ಕಳೆದವಾರ ಮಾಲಾಶ್ರೀ ಅಭಿನಯದ 'ಎಲೆಕ್ಷನ್' ಚಿತ್ರ ಬಿಡುಗಡೆಯಾಗಿತ್ತು. ಮಠ ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ್ ಸ್ಪೆಷಲ್ ಈ ವಾರದ ವಿಶೇಷ. ಹಾಗೆ ನೋಡಿದರೆ ಎಲೆಕ್ಷನ್ಗೂ ಗುರುಪ್ರಸಾದ್ ನಿರ್ದೇಶನದ ಚಿತ್ರಗಳಿಗೂ ಒಂದು ಸಾಮ್ಯತೆ ಇದೆ. ಎರಡೂ ಕೂಡ ಬಹುತೇಕ ನಾಲ್ಕೈದು ವರ್ಷಗಳಿಗೊಮ್ಮೆ ಬರುವಂಥವು!.
ಶುಕ್ರವಾರದ ಸಿನಿಮಾ ಸಂಚಿಕೆಯನ್ನು ಮೂರು ದಿನ ಮುಂಚೆಯೇ ಬರೆಯುವ ಪತ್ರಕರ್ತರಿಗೂ ಗುರುಪ್ರಸಾದ್ ಚಿತ್ರದ ಬಿಡುಗಡೆಯ ಮೇಲೆ ಒಂಥರಾ ಅನುಮಾನ. ಅದು, 'ಶುಕ್ರವಾರ ಬಿಡುಗಡೆ' ಎಂದು ಬರೆದು ಪತ್ರಿಕೆ ಅಚ್ಚಿಗೆ ಹೋದ ಮೇಲೆ ಗುರುಪ್ರಸಾದ್ ಕಡೆಯ ಕ್ಷಣದಲ್ಲಿ ಕೈ ಎತ್ತಿದರೆ ಏನು ಗತಿ ಎಂಬ ಆತಂಕ.
'ಎದ್ದೇಳು ಮಂಜುನಾಥ'ನ ಕಾಲದಿಂದಲೇ ತಮ್ಮ 'ಸಾರಿ, ಲೇಟಾಯಿತು' ಎನ್ನುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಗುರುಪ್ರಸಾದ್ 'ಡೈರೆಕ್ಟರ್ ಸ್ಪೆಷಲ್' ಚಿತ್ರದ ವಿಷಯದಲ್ಲೂ ಅದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಪ್ರೇಕ್ಷಕನ ತಾಳ್ಮೆಯೊಂದಿಗೆ ಆಟ ಆಡುತ್ತಲೇ ಬಂದಿದ್ದರು. ಆದರೆ ಈಗ,
ಲೇಟಾಗಿದ್ದು, ಆಟ ಆಡಿದ್ದು ಸಾಕು, ಇನ್ನು ಮುಂದೆ 'ದಿನ ನಾಲ್ಕು ಆಟಗಳು' ಎನ್ನುತ್ತಾ ಗುರು ತಮ್ಮ ಸ್ಪೆಷಲ್ ಚಿತ್ರವನ್ನು ಈ ವಾರ ತೆರೆಗೆ ತರುತ್ತಿದ್ದಾರೆ.
ಮುಹೂರ್ತದ ನಂತರ ಮೊನ್ನೆ ಮತ್ತೆ ಬಿಡುಗಡೆಯ ಸಂತೋಷ ಹೇಳಿಕೊಳ್ಳಲು ಗುರುಪ್ರಸಾದ್ ಪತ್ರಿಕಾಗೋಷ್ಠಿ ಕರೆದಿದ್ದರು. ಅಲ್ಲಿ 'ಡೈರೆಕ್ಟರ್ ಸ್ಪೆಷಲ್' ಚಿತ್ರದ ಮೂಲಕ ತೆರೆಗೆ ಬರುತ್ತಿರುವ ನವನಾಯಕ ನಟ ಧನಂಜಯ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಛಾಯಾಗ್ರಾಹಕ ಮಹೇಂದ್ರ ಸಿಂಹ, ಸಂಕಲನಕಾರ ಕೆಂಪರಾಜ್, ನಿರ್ಮಾಪಕರಾದ ಶಂಕರ್- ಗೋವಿಂದು, ನೃತ್ಯ ನಿರ್ದೇಶಕ ಇಮ್ರಾನ್ ಹಾಜರಿದ್ದರು.
ಸ್ಥಿರ ಛಾಯಾಗ್ರಾಹಕರಾಗಿದ್ದು ಈಗ ಸಿನಿಮಾ ಛಾಯಾಗ್ರಹಣ ಮಾಡುತ್ತಿರುವ ಮಹೇಂದ್ರ ಸಿಂಹ ಕೂಡ ನನಗೆ ಹಲವಾರು ಪಂಚಿಂಗ್ ಡೈಲಾಗ್ಗಳನ್ನು ಕೊಟ್ಟರು ಎಂದುಹೇಳಿ ಅವರ ಕೈಗೆ ಮೈಕ್ ಕೊಟ್ಟ ನಂತರ, 'ಗುರುಪ್ರಸಾದ್ ಚಿತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸ್ಪೇಸ್ ಇರುತ್ತೆ ಎಂದು ಎಲ್ಲರೂ ಹೇಳುತ್ತಾರೆ ಆದರೆ ಕ್ಯಾಮೆರಾ ಇಡೋಕೆ ಸಿಗೋದು ಮಾತ್ರ ಬರೀ 10 ಬೈ 10 ರೂಮು ಅಷ್ಟೆ' ಎಂದ ಮಹೇಂದ್ರ ಸಿಂಹ, 'ಐಟಂ ಸಾಂಗಿಗೆ ಈ ಹುಡುಗಿ ಹೊಂದಲ್ಲ ಎಂದ ತಕ್ಷಣ ಬದಲಾಯಿಸಿ ಪೂಜಾಗಾಂಧಿ ಅವರನ್ನು ತಂದರು'
ಎಂದ ಇಮ್ರಾನ್, 'ಚಿತ್ರದ ಬಗ್ಗೆ ಚರ್ಚೆ ಮಾಡುವಾಗ ಗುರು ಬೇಡ ಎಂದು ರಿಜೆಕ್ಟ್ ಮಾಡಿದ ದೃಶ್ಯಗಳನ್ನೇ ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡಬಹುದು' ಎಂದ ನಿರ್ಮಾಪಕರ ಮಾತು ಅಂದಿನ ವಿಶೇಷ.
ಅಂದಹಾಗೆ, ಈ ಚಿತ್ರದ ನಾಯಕ ಧನಂಜಯ್ ಎಂಬುದನ್ನು ಬಹಳ ದಿನಗಳನವರೆಗೂ ಈ ವಿಷಯವನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದರು ಗುರು. ಆದರೆ ಇತ್ತೀಚೆಗೆ ಮೊದಲ ಚಿತ್ರ ಬಿಡುಗಡೆಯಾಗುವ ಮುನ್ನವೇ ಇನ್ನೆರಡು ಚಿತ್ರಗಳಿಗೆ ಧನಂಜಯ್ ಬುಕ್ ಆದಮೇಲೆ ಈ ವಿಚಾರ ಹೊರಬಂದಿತ್ತು.
ಧನಂಜಯ್ ನಾಟಕದ ಹಿನ್ನೆಲೆ ಇರುವ ಕಲಾವಿದ. ಹೀಗೆ ಯಾವುದೋ ನಾಟಕವೊಂದರಲ್ಲಿ ಆತನನ್ನು ನೋಡಿದೆ. ಆ ಹೊತ್ತಿಗೆ ಆತ ಜರ್ಮನಿಗೆ ಹೋಗಿ ಅಲ್ಲಿ ಪ್ರಶಸ್ತಿಯನ್ನೂ ಗೆದ್ದುಕೊಂಡು ಬಂದಿದ್ದ. ನಾಟಕ ನೋಡಿದ ಮೇಲೆ ಅವನನ್ನು ಕರೆದು ಸ್ವಲ್ಪ ಜಿಮ್ಗೆ ಹೋಗಿ ಬಾಡಿ ಬಿಲ್ಡ್ ಮಾಡಿಕೋ, ನನ್ನ ಮುಂದಿನ ಚಿತ್ರಕ್ಕೆ ನೀನೇ ಹೀರೋ ಎಂದು ಹೇಳಿದ್ದೆ ಎಂದು ಗುರು ಧನಂಜಯ್ ಸಿಕ್ಕ ವಿಷಯವನ್ನು ಅಂದಿನ ಗೋಷ್ಠಿಯಲ್ಲಿ ಹೇಳಿದರು.
ನಾಯಕ ಧನಂಜಯ್ 'ಗುರುವಿಗೆ ಗುಲಾಮನಾಗಿ ಕೆಲಸ ಮಾಡಿದ್ದೇನೆ. ನಿರ್ದೇಶಕರು ಹೇಳಿದಂತೆ ಕೇಳಿದರೆ ಸಿನಿಮಾಗೆ ಒಳ್ಳೆಯದು ಎಂಬುದು ನನ್ನ ನಂಬಿಕೆ. ಇದೇ ಕಾರಣಕ್ಕೆ ಓಂಪ್ರಕಾಶ್ ಅವರ ಬಗ್ಗೆ ಯಾರು ಏನೇ ಹೇಳಿದರೂ ಅವರಲ್ಲಿರುವ ನಿರ್ದೇಶಕರ ಮೇಲಿನ ನಂಬಿಕೆಯಿಂದ 'ಹುಚ್ಚ' ಚಿತ್ರವನ್ನು ಒಪ್ಪಿಕೊಂಡಿದ್ದು ಎನ್ನುತ್ತಾ ಮೊದಲ ಅವಕಾಶವನ್ನು ಸಾರ್ಥಕ ಪಡಿಸಿಕೊಂಡಿದ್ದೇನೆ ಎಂಬ ತಮ್ಮ ವಿಶ್ವಾಸವನ್ನು ತೋರಿಸಿಕೊಂಡರು.
ಡೈರೆಕ್ಟರ್ ಸ್ಪೆಷಲ್ ಚಿತ್ರದಲ್ಲಿ ಎರಡೇ ಹಾಡುಗಳಿವೆಯಂತೆ. ಅದೇ ಕಾರಣಕ್ಕೋ ಏನೋ ರೀರೆಕಾರ್ಡಿಂಗ್ಗೂ ಕೂಡ ಎರಡೇ ವಾದ್ಯಗಳನ್ನು ಬಳಸಿಕೊಂಡಿದ್ದೇನೆ ಎಂದ ಅನೂಪ್ ಸೀಳಿನ್ ಬಿ.ಆರ್.ಲಕ್ಷ್ಮಣರಾವ್ ಅವರು ಬರೆದಿರುವ ಒಂದು ಹಾಡನ್ನು ಹಾಡಿ ಕೇಳಿಸಿದರು. ನಿರ್ದೇಶಕ ಗುರು 'ಅನೂಪ್ ನನ್ನ ಚಿತ್ರದ ಗುಣಮಟ್ಟ ಹೆಚ್ಚಿಸಿದ್ದಾನೆ' ಎಂದಿದ್ದು, ನಾಯಕ ಧನಂಜಯ್ 'ನನ್ನ ಮೊದಲ ಚಿತ್ರ ಇದು. ಮೊದಲು ಹಿನ್ನೆಲೆ ಸಂಗೀತ ಇಲ್ಲದೆ ನೋಡಿದಾಗ ಭಯ ಆಗಿತ್ತು. ಆದರೆ ಅನೂಪ್ ಸ್ಪರ್ಶ ದೊರೆತ ಮೇಲೆ ನನಗೆ ಚಿತ್ರದ ಮೇಲೆ ಭರವಸೆ ಮೂಡಿತು' ಎಂದಿದ್ದು ಅನೂಪ್ ಸೀಳಿನ್ ಸಂಗೀತಕ್ಕೆ ಸಿಕ್ಕ ಪ್ರಶಂಸೆ.
ಅಂತೂ ಈ ವಾರ 'ಡೈರೆಕ್ಟರ್ ಸ್ಪೆಷಲ್'ಗೆ ಗಾಂಧಿನಗರ ತಯಾರಾಗಿದೆ. ಗುರುಪ್ರಸಾದ್ ಚಿತ್ರಗಳೆಂದರೆ ಅಲ್ಲಿ ಮಾತಿಗೆ ಹೆಚ್ಚು ಪ್ರಾಶಸ್ತ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಲೆಕ್ಕದಲ್ಲಿ ಗುರು 'ಮಾತು ತಪ್ಪದ' ಮಗ. ಆದರೆ, ಮಾತುಗಳಿಂದಲೇ ಜನಪ್ರಿಯರಾಗಿರುವ ಅವರು ತಮ್ಮ ಸಿನಿಮಾ ವಿಷಯದಲ್ಲಿ ಮಾತ್ರ ಯಾರ ಮಾತನ್ನೂ ಕೇಳುವವರಲ್ಲ ಎಂಬ ಮಾತೂ ಇದೆ. ಅದು ಅಂದು ಅವರ ತಂಡದ ಬಹುತೇಕ ಎಲ್ಲರ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು. ಅಷ್ಟಾಗಿಯೂ, ಗುರುಪ್ರಸಾದ್ ಏನಾದರೂ ಕೊಟ್ಟ ಮಾತು ಉಳಿಸಿಕೊಳ್ಳುವುದಿಲ್ಲ ಎಂಬ ಮಾತು ಕೇಳಿಬಂದರೆ, ಅದು ಅವರ ಚಿತ್ರದ ಬಿಡುಗಡೆಯ ವಿಷಯದಲ್ಲಿ ಮಾತ್ರ. ಪ್ರೇಕ್ಷಕನಿಗೆ ಒಳ್ಳೆಯ ಸಿನಿಮಾ ಕೊಡುತ್ತೇನೆ ಎಂದು ಕೊಟ್ಟ ಮಾತನ್ನು ಮಾತ್ರ ಅವರು ಖಂಡಿತಾ ಉಳಿಸಿಕೊಂಡಿರುತ್ತಾರೆ ಎಂಬ ಭರವಸೆ ಎಲ್ಲರದು.
- ಹರಿ