ವಯಸ್ಸು ನೆಟ್ಟಗೆ ಇಪ್ಪತ್ತು ದಾಟಿಲ್ಲ. ಮುಖದ ಮೇಲೆ ಈಗಷ್ಟೆ ಮೀಸೆ ಚಿಗುರೊಡೆಯುತ್ತಿದೆ. ಆಕೆ ಬಲಿತ ಹೆಣ್ಣು, ಗಂಡುಬೀರಿ, ಬಜಾರಿ, ದಿಗಂತ್‌ಗೆ ಕ್ಯಾಕರಿಸಿ ಕ್ಯಾಕರಿಸಿ ಉಗಿದವಳು. ಇವರಿಬ್ಬರು ಸೇರಿ ಝಗಮಗಿಸುವ ಬೆಳಕಿನಲ್ಲಿ ಹೆಜ್ಜೆ ಹಾಕಿದರೆ ಹೇಗಿರುತ್ತದೆ?
ಈ ಕುತೂಹಲದ ಪ್ರಶ್ನೆ ಹಾಗೆ ಇರಲಿ. ಸದ್ಯಕ್ಕೆ ಆ ಪೋರನ ಹೆಸರು ಎಡ್ವಿನ್, ಬಲಿತ ಆ ಹೆಣ್ಣು ಬೇರ್ಯಾರೂ ಅಲ್ಲ ಭಟ್ಟರ 'ಗಾಳಿಪಟ' ಹಾರಿಸಿದ ನಟಿ ನೀತು. ಇವರಿಬ್ಬರ ಕಾಂಬಿನೇಷನ್‌ನಲ್ಲೊಂದು ಐಟಂ ಸಾಂಗ್ ಚಿತ್ರೀಕರಣವಾಗಿದ್ದು 'ಜೀತು' ಎಂಬ ಚಿತ್ರಕ್ಕಾಗಿ. 2.5 ಕೋಟಿ ವೆಚ್ಚದಲ್ಲಿ ಹದಿನೆಂಟರ ಬಾಲಕ ಎಡ್ವಿನ್ ನಿರ್ದೇಶಿಸಿ, ನಿರ್ಮಿಸಿ, ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ಆಡಿಯೋ ಬಿಡುಗಡೆ ಕೂಡ ಭರ್ಜರಿಯಾಗಿಯೇ ನಡೆಯಿತು.
ಎಡ್ವಿನ್ ಎಂಬ ಕರಿ ಪೋರನ ಜೊತೆ ಬಿಳಿ ಜಿರಳೆಯಂತೆ ಕಾಣುವ ಅವನಷ್ಟೇ ವಯಸ್ಸಿನ ರಚನಾ ಗೌಡ ಚಿತ್ರದ ನಾಯಕಿ. ಆಡಿಯೋ ಬಿಡುಗಡೆಗೆ ಮುಖಂಡರಾದ ರಾಮಲಿಂಗೇಗೌಡ, ನಿರ್ದೇಶಕ ಸುನಿ, ನಟ ರಾಜ್ ಸೇರಿದಂತೆ ಚಿತ್ರರಂಗದ ಹಿರಿಯ ಪೋಷಕ ನಟರ ದೊಡ್ಡ ದಂಡೇ ಅಲ್ಲಿ ನೆರೆದಿತ್ತು. ಅಂದಹಾಗೆ ಈತನಿಗೆ ಚಿತ್ರರಂಗದಲ್ಲಿ ಯಾವುದೇ ಅನುಭವ ಇಲ್ಲದಿದ್ದರೂ, ನಟ ಪುನೀತ್‌ರಾಜ್‌ಕುಮಾರ್‌ರ ಹುಚ್ಚು ಅಭಿಮಾನಿಯಂತೆ. ಹೀಗಾಗಿ ಅವರಂತೆ ಚಿತ್ರರಂಗದಲ್ಲಿ ನಟನಾಗಬೇಕೆಂದು 'ಜೀತು' ಚಿತ್ರ ಮಾಡಿದ್ದಾರೆ. ಹಳ್ಳಿಗಳಲ್ಲಿ ಗೌಡರು ಬಡ ಜನರ ಮೇಲೆ ಹೇಗೆ ಶೋಷಣೆ ಮಾಡುತ್ತಾರೆ ಎಂಬುದು ಚಿತ್ರದ ಒಂದು ಸಾಲಿನ ಕಥೆ. ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ಧನ್, ತಬಲಾ ನಾಣಿ, ಬಿರಾದರ್, ಮಾಲಾ ಡಿಂಗ್ರಿ ನಾಗರಾಜ್, ರಾಣಿ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪೋಷಕ ಕಲಾವಿದರಿಗೆ ಕೇಳಿದಷ್ಟು ಸಂಭಾವನೆ ಕೊಟ್ಟಿದ್ದಾರೆ ಎಂಬುದು ಚಿತ್ರದ ಮತ್ತೊಂದು ಹೈಲೈಟ್.