ಬಿಡುಗಡೆಯ ದಿನ ಸಮೀಪಿಸುತ್ತಿದ್ದಂತೆ ಮತ್ತೊಂದು ಚಿತ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ರೂಪಾ ಅಯ್ಯರ್ ನಿರ್ದೇಶನದ ಚಂದ್ರ ಚಿತ್ರದ ಬಿಡುಗಡೆಯ ಮುನ್ನಾ ಪತ್ರಿಕಾಗೋಷ್ಠಿಗೆ ಚಿತ್ರದ ನಾಯಕ ಪ್ರೇಮ್ ಗೈರು ಹಾಜರಾಗಿದ್ದುದು ಅದಕ್ಕೆ ಕಾರಣ. ಆದರೆ ತಮ್ಮ ಗೈರುಹಾಜರಿಗೆ ಪ್ರೇಮ್ ಕೊಡುವ ಕಾರಣ 'ಕರೆದಿಲ್ಲ, ಅದಕ್ಕೆ ಬಂದಿಲ್ಲ' ಎನ್ನುವುದು. ಆದರೆ ನಾನು ಕರೆದಿದ್ದೇನೆ ಎನ್ನುವುದು ನಿರ್ದೇಶಕಿ ರೂಪಾ ಅಯ್ಯರ್ ಮಾತು. ಹಾಗಾದರೆ, ಪತ್ರಿಕಾಗೋಷ್ಠಿಗೆ ಕರೆದರೂ ಕೇಳದೇ ಎನ್ನುವಂತಿದ್ದು ಚಂದ್ರನಲ್ಲೂ ಕಲೆಯಿದೆ ಎಂಬುದನ್ನು ನಿರೂಪಿಸಲು ಹೊರಟವರಂತೆ ಪ್ರೇಮ್ ಅಪಸ್ವರ ಹಾಡಿದ್ದಾರೆಯೇ?
ಇವೆಲ್ಲ ಬರಿ ಮಾತುಗಳಾದರೂ ಪ್ರೇಮ್ ಗೈರುಹಾಜರಿಗೆ ನಿಜವಾದ ಕಾರಣ 'ಚಂದ್ರ' ಚಿತ್ರದ ಪೋಸ್ಟರ್ಗಳಲ್ಲಿ ನಟ ಯಶ್ ಅವರ ಹಾಜರಿ ಇದ್ದಿದ್ದು. ರೂಪಾ ಅಯ್ಯರ್ ಚಿತ್ರದಲ್ಲಿ ನನಗಿಂತ ಯಶ್ಗೆ ಹೈಯರ್ ಲೆವೆಲ್ ಪ್ರಚಾರ ಸಿಗುತ್ತಿದೆ ಎಂಬುದು ಪ್ರೇಮ್ ಅಸಮಾಧಾನ. ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ಚಿತ್ರವನ್ನು 'ಚಂದ್ರ' ಚಿತ್ರದ ಪೋಸ್ಟರ್ನಲ್ಲಿ ನೋಡಿದ ಪ್ರೇಮ್ಗೆ ಅದ್ಯಾಕೋ ಇಷ್ಟವಾಗಿಲ್ಲ. ಪ್ರೇಮ್ರ ಮ್ಯಾನೇಜರ್ ಸುನಿಲ್ ನಿರ್ದೇಶಕಿ ರೂಪಾ ಅಯ್ಯರ್ ಅವರಿಗೆ ಕಾಲ್ ಮಾಡಿ, ನೀವು ಯಶ್ ಚಿತ್ರವನ್ನು ಪೋಸ್ಟರ್ನಲ್ಲಿ ಹಾಕಿದರೆ ನಾವು ಚಿತ್ರದ ಪ್ರಚಾರಕ್ಕೆ ಬರುವುದಿಲ್ಲ ಎಂದು ಧಮಕಿ ಹಾಕಿದ್ದಾರೆ. ಇದು ಚಂದ್ರ ಚಿತ್ರದ ವಿಷಯದಲ್ಲಿನ ಪ್ರೇಮಾಲಾಪ ಮತ್ತು ರೂಪಾರೋಪದ ಸಾರಾಂಶ.
ನನಗೆ ಇನ್ನೊಬ್ಬರ ಮೇಲೆ ಆರೋಪ ಹೊರಿಸಿ ಇಷ್ಟೆಲ್ಲಾ ಮಾತನಾಡಲು ನಿಜಕ್ಕೂ ಇಷ್ಟವಿರಲಿಲ್ಲ. ಹಾಗಾಗಿಯೇ ಪತ್ರಿಕಾಗೋಷ್ಠಿಯಲ್ಲಿ ಪ್ರೇಮ್ ಯಾಕೆ ಬರಲಿಲ್ಲ ಎನ್ನುವುದನ್ನು ಅವರ ಮ್ಯಾನೇಜರ್ ಅವರನ್ನೇ ಕೇಳಿ ಎಂದು ಹೇಳಿದ್ದೆ. ನಾನು ಯಾವತ್ತೂ ತೋರಿಕೆಯ ಮಾತನಾಡುವವಳಲ್ಲ, ಆದರೆ ಈಗ ಇದರಲ್ಲಿ ನನ್ನ ತಪ್ಪಿಲ್ಲ ಎಂದು ತೋರಿಸುವುದಕ್ಕಾಗಿ ಮಾತ್ರ ಮಾತನಾಡುತ್ತಿದ್ದೇನೆ ಎಂದು ಮಾತು ಶುರುಮಾಡುವ ರೂಪಾ ಅಯ್ಯರ್ 'ಪ್ರೇಮಾರೋಪ'ದ ಬಗ್ಗೆ ಹೀಗೆ ವಿವರಿಸುತ್ತಾರೆ.
ಹೌದು. ಯಶ್ ನಮ್ಮ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರ ಚಿತ್ರ ಬಳಸಿಕೊಂಡಿದ್ದೇವೆ. ಒಂದು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಅಷ್ಟು ಸ್ವಾತಂತ್ರ್ಯವೂ ಇಲ್ಲವೇ? ಹಾಗಂತ ನಾವು ಪ್ರೇಮ್ ಚಿತ್ರವನ್ನು ಪೋಸ್ಟರ್ಗಳಲ್ಲಿ ಹಾಕಿಯೇ ಇಲ್ಲವೇ? ಎಂಬುದು ರೂಪಾ ಅಯ್ಯರ್ ಪ್ರಶ್ನೆ.
ಅಂದಹಾಗೆ, ಸ್ವತಃ ಯಶ್ ಕೂಡ ನನ್ನ ಚಿತ್ರ ಬಳಸುವುದರಿಂದ ನಿಮಗೆ ಸಹಾಯವಾಗುವುದಿದ್ದರೆ ಖಂಡಿತಾ ಬಳಸಿ ಎಂದು ಹೇಳಿದ ಮೇಲೆಯೇ ಯಶ್ ಚಂದ್ರನ ಪೋಸ್ಟರ್ಗಳಲ್ಲಿ ಕಾಣಿಸಿದ್ದು. ಆದರೆ ಈ ಎಲ್ಲ ಬೆಳವಣಿಗೆಗಳ ನಂತರ ಯಶ್ ಕೂಡಾ ನನ್ನಿಂದ ಪ್ರೇಮ್ಗೆ ನೋವಾಗುವ ಹಾಗಿದ್ದರೆ ನನ್ನ ಚಿತ್ರ ಪೋಸ್ಟರ್ನಲ್ಲಿ ಬೇಡ ಎಂದು ದೊಡ್ಡತನ ಮೆರೆದಿದ್ದಾರೆ. ಆದರೆ ನಿರ್ದೇಶಕಿಯಾಗಿ ನಾನು ಯಶ್ರ ಚಿತ್ರವನ್ನು ಉಳಿಸಿಕೊಂಡಿದ್ದೇನೆ ಎನ್ನುತ್ತಾರೆ ರೂಪಾ.
ಪ್ರೇಮ್ಗೆ ಇದುವರೆಗೂ ನಾನು ಯಾರೂ ಕೊಡದಷ್ಟು ಪ್ರಚಾರ ಕೊಟ್ಟಿದ್ದೇನೆ. ಆರಂಭದಲ್ಲಿ ಕೆಲವು ನಾಯಕಿಯರು ಪ್ರೇಮ್ ಜೊತೆ ಅಭಿನಯಿಸುವುದಿಲ್ಲ ಎಂದಾಗ ಆ ನಾಯಕಿಯರನ್ನೇ ಬದಲಾಯಿಸಿ ಶ್ರೇಯಾಳನ್ನು ಕರೆತಂದೆನೇ ಹೊರತು, ಪ್ರೇಮ್ರನ್ನು ಬದಲಾಯಿಸಲಿಲ್ಲ. ಅಲ್ಲದೆ, ಅವರ ಇತರ ಚಿತ್ರಗಳ ನಿರ್ದೇಶಕರಂತೆ ನಾನು ಪೋಸ್ಟರ್ಗಳಲ್ಲಿ ನನ್ನ ಪೋಟೋ ಹಾಕಿಸಿಕೊಂಡಿಲ್ಲ. ಅಂಥದ್ದರಲ್ಲಿ ಬಿಡುಗಡೆಗೆ ಮುನ್ನ ಯಶ್ರ ಒಂದು ಪೋಸ್ಟರ್ ಹಾಕಿದ್ದಕ್ಕೆ ಪ್ರೇಮ್ ಇಷ್ಟೊಂದು ರಂಪ ಮಾಡುವುದು ಬೇಕಿತ್ತೆ?. ಇದಕ್ಕೂ ಮುಂಚೆ ಪ್ರೇಮ್ ಅವರ ಸುಮಾರು 10 ಸಾವಿರ ಪೋಸ್ಟರ್ಗಳನ್ನು ಹಾಕಿಸಿದ್ದೇನೆ.
ತಮಿಳುನಾಡಿನಲ್ಲೂ 20 ಸಾವಿರ ಪೋಸ್ಟರ್ ಹಾಕಿ, ಆಟೋಗಳ ಹಿಂದೆಲ್ಲ ಅವರ ಚಿತ್ರ ಬರುವಂತೆ ನೋಡಿಕೊಂಡಿದ್ದೇನೆ. ಆಗ ಅಷ್ಟೊಂದು ಪ್ರಚಾರ ಕೊಟ್ಟಿದ್ದಕ್ಕೆ ನನಗೆ ಒಂದು ಥ್ಯಾಂಕ್ಸ್ ಹೇಳದ ಪ್ರೇಮ್ ಈಗ ಅಪಸ್ವರ ಎತ್ತುತ್ತಿರುವುದು ಸರಿಯೇ ಎಂಬುದು ರೂಪಾ ಅಯ್ಯರ್ ಅವರ ವಾದ.
ಇಲ್ಲಿ ಇಂಟರೆಸ್ಟಿಂಗ್ ವಿಷಯ ಎಂದರೆ ಇದು ಪ್ರೇಮ್ ತಾವಾಗೇ ತಂದುಕೊಂಡ ಸಮಸ್ಯೆ. ಏಕೆಂದರೆ ಚಂದ್ರ ಚಿತ್ರದಲ್ಲಿ ಯಶ್ ಕಾಣಿಸಿಕೊಂಡಿರುವುದು ಕೇವಲ ಒಂದು ಹಾಡಿನಲ್ಲಿ. ಈ ಮೊದಲು ರೂಪಾ ಅಯ್ಯರ್ ಅವರಿಗೆ ಯಶ್ರನ್ನು ಕರೆತರುವ ಉದ್ದೇಶವೇ ಇರಲಿಲ್ಲ. ಮೂಲ ಯೋಜನೆಯ ಪ್ರಕಾರ ಈ ಹಾಡಿನಲ್ಲಿ ಪ್ರೇಮ್ ಅವರೇ ಅಭಿನಯಿಸಬೇಕಿತ್ತು. ಆದರೆ ಪ್ರೇಮ್ ಬರೋಕೆ ಆಗೊಲ್ಲ, ನನ್ನ ಬಳಿ ಡೇಟ್ಸ್ ಇಲ್ಲ ಎಂದಿದ್ದಕ್ಕೆ ಆ ಜಾಗಕ್ಕೆ ಅತಿಥಿ ರೂಪದಲ್ಲಿ ಬರಲು ಯಶ್ ಎಸ್ ಎಂದಿದ್ದಾರೆ. ಈಗ ಅದರಿಂದಲೇ ಸಮಸ್ಯೆ ಶುರುವಾಗಿರುವುದು ಕಾಕತಾಳೀಯ. ಅದರ ಜೊತೆ ಪ್ರೇಮ್ ಮತ್ತು ಅವರ ಮ್ಯಾನೇಜರ್ ಮಾತಿನ ಧಾಟಿಯೂ ನಿರ್ದೇಶಕಿ ರೂಪಾ ಅಯ್ಯರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇಬ್ಬರ ಕಡೆಯಿಂದಲೂ ರೂಪಾ ಅಯ್ಯರ್ ಅವರ ಮೊಬೈಲ್ಗೆ ಯಶ್ ಪೋಸ್ಟರ್ ವಿಷಯದಲ್ಲಿ ಹಗುರವಾಗಿ ಮಾತನಾಡಿದ ಮೆಸೇಜ್ಗಳು ಬಂದಿವೆ. ಹಾಗಾಗಿ ನಾನು ನೇರವಾಗಿ ಪ್ರೇಮ್ಗೆ ಫೋನ್ ಮಾಡಿ ಪತ್ರಿಕಾಗೋಷ್ಠಿಗೆ ಕರೆಯಲಿಲ್ಲ ಎನ್ನುತ್ತಾರೆ ರೂಪಾ.
'ನಿರ್ದೇಶಕಿ ಎಂಬ ಗೌರವವೂ ಇಲ್ಲದೆ, ನನ್ನ ಬಗ್ಗೆ 'ಅವಳು, ಇವಳು' ಎಂದೆಲ್ಲಾ, ಏಕವಚನದಲ್ಲಿ ಮಾತನಾಡಿದವರನ್ನ ನಾನು ಹೇಗೆ ಕರೆಯಲಿ? ಅದಕ್ಕೇ ನಾನು ಪ್ರೇಮ್ ಅವರನ್ನು ವೈಯಕ್ತಿಕವಾಗಿ ಕರೆದಿಲ್ಲ. ಆದರೆ, ಅವರ ಮ್ಯಾನೇಜರ್ಗೆ ಹೇಳಿದ್ದೆ. ಎಲ್ಲ ಮಾತುಕತೆಗಳೂ ಮ್ಯಾನೇಜರ್ ಮೂಲಕವೇ ನಡೆಯುತ್ತಿತ್ತಾದ್ದರಿಂದ ಪತ್ರಿಕಾಗೋಷ್ಠಿಯ ಆಮಂತ್ರಣವನ್ನೂ ನಾನು ಮ್ಯಾನೇಜರ್ ಮೂಲಕವೇ ಕಳಿಸಿದ್ದೇನೆ. ಅಂದಿನ ಪತ್ರಿಕಾಗೋಷ್ಟಿಗೆ ಶ್ರೇಯಾ ನೀಲಿ ಬಣ್ಣದ ಡ್ರೆಸ್ ಹಾಕುತ್ತಾರೆ, ಪ್ರೇಮ್ಗೂ ಅದೇ ಬಣ್ಣದ ಬಟ್ಟೆಯಲ್ಲಿ ಬರಲು ಹೇಳಿ ಎಂದೂ ಹೇಳಿದ್ದೆ. ಆದರೂ ಪ್ರೇಮ್ ಮನೆಯಲ್ಲೇ ಕೂತು ಪ್ರಚಾರ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ರೂಪಾ ಆರೋಪ.
ಇಷ್ಟೆಲ್ಲ ಅಸಮಾಧಾನ ತೋಡಿಕೊಳ್ಳುವ 'ಚಂದ್ರ' ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಕೊನೆಗೊಂದು ಮಾತು ಹೇಳುತ್ತಾರೆ. 'ನಾನೊಂದು ಒಳ್ಳೆಯ ಸಿನಿಮಾ ಮಾಡಿದ್ದೇನೆ. ನನ್ನ ಚಿತ್ರಕ್ಕೆ ಸರಿಯಾದ ಕಾರಣಗಳಿಂದ ಪ್ರಚಾರ ಸಿಗಬೇಕೆಂದು ಬಯಸಿದವಳು ನಾನು. ಇಂಥ ನೆಗೆಟಿವ್ ಪಬ್ಲಿಸಿಟಿ ಸಿಗುವುದು ನನಗೆ ಬೇಕಿಲ್ಲ. 'ಚಂದ್ರ' ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಒಂದೊಳ್ಳೆ ಪ್ರೇಮಕಥೆಯನ್ನು ಹೇಳಲು ಯತ್ನಿಸಿದ್ದೇನೆ. ಆದರೆ ಇದು ಇನ್ನೊಂದು ರೀತಿಯ 'ಪ್ರೇಮ್ಕಥೆ' ಆಗುತ್ತಿರುವುದು ವಿಷಾದ'.
- ಹ್ಯಾರಿ