ಕವಿತಾ ಲಂಕೇಶ್, ರಕ್ಷಿತಾ, ರಾಧಿಕಾ ಪಂಡಿತ್ 
ಸಿನಿಮಾ ಲೇಖನ

3 Questions ಸ್ತ್ರೀ ಆನ್ಸರ್

ಇಂದು ಮಹಿಳಾ ದಿನ. ನಮ್ಮ ಸುತ್ತಮುತ್ತ,  ಮಹಿಳಾ ಸಮಾಜಗಳು ನಮ್ಮೆದುರು ಹೇರಳವಾಗಿದ್ದರೂ  ಸಮಾಜದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಪ್ರಾಶಸ್ತ್ಯ ಅಷ್ಟಕ್ಕಷ್ಟೆ. ಚಿತ್ರರಂಗವೂ ಇದಕ್ಕೆ ಹೊರತಲ್ಲ. ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಗಳಲ್ಲಿ ಗ್ಲಾಮರ್ನ ನೆಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸಮಾಧಾನಕರ ಬಹುಮಾನ ಬಿಟ್ಟರೆ ಉಳಿದಂತೆ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಹೀರೋಗಳ ಸಂಭಾವನೆ ಪೆಟ್ರೋಲ್ ರೇಟ್ನಂತೆ ಹೆಚ್ಚಾಗುತ್ತಿದ್ದರೂ ಎಲ್ಲರೂ ಒಪ್ಪಿಕೊಳ್ಳುತ್ತಾರೆ.  ಹೀರೋಯಿನ್ಗಳ ಸಂಭಾವನೆ ಹಾಲಿನ ದರದಂತೆ. ವರ್ಷಕ್ಕೊಮ್ಮೆ 1 ರುಪಾಯಿ ಜಾಸ್ತಿ ಆದರೂ 'ಅಯ್ಯೋ, ತುಂಬಾ ದುಬಾರಿ ಆಯ್ತು ಕಣ್ರೀ' ಎನ್ನುವ ಹಾಲತ್ ಚಿತ್ರರಂಗದ್ದು. ಇಲ್ಲಿ ಮಹಿಳಾ ದಿನಾಚರಣೆಯ ನೆಪದಲ್ಲಿ ಚಿತ್ರರಂಗದ ಕೆಲವು ಮಹಿಳಾಮಣಿಗಳ ಜೊತೆ ಹರಿ ಮಾತುಕತೆ.

1. ನಿಮ್ಮ ಪ್ರಕಾರ 'ಮಹಿಳಾ ಪ್ರಧಾನ ಚಿತ್ರ' ಎಂದರೆ ಏನು?
2. ಯಾವುದೇ ರಂಗದಲ್ಲಿ ಮಹಿಳೆಯರಿಗೆ ಮೀಸಲಾತಿ ಬೇಕಾ?
3. ಮಾರ್ಚ್ 8ರ ಮಹಿಳಾ ದಿನಾಚರಣೆಯಿಂದ ನೀವು ಏನನ್ನು ಬಯಸುತ್ತೀರಿ?

ಕವಿತಾ ಲಂಕೇಶ್

  1. ಮಹಿಳೆಯರನ್ನು ಅವಮಾನಿಸದ, ಅಶ್ಲೀಲವಾಗಿ ತೋರಿಸದ ಚಿತ್ರ. ಮಹಿಳೆ ಅಲ್ಲಿ ಒಂದು ಸ್ಫೂರ್ತಿ ಕೊಡುವ ಪಾತ್ರವಾದರೆ ಸಾಕು. ಅವಳು ದೊಡ್ಡ ತ್ಯಾಗಮಯಿ ಆಗುವುದು ಬೇಕಿಲ್ಲ.
  2. ಒಂದು ರೀತಿಯಲ್ಲಿ ಇರಬೇಕು. ಏಕೆಂದರೆ ಇದ್ದರೂ ಅದರ ಉಪಯೋಗ ಆಗುತ್ತಿಲ್ಲ. ಅಂಥದ್ದರಲ್ಲಿ ಇರದೇ ಹೋದರೆ ಅವರನ್ನು ಇನ್ನೂ ಕೆಳಗೆ ತಳ್ಳಬಹುದೇನೋ ಎಂಬ ಆತಂಕ. ಮಹಿಳೆಯರಿಗೆ ಎಲ್ಲಾ ರೀತಿಯ ಸಾಧನೆಗೆ ಮುಕ್ತ ಅವಕಾಶಗಳಿರಲಿ.
  3. ಮಾರ್ಚ್ 8 ಅಂತಲ್ಲ. ಪ್ರತಿದಿನ ನಾನು ಬಯಸುವುದು ಮಹಿಳೆಯರಿಗೆ ಸೂಕ್ತ ಗೌರವ ಸಿಗಲಿ. ಅವಳ ಬಗೆಗಿನ 'ಟೇಕನ್ ಫಾರ್ ಗ್ರ್ಯಾಂಟೆಡ್' ಭಾವನೆ ಕಡಿಮೆ ಆಗಲಿ. ಹಾಗೆಯೇ 'ನಾನು ಬರೀ ಹೌಸ್ವೈಫ್' ಎನ್ನುವ ಕೀಳರಿಮೆ ಹೆಣ್ಣುಮಕ್ಕಳಲ್ಲೂ ದೂರವಾಗಲಿ.
ರಕ್ಷಿತಾ
  1. ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾ ಅಂದ್ರೆ ಅದು ಕೇವಲ ಆರ್ಟ್ ಸಿನಿಮಾನೋ ಅಥವಾ ಆಫ್ಬೀಟ್ ಸಿನಿಮಾನೋ ಆಗಿದೆ. ಅದು ಬದಲಾಗಬೇಕು. ಪಕ್ಕಾ ಕಮರ್ಷಿಯಲ್ ಆದ ಮಹಿಳಾ ಪ್ರಧಾನ ಸಿನಿಮಾಗಳು ಬರಬೇಕು. ಚಾಂದಿನಿ ಬಾರ್, ಕಹಾನಿ ಸಿನಿಮಾಗಳಂಥ ಕಥೆಗಳು ಬೇಕು.
  2. ಮೀಸಲಾತಿ ಬೇಕು ಅನ್ನೋದಕ್ಕಿಂತ ಬಂದಮೇಲೆ ಅದು ಜಾರಿ ಆಗಬೇಕು ಎನ್ನೋದು ಮುಖ್ಯ. ಯಾಕಂದ್ರೆ ಇಲ್ಲಿಯವರೆಗೂ ಬಂದ ಮೀಸಲಾತಿಗಳು ವಾಸ್ತವವಾಗಿ ಜಾರಿಗೆ ಬಂದಿದ್ದು ಕಡಿಮೆ. ಹೋರಾಟ, ಆಗ್ರಹಕ್ಕಿಂತ ಪರಿಣಾಮ ಮುಖ್ಯ. ಮಹಿಳೆಯರು ಸಮಾಜದ ಎಲ್ಲಾ ವಿಭಾಗಗಳಲ್ಲೂ ಆ್ಯಕ್ಟಿವ್ ಆಗಿ ಕಾಣಬೇಕು ಅನ್ನೋದು ನನ್ನಿಷ್ಟ.
  3. ಮಹಿಳೆಯರು ಮಹಿಳೆಯರನ್ನು ಗೌರವಿಸುವುದು ತುಂಬಾ ಅವಶ್ಯಕ. ಜತೆಗೆ ಗಂಡಸರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೊಟ್ಟಷ್ಟೇ ಗೌರವವನ್ನು ಪಕ್ಕದ ಮನೆಯ ಹೆಣ್ಣುಮಕ್ಕಳಿಗೂ ಕೊಟ್ಟರೆ ಸಾಕು, ಎಲ್ಲವೂ  ಸರಿಹೋಗುತ್ತದೆ. ಹೆಣ್ಣುಮಕ್ಕಳು ತಮ್ಮ ಬಗ್ಗೆ ತಾವು ಹೆಮ್ಮೆ ಪಡಬೇಕು ಮತ್ತು ತಮ್ಮ ವಿರುದ್ಧ ನಡೆಯುವ  ಶೋಷಣೆಗೆ ನಾವು ಅವಕಾಶ ಕೊಡುವುದಿಲ್ಲ ಎಂದು ಸಂಕಲ್ಪ ಮಾಡಬೇಕು.
ರಾಧಿಕಾ ಪಂಡಿತ್
  1. ಯಾವುದೇ ಸಿನಿಮಾದಲ್ಲೇ ಆಗಲಿ, ಮಹಿಳಾ ಪಾತ್ರಗಳನ್ನು ಫಿಲ್ಲರ್ ಥರ ಉಪಯೋಗಿಸಬಾರದು. ಅದಕ್ಕೆ ಒಂದಿಷ್ಟು  ರೂಪುರೇಷೆ ಮತ್ತು ಘನತೆ ಎರಡೂ ಇರಲಿ. ಈ ವಿಷಯದಲ್ಲಿ ನಾನು ಲಕ್ಕಿ. ಮೊಗ್ಗಿನ ಮನಸ್ಸಿನಿಂದ ಹಿಡಿದು ಇಲ್ಲಿಯವರೆಗೆ ತುಂಬಾ ಒಳ್ಳೆಯ ಪಾತ್ರಗಳೇ ಸಿಕ್ಕಿವೆ.
  2. ಮೀಸಲಾತಿ ಸಿಕ್ಕರೆ ಒಳ್ಳೆಯದು. ನಿಜ ಹೇಳಬೇಕೆಂದರೆ, ಬದಲಾವಣೆಗೆ ಪೊಸಿಷನ್, ಪವರ್ ಹೇಗೆ ಬೇಕಿಲ್ಲವೋ ಸಾಧನೆಗೂ ಮೀಸಲಾತಿ ಬೇಕೇ ಬೇಕು ಎಂದೇನಿಲ್ಲ. ಆದರೆ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು.
  3. ಮಹಿಳೆಯರ ಸಾಧನೆಗಳ ಬಗ್ಗೆ ಎಲ್ಲರೂ ಹೆಮ್ಮೆಪಡುವ ಬೆಳವಣಿಗೆಗಳು ಹೆಚ್ಚಾಗಬೇಕು. ಈ ದಿನ ಅಂಥ ಸಾಧನೆಗಳ ಸಂಭ್ರಮದ ಆಚರಣೆಗಳ ದಿನ. ಇಂಥ ಸಾಧನೆ, ಸಂಭ್ರಮಕ್ಕೆ ದಿನವೂ ಹೆಚ್ಚು ಹೆಚ್ಚು ಕಾರಣಗಳು ಸಿಗುವಂತಾಗಬೇಕು ಎಂಬುದು ನನ್ನ ಆಸೆ.
ರೂಪಾ ಅಯ್ಯರ್
  1. ಅದು ನಿರ್ದೇಶಕರೊಬ್ಬರ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಜನ ನೋಡುವಂಥ ಸಿನಿಮಾ ಮಾಡಬೇಕಾ, ಪ್ರಶಸ್ತಿ ಬರುವಂಥ ಸಿನಿಮಾ ಮಾಡಬೇಕಾ ಎನ್ನುವುದು ಅವರಿಗೇ ಬಿಟ್ಟದ್ದು. ನನ್ನ ಚಿತ್ರಗಳಲ್ಲಿ ಏನೇ ಗ್ಲಾಮರ್ ಇದ್ದರೂ ಸಿನಿಮಾ ನೈಜ ಎನಿಸಬೇಕು. ಅದು ಯಾವ ಕೆಟಗರಿ ಸಿನಿಮಾ ಅಂತ ಜನ ನಿರ್ಧಾರ ಮಾಡಲಿ.
  2. ಮೀಸಲಾತಿ ಬೇಡ. ಪ್ರಪಂಚ ಎಲ್ಲರಿಗೂ ಸೇರಿದ್ದು. ಇಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಗಾಂಧೀಜಿ ಸ್ವಾತಂತ್ರ್ಯ ಕೊಡಿಸಿದ್ದು ಕೇವಲ ಗಂಡಸರಿಗಷ್ಟೇ ಅಲ್ಲ. ನಾವು ಹೋರಾಟ, ಆಗ್ರಹ ಮಾಡುವುದರಿಂದ ನಾವೇನೋ ಕೆಳಗಿದ್ದೇವೆ ಎಂದು ನಾವೇ ಹೇಳಿಕೊಂಡಂತಾಗುತ್ತದೆ. ನಾವು ಸಾಧನೆ ಮಾಡೋಣ. ಯಾರೂ ನಮ್ಮನ್ನ ಬೆಳೆಸೋದು ಬೇಡ. ನಾವೇ ಬೆಳೆಯೋಣ.
  3. ಈ ಮಹಿಳಾ ದಿನಾಚರಣೆ ಎನ್ನುವುದು ಕೇವಲ ವಿದ್ಯಾವಂತ ಮಹಿಳೆಯರಿಗಷ್ಟೇ ಗೊತ್ತು. ಆದರೆ ಗುಡಿಸಿಲಲ್ಲಿ ವಾಸಮಾಡುವ ಬಡಮಹಿಳೆಗೂ, ಶೋಷಣೆಗೊಳಗಾದ ದಲಿತ ಮಹಿಳೆಗೂ, ಜೀವನಕ್ಕಾಗಿ ದೇಹ ಮಾರಿಕೊಂಡು ಬದುಕುವಂಥ ಹೆಂಗಸಿಗೂ ಅದು ಗೊತ್ತಾಗುವಂತಾಗಬೇಕು. ಆಗ ಅದಕ್ಕೆ ಅರ್ಥ ಇರುತ್ತೆ.
ಸುಮನಾ ಕಿತ್ತೂರು
  1. ಸರೋಜಾದೇವಿ, ಕಲ್ಪನಾ, ಜಯಂತಿ ಅವರ ಸಿನಿಮಾಗಳನ್ನು ನೋಡಿದಾಗ ಅದು ಮಹಿಳಾ ಪ್ರಧಾನ ಚಿತ್ರ ಅನಿಸುತ್ತಿತ್ತು. ಅಲ್ಲಿ ಹೀರೋಗಳೂ ಇರುತ್ತಿದ್ದರು. ಆದರೆ ಅಲ್ಲಿ ಹೆಣ್ಣಿನ ಪಾತ್ರಕ್ಕೆ ಸಿಗುತ್ತಿದ್ದ ಆದ್ಯತೆ ಹಾಗಿರುತ್ತಿತ್ತು. ಕೇವಲ ನಾಯಕನ  ಹಾಡು, ರೋಮ್ಯಾನ್ಸ್ಗಾಗಿ ನಾಯಕಿಯರನ್ನು ಬಳಸೋದು ತಪ್ಪು. ಹಳೆಯ ಕಾಲದಲ್ಲಿ ಆರತಿ, ಭಾರತಿ, ಮಂಜುಳಾ, ಕಲ್ಪನಾ  ಎನ್ನುವ ಪಟ್ಟಿ ನರ್ಸರಿ ರೈಮ್ಗಳಂತೆ ನಮ್ಮ ಬಾಯಿಗೆ ಬರುತ್ತಿತ್ತು. ಈಗ ಅಷ್ಟು ನಾಯಕಿಯರು ಎಲ್ಲಿದ್ದಾರೆ ಹೇಳಿ? ಅವರಿಗೆ ಸಿಕ್ಕಂಥ ಪಾತ್ರಗಳು ಇಂದಿನವರಿಗೂ ಸಿಗಬೇಕು.
  2. ಸಿನಿಮಾದಲ್ಲಿ ಬೇಡ, ಸಾಮಾಜಿಕವಾಗಿ ಬೇಕು. ಒಬ್ಬ ನಿರ್ದೇಶಕಿಯಾಗಿ ನನಗೆ ಇದು ಫೀಮೇಲ್ ಡೈರೆಕ್ಟರ್ ಸಿನಿಮಾ ಅನ್ನೋ ವಿಭಾಗ ಬೇಡ. ನಾವು ಎಲ್ಲರ ಜತೆಗೇ ಸ್ಪರ್ಧೆ ಮಾಡೋಣ. ನಾವು ಹೆಂಗಸರಿಗಾಗಿ ಸಿನಿಮಾ ಮಾಡೊಲ್ಲ. ಸಿನಿಮಾ ನೋಡುವವರು ಇದನ್ನು ಮಾಡಿದ್ದು, ಗಂಡಾ, ಹೆಣ್ಣಾ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ನಮಗ್ಯಾಕೆ ಆ ಚಿಂತೆ?
  3. ನಾನು ನನ್ನ ಅಮ್ಮನಿಗಿಂತ ಹಚ್ಚು ಇಷ್ಟಪಡೋದು ನನ್ನ ಅಪ್ಪನನ್ನ. ಹಾಗಾಗಿ, ನಾನು ಪುರುಷದ್ವೇಷಿ ಅಲ್ಲ. ಪುರುಷ ಮತ್ತು ಮಹಿಳೆ ಎಂಬ ವಿಂಗಡಣೆಯನ್ನು ನಾನು ದ್ವೇಷಿಸ್ತೀನಿ. ಆದರೆ, ಮಹಿಳಾ ದಿನ ಕೇವಲ ಆಚರಣೆಗೆ ಮೀಸಲಾಗಬಾರದು. ಕೆಲವು ಪುರುಷರಿಗೆ ಮಹಿಳೆಯರ ಬಗ್ಗೆ ತಾತ್ಸಾರ ಮನೋಭಾವನೆ  ಕಡಿಮೆ ಆಗಬೇಕು. ಮಹಿಳೆಯರಿಗೆ ತ್ವರಿತ ನ್ಯಾಯ, ಆದ್ಯತೆ ಸಿಗಬೇಕು. ನಮ್ಮ ಬಜೆಟ್ನಲ್ಲಿ ಮಹಿಳೆಯರ ರಕ್ಷಣೆಗೆ ಇಷ್ಟು ಹಣ ಎಂದು ತೆಗೆದಿಡಲು ಎಷ್ಟು ಜೀವಗಳು ಬಲಿ  ಆಗಬೇಕಾಯ್ತು?
ಪ್ರಿಯಾ ಬೆಳ್ಳಿಯಪ್ಪ
  1. ಮಹಿಳಾ ಪ್ರಧಾನ ಚಿತ್ರಗಳು ಎನ್ನುವ ವಿಂಗಡಣೆ ನನಗೆ ಇಷ್ಟವಿಲ್ಲ.  ಚಿತ್ರರಂಗದಲ್ಲಿ ನಿರ್ದೇಶಕರ ಸಂಖ್ಯೆಯಲ್ಲಿ ಪುರುಷರು ಹೆಚ್ಚಿದ್ದಾರೆ. ಮಹಿಳೆಯರು ಕಡಿಮೆ. ಹಾಗಾಗಿ ಸಮಾನ ಅವಕಾಶಗಳು ದೊರೆಯಲಿ. ಮತ್ತು ನಮಗೆ ಯಾವ ಲಿಮಿಟೇಶನ್ಗಳೂ ಬೇಡ.
  2. ಮೀಸಲಾತಿ ಬೇಡ. ಆದರೆ ಸಮಾನ ಅವಕಾಶಗಳಿರಲಿ. ಅಂಥ ಅವಕಾಶಗಳು ಇಲ್ಲದಿರುವ ಸಂದರ್ಭದಲ್ಲಿ ಮಾತ್ರ ಮೀಸಲಾತಿಯ ಅಗತ್ಯ ಇರುತ್ತೆ.
  3. ಮಹಿಳೆಯರು ಕೇವಲ ದೈಹಿಕವಾಗಿ ದುರ್ಬಲರು ಎನ್ನುವುದು ನನ್ನ ನಂಬಿಕೆ. ಆದರೆ ಅವರ ಆ ದೌರ್ಬಲ್ಯವನ್ನು ಶೋಷಣೆ ಮಾಡಬಾರದು. ಲಿಂಗಭೇದ ಬಿಟ್ಟು ಹೆಣ್ಣನ್ನು ನೋಡುವಂತಾಗಬೇಕು. ಅದು ಕೆಲವು ಗಂಡಸರಿಗೆ ಅರ್ಥ ಆಗುತ್ತದೆ. ಆದರೆ ಅದು ಎಲ್ಲರಿಗೂ ಅರ್ಥ ಆಗುವಂತಾಗಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!