ಯೋ ಇಷ್ಟು ಬೇಗ ಕಾರ್ಯಕ್ರಮ ಮುಗಿಯಿತೇ?' ಎನ್ನುವ ಬೇಸರ ಇದೆ. ಬಿಗ್ ಬಾಸ್ ಸೀಜನ್-2 ಶುರು ಮಾಡುವ ಯೋಚನೆ ಸದ್ಯಕ್ಕಿಲ್ಲ. ಮುಂದೆ ನೋಡಬೇಕು.
- ಪರಮೇಶ್ವರ ಗುಂಡ್ಕಲ್ ಈಟಿವಿ ವಾಹಿನಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ