ಚಿತ್ರಗಳಲ್ಲಿ 'ಟ್ರಾಜಿಡಿ' ಹೊಸದಲ್ಲ. ಪರಂಪರೆಯುದ್ದಕ್ಕೂ 'ದುಃಖಾಂತ್ಯ' ಹರಿದು ಬಂದಿದೆ. ಅದು ಚಿತ್ರರಂಗವನ್ನು ಎಂದೂ ದೂರ ಮಾಡಿಲ್ಲ. ವಿಶೇಷ ಎಂದರೆ ಹೆಚ್ಚಿನ ಸಂದರ್ಭದಲ್ಲಿ ಈ 'ದುಃಖಾಂತ್ಯ' ಪ್ರೇಕ್ಷಕನಿಗೆ ಮೆಚ್ಚುಗೆಯಾಗಿದೆ ಮತ್ತು ಆ ಚಿತ್ರಗಳು ಗೆದ್ದಿವೆ. ಹೀಗೆ ಟ್ರಾಜಿಡಿ ಟ್ರಾಫಿಕ್ನಲ್ಲಿ ಸಿಕ್ಕ ಕೆಲ ಚಿತ್ರಗಳು ಇಲ್ಲಿವೆ.
ಸುಖಾಂತ್ಯ ಮತ್ತು ದುಃಖಾಂತ್ಯ...
ಈ ಎರಡೂ 'ಅಂತ್ಯ'ಗಳ ಹೊರತಾಗಿ ಕನ್ನಡ ಚಿತ್ರಪರದೆ ಮೂರನೆ 'ಅಂತ್ಯ'ಕ್ಕೆ ಹುಡುಕಾಟ ನಡೆಸಿದ್ದು ಕಡಿಮೆ. ಈ ಪೈಕಿ ಪರದೆ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದದ್ದು 'ದುಃಖಾಂತ್ಯ'ವೇ. ಮೊನ್ನೆಯಷ್ಟೆ 'ಮೈನಾ'ದಲ್ಲಿ ನಾಯಕ, ನಾಯಕಿ ಇಬ್ಬರೂ 'ಅಂತ್ಯ'ವಾದರು. ಇದಕ್ಕೂ ಮುನ್ನ 'ಅರಮನೆ', 'ಸಂಜು ವೆಡ್ಸ್ ಗೀತಾ', 'ದುನಿಯಾ', 'ಅಂಬಾರಿ', 'ನಂದಾ ಲವ್ಸ್ ನಂದಿತಾ', 'ಅಂಬಾರಿ' ಮುಂತಾದ ಚಿತ್ರಗಳೂ ತಮ್ಮ ನಾಯಕ, ನಾಯಕಿಯರನ್ನು ಕಳೆದುಕೊಂಡಿದ್ದವು. ಇನ್ನೊಂದಿಷ್ಟು ಹಿಂದಕ್ಕೆ ಸರಿದರೆ ಅಲ್ಲಿ ಇಂಥ ಹತ್ತಾರು ಟ್ರಾಜಿಡಿ ಚಿತ್ರಗಳು ಕಾಣುತ್ತವೆ. 'ಗೆಜ್ಜೆಪೂಜೆ', 'ಶರಪಂಜರ', 'ಸಾಕ್ಷಾತ್ಕಾರ', 'ಕಸ್ತೂರಿ ನಿವಾಸ', 'ನಾಗರಹಾವು', 'ಬಂಗಾರದ ಮನುಷ್ಯ', 'ಬಂಧನ' ಹೀಗೆ ರಾಶಿ ರಾಶಿ ದುಃಖಾಂತ್ಯ ಚಿತ್ರಪಟಗಳು ಕಣ್ಮುಂದೆ ಹಾದು ಹೋಗುತ್ತವೆ. ಕನ್ನಡದ ಮಟ್ಟಿಗೆ ಇಂಥ ದುಃಖಾಂತ್ಯ ಚಿತ್ರಗಳನ್ನು ಹೆಚ್ಚು ಕೊಟ್ಟವರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು.
ಟ್ರಾಜಿಡಿ ಟ್ರೆಂಡ್
ಪುಟ್ಟಣ್ಣ ಕಣಗಾಲ್ರ ಕಾಲದ ಟ್ರಾಜಿಡಿ ಟ್ರೆಂಡ್ಗೂ ಈಗಿನ ಚಿತ್ರರಂಗದ ಟ್ರಾಜಿಡಿ ಟ್ರಾಫಿಕ್ಗೂ ವ್ಯತ್ಯಾಸಗಳಿವೆ. ಸಾವು, ನೋವು, ದುಃಖ... ಇವು ತನ್ನ ರೂಪ ಬದಲಾಯಿಸಿಕೊಂಡಿವೆ ಅಷ್ಟೆ. ಆದರೆ ಅದು ತೆರೆಯಿಂದ ಎಂದೂ ಮರೆಯಾಗಿಲ್ಲ ಎಂಬುದು ಸತ್ಯ. ಈ ತಲೆಮಾರಿನ ಪ್ರೇಕ್ಷಕ ವರ್ಗಕ್ಕೆ ಎಸ್.ನಾರಾಯಣ್, 'ದುನಿಯಾ' ಸೂರಿ, ನಾಗಶೇಖರ್ ದುಃಖಾಂತ್ಯಗಳನ್ನು ತೆರೆ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆಂಬ ಮಾತು ಇದೆ. ಅದು ನಿಜ ಎಂಬುದು ಅವರ ಚಿತ್ರಗಳೇ ಹೇಳುತ್ತವೆ. ಒಟ್ಟಿನಲ್ಲಿ 'ದುಃಖಾಂತ್ಯ'ದ ನೆರಳಿನಲ್ಲಿ ಅರಳುವ ಚಿತ್ರಗಳು ಎಂದೂ ಮೂಲೆ ಸೇರಿಲ್ಲ. ಮತ್ತು ಮರೆಯಾಗಲ್ಲ.
ಆದರೆ ಇತ್ತೀಚೆಗೆ ದುಃಖಕ್ಕೆ ಅಂಟಿಕೊಳ್ಳುತ್ತಿರುವವರು ನಿರ್ದೇಶಕ ನಾಗಶೇಖರ್. 'ಅರಮನೆ', 'ಸಂಜು ವೆಡ್ಸ್ ಗೀತಾ', 'ಮೈನಾ' ಈ ಚಿತ್ರಗಳ ಕಾಮನ್ ವಿಷಯ. ಅಂದರೆ ಚಿತ್ರದ ಕೊನೆಯಲ್ಲಿ ನಾಯಕ ಮತ್ತು ನಾಯಕಿ ಇಬ್ಬರು ಕಣ್ಮುಚ್ಚುತ್ತಾರೆ. ನಿರ್ದೇಶಕ ಎಸ್. ನಾರಾಯಣ್ ಕೂಡ ಪ್ರೇಕ್ಷಕನಿಗೆ ದುಃಖ ಕೊಟ್ಟವರೇ. 'ಚೆಲುವಿನ ಚಿತ್ತಾರ', 'ಚಂಡ', 'ಶೈಲೂ' ಹೀಗೆ ತಮ್ಮ ಚಿತ್ರಗಳಿಗೆ ಟ್ರಾಜಿಡಿ ಸ್ಪರ್ಶ ಕೊಟ್ಟಿದ್ದಾರೆ. ಮುಂದೆ ಬರಲಿರುವ 'ಅಪ್ಪಯ್ಯ' ಚಿತ್ರ ಕೂಡ ಟ್ರಾಜಿಡಿಯೇ ಎಂಬುದು ಗಾಂಧಿನಗರದ ಸುದ್ದಿ. ಆದರೆ ಕಣ್ಣೀರಧಾರೆ, ಸೆಂಟಿಮೆಂಟ್ ನಿರ್ದೇಶಕ ಎಂದೇ ಪ್ರಸಿದ್ಧಿಯಾಗಿರುವ ಓಂಸಾಯಿಪ್ರಕಾಶ್ ಪ್ರೇಕ್ಷಕನಿಗೆ ಕಣ್ಣೀರು ಕೊಟ್ಟರೂ ನಾಯಕ, ನಾಯಕಿಯನ್ನು ಸಾಯಿಸಲು ಹೋಗಲಿಲ್ಲ.
ವಿಶೇಷ ಎಂದರೆ ಸುಖಾಂತ್ಯದ ಹೊರತಾಗಿ ಬಂದ ಈ ಚಿತ್ರಗಳನ್ನು ಪ್ರೇಕ್ಷಕ ಮೆಚ್ಚಿಕೊಂಡು ಗೆಲ್ಲಿಸಿದ್ದಾನೆ. ಹೀಗಾಗಿ 'ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಅಳುವ ಪ್ರೇಕ್ಷಕ ವರ್ಗ ಮರೆಯಾಗಿದೆ. ಈಗ ಬೇಕಿರುವುದು ಕೇವಲ ಮನರಂಜನೆ ಅಷ್ಟೆ' ಎನ್ನುವ ಮಾತುಗಳನ್ನು ಈ ಟ್ರಾಜಿಡಿ ಚಿತ್ರಗಳು ಸುಳ್ಳಾಗಿಸುತ್ತಿವೆ. ಎಮೋಷನಲ್ ಪ್ರೇಕ್ಷಕ 'ಹೆತ್ತರೆ ಹೆಣ್ಣನ್ನೇ ಹೆರಬೇಕು' ಚಿತ್ರದ ಕಾಲಕ್ಕೇ ಮರೆಯಾಗದೆ ಈಗಲೂ ಇದ್ದಾನೆ.
ಮುಂದೆಯೂ ಇರುತ್ತಾನೆ. ಹೀಗಾಗಿ 'ಬಂಗಾರದ ಮನುಷ್ಯ' ಚಿತ್ರದಲ್ಲಿ ಊಟ ಮಾಡುತ್ತಿದ್ದಾಗ ಕೈ ಸಹ ತೊಳೆಯದೆ ಉಟ್ಟ ಬಟ್ಟೆಯಲ್ಲಿ ಹೊರ ನಡೆಯುವ ಡಾ.ರಾಜ್ಕುಮಾರ್ರ ಪಾತ್ರವನ್ನು ನೋಡಿ ಮರಗುವ ಪ್ರೇಕ್ಷಕ 'ದುನಿಯಾ', 'ಮೈನಾ' ಚಿತ್ರಗಳಲ್ಲೂ ಲೀಡ್ ಪಾತ್ರಗಳು ಸತ್ತಾಗ 'ಅಯ್ಯೋ ಹೀಗಾಗಬಾರದಿತ್ತು' ಎಂದು ಉದ್ಘರಿಸುತ್ತಾನೆ. ನೋಡುಗನನ್ನು ಆವರಿಸಿಕೊಳ್ಳುವ ಆ ವಿಷಾದ ಭಾವನೆಯೇ ಚಿತ್ರದ ಗೆಲುವು!
ಇಲ್ಲಿ ಸಾವು ಮತ್ತು ದುಃಖ ಚಿತ್ರಗಳಲ್ಲಿ ಸುಖಾಸುಮ್ಮನೆ ಬಂದು ಹೋಗುವುದಿಲ್ಲ. ಸಾವು, ದುಃಖಕ್ಕೂ ಅರ್ಥ ಕೊಡುವ ನಿರ್ದೇಶಕನ ಜಾಣ್ಮೆ ಇಲ್ಲಿದೆ. ಹಿಂದಿಯ 'ಶೋಲೆ' ಚಿತ್ರದಲ್ಲಿ ಅಮಿತಾಬ್ನ ಸಾವು, 'ಆನಂದ್' ಚಿತ್ರದಲ್ಲಿ ರಾಜೇಶ್ ಖನ್ನಾರ ಸಾವು, ಕನ್ನಡದಲ್ಲಿ 'ರಂಗನಾಯಕಿ'ಯಲ್ಲಿ ಆರತಿ ಹಾಗೂ 'ಬಂಧನ' ಚಿತ್ರದಲ್ಲಿ ವಿಷ್ಣುವರ್ಧನ್ರ ಸಾವು... ಇದ್ಯಾವುದನ್ನೂ ಪ್ರೇಕ್ಷಕ ಮರೆತಿಲ್ಲ. ಸಾವಿನ ಅಂತ್ಯ ಮಾತ್ರವಲ್ಲ, ಸಾವಿನ ಹೊರತಾಗಿಯೂ ದುಃಖವನ್ನು ಕಟ್ಟಿಕೊಡುವ ಚಿತ್ರಗಳೂ ಸಹ ಹೀಗೆ ನೋಡುಗರನ್ನು ಇನ್ನಿಲ್ಲದಂತೆ ಕಾಡುತ್ತವೆ.
ವಿಷಾದ ದೀರ್ಘಾಯು
ಸಂತೋಷ, ಖುಷಿ ಹಾಗೂ ಸಂಭ್ರಮಕ್ಕೆ ಆಯುಸ್ಸು ಕಡಿಮೆ. ಆದರೆ ವಿಷಾದ ಭಾವನೆಗಳಿಗೆ ಆಯುಸ್ಸು ಹೆಚ್ಚು. ಅದು ಶಾಶ್ವತ. ವಿಷಾದಕ್ಕೆ ಮನುಷ್ಯ ಬಹುಬೇಗ ಪ್ರತಿಕ್ರಿಯಿಸುತ್ತಾನೆ. ಪದೇ ಪದೇ ನೋವು, ದುಃಖವನ್ನು ನೆನಪಿಸಿಕೊಳ್ಳುತ್ತಾನೆ. ಇದು ಮನುಷ್ಯನ ಸಹಜ ಗುಣ. ಈ ಗುಣವನ್ನೇ ಬಂಡವಾಳ ಮಾಡಿಕೊಂಡಿರುವ ಚಿತ್ರಗಳು ಕಾಲ ಕಾಲಕ್ಕೆ ತೆರೆ ಮೇಲೆ ಕಣ್ಣೀರು ಹರಿಸಿವೆ. ಸಿನಿಮಾ, ಡ್ರಾಮಾ ಎಂದು ಗೊತ್ತಾದರೂ 'ಕಳೆದುಕೊಳ್ಳುವ' ಭಾವನೆ ನೋಡುಗನಿಗೆ ಡ್ರಾಮಾ ಎನ್ನಿಸದು. ಅದರಲ್ಲೂ ಚಿತ್ರದ ಲೀಡ್ ಪಾತ್ರಗಳು ಅಂದರೆ ನಾಯಕ, ನಾಯಕಿ ಸಾವು ಕಂಡಾಗ ಪ್ರೇಕ್ಷಕ ಇನ್ನಿಲ್ಲದಂತೆ ಒದ್ದಾಡುತ್ತಾನೆ. ಚಿತ್ರದ ಆರಂಭದಿಂದ ಕೊನೆ ತನಕ ಈ ಲೀಡ್ ಪಾತ್ರಧಾರಿಗಳು ಒಳ್ಳೆಯ ಗುಣಗಳನ್ನು ರೂಢಿಸಿಕೊಂಡು ಒಳ್ಳೆಯದಕ್ಕಾಗಿ ಹೋರಾಡುತ್ತಿರುತ್ತಲೇ ಪ್ರೇಕ್ಷಕನ ಮನಸ್ಸು ಗೆದ್ದಿರುತ್ತವೆ. ಪ್ರೇಕ್ಷಕ ವರ್ಗವನ್ನು ಗೆದ್ದ ಪಾತ್ರಗಳು 'ಅಂತ್ಯ'ಗೊಂಡಾಗ ಅಷ್ಟು ಬೇಗ ಚಿತ್ರ ನೋಡುವ ಜನ ಆ ಪಾತ್ರಧಾರಿಗಳನ್ನು ಮರೆಯಲಾರ. ಚಿತ್ರಕಥೆ ಬರೆಯುವ ಕಥೆಗಾರ ಅಥವಾ ನಿರ್ದೇಶಕ ಕೂಡ 'ಸಾರ್ ನಾಯಕ, ನಾಯಕಿ ಸತ್ತೋದ್ರೆ ಚೆನ್ನಾಗಿರುತ್ತೆ' ಎನ್ನುತ್ತಾನೆ. ಆತ ಕಥೆ ಮತ್ತು ಪಾತ್ರಗಳನ್ನು ಸೃಷ್ಟಿಸುವಾಗಲೇ 'ದುಃಖಾಂತ್ಯ'ದ ಬಾಗಿಲಲ್ಲಿ ನಿಂತಿರುತ್ತಾನೆ.
- ಆರ್ ಕೇಶವಮೂರ್ತಿ