ರಾಜ್ ಆತ್ಮವಿಶ್ವಾಸದಿಂದ ಮಿನುಗುತ್ತಿದ್ದರು. ಗೆಲ್ಲುವ ಛಲ ಅವರಲ್ಲಿತ್ತು. 'ಸಂಚಾರಿ' ನನಗೆ ಹೆಸರು ಕೊಟ್ಟಿತು, ಆದರೆ ಆ ಸಿನಿಮಾ ಹಣ ಮಾಡಲಿಲ್ಲ. ಹೀಗಾಗಿ ಸಾಕಷ್ಟು ಪೂರ್ವಸಿದ್ಧತೆಯೊಂದಿಗೇ 'ಜಟಾಯು' ಕೈಗೆತ್ತಿಕೊಂಡಿದ್ದೆ. ಚಿತ್ರಕಥೆಗಾಗಿ ಸುಮಾರು ಒಂದು ವರ್ಷ ವ್ಯಯಿಸಿದ್ದೇನೆ ಎನ್ನುತ್ತ ಮಾತಿಗಿಳಿದರು ರಾಜ್.
'ಸಂಚಾರಿ'ಯಲ್ಲಿ ನಾಯಕರಾಗಿ ಮಿಂಚಿದ್ದ ರಾಜ್, 'ಜಟಾಯು'ದಲ್ಲಿ ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ಸೆನ್ಸಾರ್ನಿಂದ ಯು/ಎ ಅರ್ಹತಾಪತ್ರ ಪಡೆದಿರುವ ಈ ಚಿತ್ರದ ವಿಶೇಷ ಎಂದರೆ ತ್ರಿಬ್ಬಲ್ ಸಿಕ್ಸ್! ಹೌದು. ಆರು ಹೊಡೆದಾಟ, ಆರು ಹಾಡು ಮತ್ತು ರಾಜ್ ಅವರ ಸಿಕ್ಸ್ ಪ್ಯಾಕ್. ಯಾವ ಸ್ಥಳದಲ್ಲಿ ಚಿತ್ರ ಆರಂಭವಾಗುವುದೋ ಅಲ್ಲಿಯೇ ಮುಕ್ತಾಯಗೊಳ್ಳುವುದು ಮತ್ತೊಂದು ವಿಶೇಷ. ವಿನಯ್ಚಂದ್ರ ಸಂಗೀತಕ್ಕೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. 'ಢವ ಢವ..' ಹಾಡು ಹಿಟ್ ಆಗಿರುವುದೂ ಚಿತ್ರತಂಡದ ವಿಶ್ವಾಸ ಹೆಚ್ಚಿಸಿದೆ.
ಕನ್ನಡದ ಜತೆ ತೆಲುಗಿನಲ್ಲಿಯೂ ಚಿತ್ರ ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ತೆರೆ ಕಂಡ ಒಂದು ತಿಂಗಳ ಬಳಿಕ ತೆಲುಗು ಬಿಡುಗಡೆ ಮಾಡುವುದು ನಿರ್ಮಾಪಕ ಪ್ರಭಾಕರ್ ಉದ್ದೇಶ. 'ತಮಿಳು ಮತ್ತು ಹಿಂದಿಗೆ ಡಬ್ ಮಾಡುತ್ತೇವೆ. ಆ ಕುರಿತ ಮಾತುಕತೆಗಳು ಅಂತಿಮ ಹಂತದಲ್ಲಿವೆ' ಎನ್ನುವುದನ್ನೂ ಅವರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು. 'ದುಷ್ಟ' ಮೂಲಕ ಚಂದನವನಕ್ಕೆ ಪರಿಚಯವಾದ ಸುರಭಿ ನಾಯಕಿ. 'ನನ್ನ ಪಾತ್ರ ಬಹಳ ಸಂಕೀರ್ಣವಾಗಿದೆ' ಎಂದು ಹೇಳಿಕೊಂಡರು ಆಕೆ. ರೂಪಶ್ರೀಗೂ ಮಹತ್ವದ ಪಾತ್ರ ಇದೆಯಂತೆ. 'ಶೇ 90ರಷ್ಟು ಚಿತ್ರೀಕರಣವನ್ನು ಸಹಜ ಬೆಳಕಿನಲ್ಲಿ ನಡೆಸಲಾಗಿದೆ' ಎಂದವರು ಛಾಯಾಗ್ರಾಹಕ ನಂದಕುಮಾರ್.
ಸಾಂಗ್ ಇಲ್ಲದ್ದಕ್ಕೆ ರೂಪಶ್ರೀ ಮುನಿಸು
ಹರ್ಷಿಕಾ ಪೂಣಚ್ಛ ಪ್ರಕರಣ ನೆನಪಿರಬಹುದು. 'ಅಲೆ' ಚಿತ್ರದ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭದಲ್ಲಿ 'ಇದು ವೃತ್ತಿಪರ ಚಿತ್ರತಂಡವಲ್ಲ' ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಆಕೆ. ತನ್ನ ಪಾತ್ರಕ್ಕೆ ಮಹತ್ವ ಸಿಕ್ಕಿಲ್ಲ ಎನ್ನುವುದು ಆಕೆಯ ಅಸಮಾಧಾನಕ್ಕೆ ಕಾರಣವಾಗಿತ್ತು. 'ಜಟಾಯು' ಪತ್ರಿಕಾಗೋಷ್ಠಿಯಲ್ಲೂ ಅಂಥಹ ಘಟನೆ ನಡೆಯಿತು. ನಟಿ ರೂಪಶ್ರೀ ತಮ್ಮ 'ಸಿಟ್ಟು' ಕಾರಿಕೊಂಡರು.
'ನನಗೆ ಒಂದೇಒಂದು ಹಾಡು ನೀಡಿಲ್ಲ. ಹೀಗಾಗಿ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿರಲಿಲ್ಲ. ಈಗ ಪ್ರಚಾರದಲ್ಲೂ ನನ್ನನ್ನು ಕಡೆಗಣಿಸಲಾಗುತ್ತಿದೆ. ಪೋಸ್ಟರ್ಗಳಲ್ಲೂ ನನಗೆ ಪ್ರಾಮುಖ್ಯತೆ ನೀಡಿಲ್ಲ. ಸಿನಿಮಾದಲ್ಲಿ ಸಾಂಗ್ ಕೊಡದಿದ್ದರೂ ಪರವಾಗಿಲ್ಲ, ಪಬ್ಲಿಸಿಟಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವವಳು ನಾನಲ್ಲ' ಎಂದು ಖಡಕ್ ಆಗಿ ಹೇಳಿದರು.
'ರೂಪಶ್ರೀ ಜತೆಗೆ ರೋಮ್ಯಾಂಟಿಕ್ ಸನ್ನಿವೇಶಗಳಿಲ್ಲ. ನಿಮಗೆ ಹಾಡು ಇಲ್ಲ ಎನ್ನುವುದನ್ನು ಅವರಿಗೆ ಮೊದಲೇ ಹೇಳಲಾಗಿತ್ತು. ಒಂದೊಮ್ಮೆ ಆಕೆಗಾಗಿ ಹಾಡು ಸೇರಿಸಿದ್ದರೆ ಚಿತ್ರಕಥೆ ಮತ್ತು ನಿರೂಪಣೆಗೆ ಸರಿಹೊಂದುತ್ತಿರಲಿಲ್ಲ. ಇನ್ನುಮುಂದೆ ಸಿದ್ಧಪಡಿಸುವ ಪೋಸ್ಟರ್ಗಳಲ್ಲಿ ರೂಪಶ್ರೀಗೂ ಆದ್ಯತೆ ನೀಡಲಾಗುವುದು' ಎಂದು ರಾಜ್ ಸ್ಪಷ್ಟೀಕರಣ ನೀಡುವುದರೊಂದಿಗೆ ಪ್ರಕರಣ ಅಲ್ಲಿಗೇ ಮುಕ್ತಾಯವಾಯಿತು.