ಸಿನಿಮಾ ಲೇಖನ

ಅವಳೇನಾ ಇವಳು?

ಬಣ್ಣದ ಲೋಕದ ಕರ್ಮಾಕಾಂಡಗಳೇ ಹಾಗೆ. ಇಲ್ಲಿ ಯಾಮಾರಿದ್ರೆ ಸಾಕು 'ಪಂಗನಾಮ' ಹಾಕುತ್ತಾರೆ. ಹೊಸಬರಾದರೂ ಸರಿ, ಹಳಬರಾದರೂ ಸರಿ. ನಾಯಕನೋ, ನಾಯಕಿಯೋ, ಪೋಷಕನಟನೋ, ಪೋಷಕ ನಟಿಯೋ ಯಾರಾದ್ರೆ ಏನು, ನಾಮ ಹಾಕಿಸಿಕೊಳ್ಳುವುದಕ್ಕೆ ರೆಡಿಯಾಗಿರಬೇಕು ಅಷ್ಟೇ. ಎಸ್.ಕೆ. ಬಷೀದ್‌ನಂಥವರು ನಿರ್ದೇಶಕ, ನಿರ್ಮಾಪಕ, ನಟನ ಸೋಗಿನಲ್ಲಿ ಎಲ್ಲಿಂದಲೋ ಬಂದು ಇಲ್ಲಿನವರ ಮುಖಕ್ಕೆ ಮಸಿ ಬಳಿಯುತ್ತಾರೆ. ಸಿನಿಮಾ ಗ್ರಾಮರ್ ಗೊತ್ತಿಲ್ಲದ ಇಂಥವನ ಚಿತ್ರಕ್ಕೆ ಗ್ಲಾಮರ್ ಪೋಸು ಕೊಟ್ಟು ಮಸಿ ಹಾಕಿಸಿಕೊಂಡ ಮೇಲೆ 'ನನ್ನ ಮಾನ ಹರಾಜಾಗಿದೆ. ಇವನನ್ನು ಸುಮ್ಮನೆ ಬಿಡುಬಾರದು' ಎಂದು ಕೂಗಿಕೊಳ್ಳುತ್ತಾರೆ. ನಟಿ ರಿಷಿಕಾ ಸಿಂಗ್ ವಿಚಾರದಲ್ಲಿ ಆಗಿದ್ದೂ ಇದೆ. ರಿಷಿಕಾ ಒಂದಲ್ಲ ಒಂದು ವಿವಾದ ಮಾಡಿಕೊಂಡು ಮೈ ತುಂಬಾ ಗಾಯ ಮಾಡಿಕೊಂಡಿದ್ದಾಳೆ.
  ಯಾವ ಗಳಿಗೆಯಲ್ಲಿ ರಿಷಿಕಾ ಸಿಂಗ್ ನಟನಾ ಜೀವನಕ್ಕೆ ಕಾಲಿಟ್ಟರೋ ಗೊತ್ತಿಲ್ಲ. ವಿವಾದಗಳು ಅವರನ್ನು ಬೆನ್ನು ಬಿಡದ ಬೇತಾಳನ ಹಾಗೆ ಕಾಡುತ್ತಿವೆ. ಖಾಸಗಿ ವಾಹಿನಿಯೊಂದರಲ್ಲಿ 'ರಗಳೆ ವಿತ್ ರಿಷಿಕಾ' ಎನ್ನುವ ತನ್ನದೇ ನಿರೂಪಣೆಯ ಕಾರ್ಯಕ್ರಮಕ್ಕೆ ತಾನೇ ಆಹಾರವಾಗುತ್ತಿರುವುದು ಗಾಂಧಿನಗರದ ವಿಪರ್ಯಾಸ. ಮೊದಲ ಬಾರಿ 'ಕಂಠೀರವ' ಚಿತ್ರದ ಪೋಸ್ಟರ್‌ಗಳಲ್ಲಿ ನಟಿ ರಿಷಿಕಾಳನ್ನು ನೋಡಿದವರು 'ಕನ್ನಡಕ್ಕೆ ಒಬ್ಬಗ್ಲಾಮರ್ ನಟಿ ಸಿಕ್ಕಳು' ಎಂದು ಉದ್ಘರಿಸಿದರು. ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಜೇಂದ್ರಸಿಂಗ್ ಬಾಬು ಕುಟುಂಬದ ಕುಡಿ ಎಂದ ಮೇಲೆ ಗ್ಲಾಮರ್ ಜೊತೆಗೆ ನಟನೆಯೂ ರಕ್ತಗತವಾಗಿದ್ದು, ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಾಳೆ ಎಂದು ಭಾವಿಸಿದವರೇ ಹೆಚ್ಚು.

ಆದರೆ ಕೆರಿಯರ್‌ಗಿಂತ ಕಿರಿಕಿರಿಗಳೇ ಹೆಚ್ಚಾಗಿದ್ದು ರಿಷಿಕಾಳ ದುರಂತ. ಸದ್ಯ ಈಗ ಎಸ್.ಕೆ. ಬಷೀದ್ ಎಂಬ ಸಿನಿಮಾದ ಗಂಧ ಗಾಳಿಯೂ ಗೊತ್ತಿಲ್ಲದವನಿಗೆ ಕಾಲ್ ಶೀಟ್ ಕೊಟ್ಟು ಕೈ ಮಾತ್ರವಲ್ಲ, ಮೈ ಕೂಡ ಸುಟ್ಟುಕೊಂಡು ನಟಿ ರಿಷಿಕಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ರಿಷಿಕಾಳನ್ನು ಅರೆಬೆತ್ತಲೆಯಾಗಿ ಚಿತ್ರೀಕರಿಸಿದ್ದಾರೆ ಎನ್ನಲಾದ ಬಷೀದ್ ತಲೆ ತಪ್ಪಿಸಿಕೊಂಡು ಜಾಮೀನುಗಾಗಿ ಅವರಿವರ ಬಳಿ ಜಾಗಿಂಗ್ ಮಾಡುತ್ತಿದ್ದಾರಂತೆ. ಮತ್ತೊಂದು ಕಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲವರು ಹಾಗೂ ಚಿತ್ರರಂಗದ ಒಂದಿಷ್ಟು ಮಂದಿ ಸದರಿ ವಿವಾದದ ಬಗ್ಗೆ ಗರಂ ಆಗಿದ್ದಾರೆ. 'ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ರಾಜೇಂದ್ರಸಿಂಗ್ ಬಾಬುರ ಮಗಳಿಗೆ ಹೀಗಾದರೆ ಹೇಗೆ?' ಎನ್ನುವ ವಿವಾದದ ಬಗ್ಗೆ ಪ್ರತಿಕ್ರಿಯಿಸುತ್ತಿರುವರ ಮಾತು.

ಹಾಗೆ ನೋಡಿದರೆ ವಿವಾದದ ಸೂತ್ರದಾರನಾಗಿರುವ ಬಷೀದ್‌ನ ಚರಿತ್ರೆ ರಹಸ್ಯವಾಗಿಯೇನು ಇಲ್ಲ. ಶೋಕಿ, ಚಟಕ್ಕಾಗಿ ಚಿತ್ರರಂಗಕ್ಕೆ ಬಂದಿದುರುವ ಈತ ರೌಡಿ ಶೀಟರ್ ಆಗಿದ್ದು, ಈತನ ಮೇಲೆ ಹೈದರಬಾದ್‌ನ ಜ್ಯೂಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ಕೂಡ ದಾಖಲಾಗಿತ್ತು ಎನ್ನಲಾಗುತ್ತಿದೆ. ಇಂಥವನು 'ಯಾರಾದ್ರೆ ನನಗೇನು' ಎನ್ನುವ ಕನ್ನಡ ಚಿತ್ರವನ್ನು ನಿರ್ಮಾಣ ಮಾಡಲಿಕ್ಕೆ ಬಂದಾಗ ಚಿತ್ರದ ಮುಹೂರ್ತ ದಿನವೇ ಸಾಕಷ್ಟು ವಿವಾದ ಮಾಡಿಕೊಂಡಿದ್ದ. ಇನ್ನೂ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ರಿಷಿಕಾ ಮೈಗೆ ಮಣ್ಣು ಮೆತ್ತ್ತಿಕೊಂಡ ಅರೆ ಬೆತ್ತಲೆ ಪೋಸು ನೀಡಿ ಮಹಿಳಾ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಆಗ ಇದೇ ವಾಹಿನಿಗಳಲ್ಲಿ ಬೆತ್ತಲೆ ಪೋಸ್ಟರ್‌ಗಳನ್ನು ನಟಿ ರಿಷಿಕಾ ಸಮರ್ಥಿಸಿಕೊಂಡಿದ್ದು ಯಾರೂ ಮರೆತಿಲ್ಲ. ಆದರೆ ಈಗ ಅದೇ ಬಷೀದ್ ಬೇರೊಬ್ಬರ ಬೆತ್ತಲೆ ದೇಹವನ್ನು ತನ್ನ ಮುಖಕ್ಕೆ ಹೊಂದಿಸಿ ವಿಡಿಯೋ ಕ್ಲಿಪಿಂಗ್ ಮಾಡಿ ಯೂಟ್ಯೂಬ್‌ಗೆ ಬಿಟ್ಟಿದ್ದಾನೆ ಎಂದು ರಿಷಿಕಾ ರಾಂಗ್ ಆಗಿದ್ದಾರೆ. ಆರೋಪಿತ ಬಷೀದ್ ಒಂದೊಂದು ಬಾರಿ ಒಂದೊಂದು ಪ್ರತಿಕ್ರಿಯೆ ನೀಡಿ ವಿವಾದವನ್ನು ಮತ್ತಷ್ಟು ದೊಡ್ಡದು ಮಾಡಿದ್ದಾರೆ. ರಿಷಿಕಾ ಮಾತ್ರ ಬೆತ್ತಲೆ ವಿಡಿಯೋದಲ್ಲಿರುವುದು ತಾನಲ್ಲ ಎನ್ನುತ್ತಿದ್ದಾಳೆ. 'ಇದು ರಿಷಿಕಾನೇ. ನಾನೇ ಚಿತ್ರೀಕರಣ ಮಾಡಿದ್ದು' ಎಂದು ಬಷೀದ್, ವಾಹಿನಿಯ ರಹಸ್ಯ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದು ಈಗ ಬಹಿರಂಗವಾಗಿದೆ.

ಒಟ್ಟಿನಲ್ಲಿ ರಿಷಿಕಾ ಕುಟುಂಬ ರಾಂಗ್ ಆಗಿದೆ. ಐದಾರು ಮಂದಿ ಗ್ಲಾಮರ್ ನಟಿಯರನ್ನು ಹಾಕಿಕೊಂಡು 'ಬೆಂಕಿ ಬಿರುಗಾಳಿ' ಎನ್ನುವ ಸಗಣಿ ಚಿತ್ರ ಮಾಡಿದ ಬಷೀದ್ ಎಂಬ ತಗಡು ಅಸಾಮಿಯಂಥವನ್ನು ಚಿತ್ರರಂಗದಲ್ಲಿ ಬಿಟ್ಟುಕೊಂಡು ಆತನಿಗೆ ಬಹುಪರಾಕ್ ಹೇಳಿದವರೇ ಈಗ ಜುಟ್ಟು ಹಿಡಿದು ಬುದ್ಧಿ ಕಲಿಸುವ ಮಾತುಗಳನ್ನಾಡುತ್ತಿದ್ದಾರೆ.

ಯಾರ್ ಬಂದ್ರೆ ನಮಗೇನು?
ಎಂಬ ನಿರ್ಲಕ್ಷತನದಿಂದಲೋ ಏನೋ, ಎಲ್ಲಿಂದಲೋ ಬಂದು ವಿವಾದಗಳನ್ನು ಸೃಷ್ಟಿಸಿ ಚಿತ್ರರಂಗಕ್ಕೆ ಮಸಿ ಬಳಿಯುತ್ತಾರೆಯೆ? ಅಥವಾ 'ಯಾರಾದ್ರೆ ನನಗೇನು' ಎಂದುಕೊಂಡು ಕಂಡ ಕಂಡವರ ಜೊತೆ ಸಿನಿಮಾ ಮಾಡಲು ಹೋಗುವುದರಿಂದ ವಿವಾದ ಮಾಡಿಕೊಳ್ಳುತ್ತಾರೆಯೆ? ಸದ್ಯ ವಿವಾದಗಳೆಂಬ ಬೆತ್ತಲೆ ಭೂಮಿಯಲ್ಲಿ ರಾಂಗ್ ಆಗಿರುವ ರಿಷಿಕಾಳ ಮುಂದಿನ ದಾರಿ ಏನು?
---
ದಯವಿಟ್ಟು ಆ ಪ್ರಕರಣದ ಬಗ್ಗೆ ಮತ್ತೆ ಮತ್ತೆ ಕೇಳಬೇಡಿ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ಬಷೀದ್‌ನ ಹಿಂದಿನ ಚಿತ್ರಗಳನ್ನು ನೋಡಿ ನಾನು ಆತನೊಂದಿಗೆ ಅಭಿನಯಿಸಲು ಒಪ್ಪಿಕೊಂಡೆ. ಅಲ್ಲದೆ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದವರು ಎಂದರೆ ಎಂಥವರೂ ನಂಬುತ್ತಾರೆ. ನಾನೂ ಕೂಡ ಹಾಗೆ  ನಂಬಿ ಆತನ ಚಿತ್ರ ಮಾಡಿದೆ. ನಂಬಿಸಿ ಬೀದಿಗೆ ತಂದಿದ್ದಾನೆ. ಸದ್ಯ ಅರ್ಧಕ್ಕೆ ನಿಂತಿರುವ 'ಯಾರಾದ್ರೆ ನನಗೇನು' ಚಿತ್ರದಲ್ಲಿ ನಾನು ಯಾವುದೇ ಕಾರಣಕ್ಕೂ ಅಭಿನಯಿಸಲ್ಲ.
- ರಿಷಿಕಾ ಸಿಂಗ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್