ಸಿನಿಮಾ ಲೇಖನ

ಕಡ್ಡಿಪುಡಿ ಕಚ್ಕೊಂತು

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಮೊದಲ ವಾರದ ಕಲೆಕ್ಷನ್ ವಿಷ್ಯದಲ್ಲಿ ಸ್ಟಾರ್‌ವಾರ್ ನಡೆಯುತ್ತಿರುವುದು ಯಾರಿಗೂ ಗೊತ್ತಿರದ ವಿಷಯವಲ್ಲ. ಒಬ್ಬ ನಟನ ಒಂದು ಚಿತ್ರ ಮೊದಲ ವಾರದಲ್ಲಿ ಇಷ್ಟು ಕೋಟಿ ಗಳಿಸಿತು ಎಂದು ಸುದ್ದಿಯಾದರೆ ಮತ್ತೊಬ್ಬ ಸ್ಟಾರ್ ಮನಸ್ಸಲ್ಲೇ ಲೆಕ್ಕ ಹಾಕಿಬಿಟ್ಟಿರುತ್ತಾನೆ. ನನ್ನ ಮುಂದಿನ ಚಿತ್ರ ಶತದಿನೋತ್ಸವ ಆಚರಿಸಲಿ ಬಿಡಲಿ, ಆದರೆ ಶತಾಯ ಗತಾಯ ಮೊದಲ ವಾರದ ಕಲೆಕ್ಷನ್ ವಿಷಯ ಬಂದಾಗ ನಾನು ಇದಕ್ಕಿಂತ ಒಂದು ಕೋಟಿ ಜಾಸ್ತಿ ಹೇಳಬೇಕು ಎಂದು. ಹಾಗಾಗಿ ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ಸುಳ್ಳುಕೋಟಿಗಳ ಮೆರವಣಿಗೆ ಶುರುವಾಗುತ್ತದೆ. ಮೊದಲ ವಾರದಲ್ಲಿ ನನ್ನ ಚಿತ್ರ ಬೇರೆ ಸ್ಟಾರ್ ಚಿತ್ರಕ್ಕಿಂತ ಹೆಚ್ಚು ಗಳಿಕೆ ಮಾಡಿದೆ ಎಂದು ಹೇಳಿಕೊಂಡು ನಾನೇ ನಂಬರ್ 1 ಎಂದು ಎಲ್ಲರನ್ನೂ ನಂಬಿಸುವ ಪ್ರಯತ್ನ ಅದು. ಇಂಥ ಪ್ರಚಾರಗಳಲ್ಲಿ ಆಯಾ ನಟರ ಅಭಿಮಾನಿಗಳ ಕೊಡುಗೆಯೂ ಬೇಕಾದಷ್ಟಿರುತ್ತದೆ. ಕೆಲವೊಮ್ಮೆ ಇದು ಅಭಿಮಾನಿಗಳ ಪಾಲಿಗೆ ಮರ್ಯಾದೆ ಪ್ರಶ್ನೆಯೂ ಆಗಿ ಕೋಟಿಗಳು ಮಿತಿಮೀರುವುದೂ ಉಂಟು. ಇತ್ತೀಚೆಗೆ ಶುರುವಾದ ಈ ಟ್ರೆಂಡ್ ಮೊದ ಮೊದಲು ಎರಡು, ಮೂರು ಕೋಟಿಗಳ ಆಸುಪಾಸಿನಲ್ಲಿದ್ದುದು ದರ್ಶನ್ ಅಭಿನಯದ 'ಬುಲ್‌ಬುಲ್‌' ಚಿತ್ರದವರೆಗೆ 10 ಕೋಟಿಗೆ ಬಂದು ನಿಂತಿತ್ತು. ಅದೇ ಕಾರಣಕ್ಕೋ ಏನೋ ಇಂಟರ್‌ನೆಟ್ ತಾಣಗಳಲ್ಲಿ ಮತ್ತು ಫೇಸ್ ಬುಕ್‌ನಂಥ ಸಾಮಾಜಿಕ ತಾಣಗಳಲ್ಲಿ 'ಕಡ್ಡಿಪುಡಿ'ಯ  ಕಲೆಕ್ಷನ್ 11 ರಿಂದ 12 ಕೋಟಿಯ ಗಡಿದಾಟಿತ್ತು. ಆದರೆ ಕಡ್ಡಿಪುಡಿ ಚಿತ್ರತಂಡ ಅಷ್ಟು ಕೋಟಿ ದುಡ್ಡು ಬಂತು ಎಂಬ ಸುದ್ದಿಯನ್ನು 'ಕ್ಯಾಷ್ ಮಾಡಿಕೊಳ್ಳದೆ' ತಮ್ಮ ಪತ್ರಿಕಾಗೋಷ್ಟಿಯ ಆರಂಭದಲ್ಲೇ ಈ ಇಂಟರ್‌ನೆಟ್ ಲೆಕ್ಕ ಎಲ್ಲ ಸುಳ್ಳು, ಅದಕ್ಕೂ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಸ್ಪಷ್ಟಪಡಿಸಿದ್ದು ವಿಶೇಷ.

ನಿರ್ಮಾಪಕ 'ಕಡ್ಡಿಪುಡಿ ಚಂದ್ರು' ಹೇಳುವಂತೆ ಮೊದಲ ವಾರದಲ್ಲಿ ಅವರು ಬಂಡವಾಳದ ವಿಷಯದಲ್ಲಿ ಸೇಫ್ ಆಗುವ ಹಂತದಲ್ಲಿದ್ದಾರೆ ಎಂಬುದು ಮಾತ್ರ ಸತ್ಯ. ಉಳಿದಂತೆ ಅಂದಿನ ಪತ್ರಿಕಾಗೋಷ್ಠಿ ಸಿನಿಮಾದ ಬಗ್ಗೆ ಎಲ್ಲ್ಲೆಡೆ ವ್ಯಕ್ತವಾಗುತ್ತಿರುವ ಪ್ರಶಂಸೆಯ ಆನಂದವನ್ನು ಅನುಭವಿಸಲು ವೇದಿಕೆಯಾಗಿತ್ತು. ನಿರ್ಮಾಪಕ, ನಿರ್ದೇಶಕರಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ, ಛಾಯಾಗ್ರಾಹಕ ಕೃಷ್ಣ ಜೊತೆಯಾಗಿದ್ದರು.

'ಕಡ್ಡಿಪುಡಿ' ಚಿತ್ರದಲ್ಲಿ ಬರವಣಿಗೆ ಮತ್ತು ಅಭಿನಯದಿಂದ ಗುರುತಿಸಿಕೊಂಡಿರುವ ಕಾರ್ಯಕ್ರಮವನ್ನೂ ನಿರೂಪಿಸಿದ ರಾಜೇಶ್ ಅಂದಿನ ಪತ್ರಿಕಾಗೋಷ್ಠಿಯಲ್ಲಿ ಯಶಸ್ಸಿನ ಮೆರವಣಿಗೆಯನ್ನು ವಿವರಿಸುವ ಉಸ್ತುವಾರಿಯನ್ನೂ ಹೊತ್ತಿದ್ದರು.
ತಮ್ಮ ಚಿತ್ರೀಕರಣದ ದಿನದ ಅನುಭವಗಳನ್ನೂ, ತಮ್ಮ ಅನುಮಾನಗಳನ್ನೂ, ತಮಗಿದ್ದ ಗೊಂದಲಗಳನ್ನೂ ಹೇಳಿಕೊಂಡು, ಈಗ ಅದೆಲ್ಲವನ್ನೂ ನೀಗಿಸುವಂತೆ ಎಲ್ಲರಿಗೂ ಸಿನಿಮಾ ಇಷ್ಟವಾಗಿದೆ. ನಾನು ತುಂಬಾ ಖುಷಿಯಾಗಿದ್ದೇನೆ ಎಂದು ಹೇಳಿದ್ದು ನಿರ್ದೇಶಕ ಸೂರಿ. ಪತ್ರಕರ್ತ ಗಣೇಶ್ ಕಾಸರಗೋಡು ಕೂಡ ಸಿನಿಮಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಂತಿರುವ ಚಿತ್ರ ಎಂದು ಹೇಳಿದ್ದು ಅಂದಿನ ವಿಶೇಷ.

'ನನ್ನ ಎಲ್ಲ ಚಿತ್ರಗಳಿಗೂ ಬಿಡುಗಡೆಯ ದಿನ ಮೊದಲ ಶೋಗೆ ಹಾಜರಿರುತ್ತಿದ್ದೆ, ಆದರೆ ಈ ಬಾರಿ ಮನೆಯಲ್ಲೇ ಇರೋಣ ಎಂದು ನಿರ್ಧರಿಸಿದ್ದೆ. ಮಧ್ಯಾಹ್ನದವರೆಗೂ ಪೋನೂ ಅಟೆಂಡ್ ಮಾಡಿರಲಿಲ್ಲ. ಆದರೆ ಆ ನಂತರ ಬಂದ ಪ್ರತಿಕ್ರಿಯೆ ನೋಡಿ  ಥ್ರಿಲ್ ಆಯ್ತು. ಎಂದೂ ಮಾತನಾಡಿಸದಿದ್ದವರೂ, ಪೋನು ಮಾಡಿ ಸಿನಿಮಾ ಚೆನ್ನಾಗಿದೆ ಎಂದರು. ಶೋ ಮುಗಿದ ಮೇಲೆ ನನ್ನ ಮೊಬೈಲ್‌ನಲ್ಲಿ 50 ಮಿಸ್ಡ್ ಕಾಲ್‌ಗಳಿದ್ದವು. ಮೈಸೂರಿನಿಂದ ನನ್ನ ಮಗಳೂ ಕೂಡ 'ಫ್ರೆಂಡ್ಸ್ ಜೊತೆ ಸಿನಿಮಾ ನೋಡಿದೆ ಪಪ್ಪಾ, ಎಲ್ಲರೂ ಚೆನ್ನಾಗಿದೆ ಅಂತಿದ್ದಾರೆ' ಎಂದಳು. ಮೊನ್ನೆ ದೇವಸ್ಥಾನಕ್ಕೆ ಹೋದಾಗ ಅಲ್ಲಿದ್ದ 'ಭಕ್ತರು' ಆನಂದ್ ಆಲಿಯಾಸ್ ಕಡ್ಡಿಪುಡಿ ಎಂದು ಕೂಗಿದ್ದು ನೋಡಿದಾಗ ಖುಷಿಯಾಯ್ತು. ಜನ ಒಂದು ಪಾತ್ರದ ಹೆಸರಿನಿಂದ ಹೀರೋನನ್ನು  ನೋಡಿದರೆ ಅದು ನಿಜವಾದ ಯಶಸ್ಸು' ಎನ್ನುತ್ತಾ ಒಂದೇ ಸಮನೆ ಮಾತನಾಡುತ್ತಾ ಹೋದರು ಶಿವಣ್ಣ.

ಅಂತೂ, ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಒಂದು ಬ್ರೇಕ್ ಶಿವರಾಜ್‌ಕುಮಾರ್ ಅವರಿಗೆ ಸಿಕ್ಕಿದೆ. ಅದರ ಜೊತೆ, ಈ ಚಿತ್ರದ ಯಶಸ್ಸಿಗೆ ಎಲ್ಲರೂ ಪಾಲುದಾರರೂ ಎಂಬಂಥ ಪ್ರತಿಕ್ರಿಯೆ ಬರುತ್ತಿರುವ ಖುಷಿ 'ಕಡ್ಡಿಪುಡಿ' ಚಿತ್ರತಂಡದ್ದು.

- ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ