ಯಾವ ರೆಸೊಲ್ಯೂಶನ್ನೋ ಇಲ್ಲ, ಬರೀ ರೆವೊಲ್ಯೂಶನ್ನೋ...?
ಹೀಗೆಂದು ತಮ್ಮ ಟೋಪಿ ಸರಿಮಾಡಿಕೊಂಡು ನಕ್ಕ ಕ್ರೇಜಿಸ್ಟಾರ್ ರವಿಚಂದ್ರನ್ ನಿಜವಾಗಿಯೂ ರೆವೊಲ್ಯೂಶನ್ ಮಾಡಿದ್ದರು. ಕ್ರಾಂತಿಯ ಮಾತು ಹೇಳುವ ಎಷ್ಟೋ ಗಂಟೆಗಳ ಮೊದಲೇ ಸುಪುತ್ರ ಮನೋರಂಜನ್‌ಗೆ ಬಣ್ಣ ಹಾಕಿ, ತಾವೇ ಕ್ಲಾಪ್ ಮಾಡಿ, ಆ್ಯಕ್ಷನ್ ಕಟ್ ಕೂಡ ಹೇಳಿ ಮುಗಿಸಿದ್ದರು. ತಮಗೆ ಸರಿ ಎನ್ನಿಸಿದ್ದನ್ನು ಯಾರು ಒಪ್ಪಲಿ, ಬಿಡಲಿ ತಾನು ಮಾತ್ರ ಆ ಕೆಲಸ ಮಾಡಿ ಮುಗಿಸುವ ರವಿಚಂದ್ರನ್, ಬೆಳ್‌ಬೆಳಗ್ಗೆ ಕೆಲವು ವಿಚಾರಗಳನ್ನು ತೆರೆದಿಟ್ಟಿದ್ದರು.
ತೋರಿಸಿದ ಕೂಡಲೇ ಚಿತ್ರವೊಂದಕ್ಕೆ ಮುಹೂರ್ತ ಮಾಡಿ ಮುಗಿಸಿದ್ದಾರೆ. ಅದರ ಹೆಸರು 'ಅಂದು'. ಇದರ ಜೊತೆಗೆ 'ಅವಳು ಆವರಿಸಿದಳು' ಹಾಗೂ 'ಅಪೂರ್ವ' ಎಂಬ ಎರಡು ಚಿತ್ರಗಳು ಶುರುವಾಗಲಿವೆ. ಈ ಮೂರು ಚಿತ್ರಗಳಿಗೂ ಮನೋರಂಜನ್ ನಾಯಕ. 'ಅವಳು ಆವರಿಸಿದಳು' ಚಿತ್ರಕ್ಕೆ ನಟಿ ಸೌಂದರ್ಯ ಜಯಮಾಲ ನಾಯಕಿಯಾಗುವ ಸಾಧ್ಯತೆಗಳಿವೆ. 'ಅಂದು' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಯಾವುದೂ ರೆಡಿಯಾಗಿಲ್ಲ. ಸುಮ್ಮನೆ ಹಾಗೆ ಬಂದುಹೋದ ಐಡಿಯಾಗಳನ್ನೇ ಆನ್ ಸ್ಪಾಟ್ ಪೇಪರ್ ಮೇಲೆ ಗೀಚಿಕೊಂಡು ಸಿನಿಮಾ ಮಾಡುತ್ತಾರೆ. ಉಳಿದೆರಡು ಚಿತ್ರಗಳ ಹಾಡುಗಳು ರೆಡಿಯಾಗಿವೆ.
ಅದರ ಚಿತ್ರೀಕರಣಕ್ಕೆ ಹೊರಡಬೇಕಿದೆ. ಈ ಮೂರರ ಜೊತೆಗೆ ಇನ್ನೊಂದಿಷ್ಟು ಕಥೆಗಳು ಹೊಳೆದಿವೆಯಂತೆ. ಅವುಗಳನ್ನೂ ಸಿನಿಮಾ ಮಾಡುವ ಯೋಚನೆ ರವಿಚಂದ್ರನ್‌ರದ್ದು. ಅಂದಹಾಗೆ 'ಮಂಜಿನ ಹನಿ' ಚಿತ್ರ ಮಾಡಲು ಹೋದಾಗ ಹುಟ್ಟಿಕೊಂಡ ಹತ್ತಾರು ಕಥೆಗಳು ಹೀಗೆ ಒಂದೊಂದಾಗಿ ಚಿತ್ರವಾಗಲಿವೆ ಎನ್ನುವ ಮಾತು 'ರವಿಕಾಲ'ಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಅವರು ಕೊಡುತ್ತಿರುವ ಗಿಫ್ಟ್.
ಆದರೂ 'ಮಂಜಿನ ಹನಿ' ಚಿತ್ರ ಯಾವಾಗ ಬರುತ್ತೆ? ಎಂಬ ಪ್ರಶ್ನೆಯಂತೂ ಕೇಳಿ ಬರದೆ ಇರಲಿಲ್ಲ. ಈ ಪ್ರಶ್ನೆಗೆ ಗ್ರಾಫಿಕ್ಸ್, ಹಣ, ಮೇಕಿಂಗ್, ಕಥೆ ಎನ್ನುವ ಅದೇ ಉತ್ತರ ಕೊಟ್ಟರೂ ಗ್ಯಾರಂಟಿ 'ಮಂಜಿನ ಹನಿ' ತೆರೆ ಮೇಲೆ ಬರುತ್ತೆ ಎಂದ ರವಿಚಂದ್ರನ್‌ರ ಮಾತು, ಚಿತ್ರರಂಗದತ್ತ ಹೊರಳಿತು...
ಈಗಿನ ಚಿತ್ರಗಳ ಬಗ್ಗೆ ನಾನೇನ್ ಹೇಳಲಿ? ಬರ್ತಿದ್ದಾರೆ, ಹೋಗ್ತಿದ್ದಾರೆ. ಯಾರೂ ನಿಲ್ತಿಲ್ಲ. ಆಗಾಗ ಅಪರೂಪಕ್ಕೆ ಹೊಸಬರ ಚಿತ್ರಗಳು ಗೆಲ್ಲುತ್ತಿವೆ. ಆದರೂ ಈಗ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಣೆಯಾಗಿಲ್ಲ. ನಮ್ಮ ಬೌಂಡರಿ ತುಂಬಾ ಚಿಕ್ಕದು. ಅದರಲ್ಲೇ ಆಟವಾಡಬೇಕು. ಆದರೆ 'ಪ್ರೇಮಲೋಕ' ಚಿತ್ರ ಗೋವಾ ದಾಟಿತು. 'ರಾಮಾಚಾರಿ' ಗೌರಿಬಿದನೂರು, ಪಾವಗಡ ಗಡಿಗಳನ್ನು ಮುಟ್ಟಿತು. ಶೇ.80 ಭಾಗ ತೆಲುಗು, ತಮಿಳು ಚಿತ್ರಗನ್ನು ಕದ್ದರೂ ಈಗಿನ ಚಿತ್ರಗಳು ಬೌಂಡರಿ ದಾಟುತ್ತಿಲ್ಲ. ರೀಮೇಕ್ ಮಾಡಿದ ಚಿತ್ರಗಳನ್ನು ಜನ ಯಾಕೆ ನೋಡಬೇಕು? ಈಗ ಚಿತ್ರರಂಗಕ್ಕೆ ಬರುತ್ತಿರುವ ಹೊಸಬರಿಗೆ ಪಾಠ ಮಾಡಕ್ಕಾಗಲ್ಲ. ಯಾರೂ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. 'ನೀನು ಹೀಗೆ ಸಿನಿಮಾ ಮಾಡಬೇಕು' ಎಂದರೆ ಮೂರ್ಖತನವಾಗುತ್ತದೆ. ನನಗೆ 'ಪ್ರೇಮಲೋಕ' ಚಿತ್ರವೇ ಸ್ಕೂಲ್ ಆಗಿತ್ತು, ನಾನೇ ವಿದ್ಯಾರ್ಥಿಯಾಗಿದ್ದೆ.
ಇನ್ನು ಕಲಾವಿದರ ಸಂಘಕ್ಕೆ ಒಂದು ದೊಡ್ಡ ಪುಸ್ತಕ ಬರೆದು ಕೊಟ್ಟಿದ್ದೇನೆ. ಅದನ್ನು ಫಾಲೋ ಮಾಡಿದರೆ ಸಾಕಿತ್ತು. ಆದರೆ ಯಾರೂ ಅದನ್ನು ನೋಡಿಯೂ ಇಲ್ಲ. ಸಿನಿಮಾ ಎಲ್ಲರ ಮನೆ ಎಂದುಕೊಂಡರೆ ಒಳ್ಳೆಯ ಸಿನಿಮಾ ಮಾಡಬಹುದು. ಆದರೆ ಒಂದೇ ಮನೆಯಲ್ಲಿ ಕೂಡಿ ಹಾಕಿದರೆ ಜಗಳವಾಡದೇ ಇರಕ್ಕೆ ಆಗಲ್ಲ ಅಂತ 'ಬಿಗ್‌ಬಾಸ್' ತೋರಿಸಿಕೊಟ್ಟಿದೆ! ಎಂಥ ದುರಂತ ನೋಡಿ, ಟಿಆರ್‌ಪಿಗಾಗಿ ಒಂದು ಮನೆಯಲ್ಲಿ ಸೇರಿಕೊಂಡು ಕಿತ್ತಾಡಿಕೊಳ್ಳುತ್ತಿದ್ದೇವೆ. ನಮ್ಮ ಚಿತ್ರೋದ್ಯಮ ಕೂಡ ಬಿಗ್‌ಬಾಸ್ ಮನೆಯಂತೆ.
ನಾನು ಯಾರ ಸಿನಿಮಾದಲ್ಲೂ ಅಭಿನಯಿಸಲ್ಲ ಅಂತ ಹೇಳಿಲ್ಲ. ಮೊದ್ಲು ಒಳ್ಳೆಯ ಕಥೆ ಮಾಡಿಕೊಂಡು ಬನ್ನಿ ಅಂತೀನಿ. ಆದರೆ ಕಥೆ ಮಾಡಿಕೊಳ್ಳದೆ ಹೀರೋಗಾಗಿ ಸುತ್ತಾಡಿದರೆ ಹೇಗೆ? ಹಾಗೆ ಬಂದವರಿಗೆಲ್ಲ ಕಾಲ್‌ಶೀಟ್ ಕೊಟ್ಟರೆ ನಾಳೆ ದರ್ಶನ್‌ರನ್ನು ಕೂಡ ಯಾರೂ ಕೇಳಲ್ಲ. ನಿಜವಾಗಲೂ ಸಿನಿಮಾ ಮಾಡುವವನಿಗೆ ಹೀರೋ ಬೇಕಿಲ್ಲ. 'ಮುಂಗಾರು ಮಳೆ', 'ದುನಿಯಾ', 'ಎ', 'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ', 'ಗೊಂಬೆಗಳ ಲವ್' ಚಿತ್ರಗಳಲ್ಲಿ ಯಾವ ಸ್ಟಾರ್ ಇದ್ದರು? ನಂತರ ಅವರು ಸ್ಟಾರ್ ಆಗಿದ್ದೇನೋ ನಿಜ, ಅದಕ್ಕೂ ಮೊದ್ಲು? ದಾಖಲೆ ಮಾಡಿದ ಯಾವುದೇ ಚಿತ್ರ ತೆಗೆದುಕೊಳ್ಳಿ... ಅಲ್ಲಿ ಯಾವ ಸ್ಟಾರ್ ಹೀರೋ ಕೂಡ ಕಾಣಲ್ಲ...
ಹೀಗೆ ಮಾತು ಮುಂದುವರಿಸುತ್ತಲೇ ಹೋದ ರವಿಚಂದ್ರನ್ 'ಅಯ್ಯೋ ಬರ್ತ್‌ಡೇ ಅಂತ ತೀರಾ ಸೀರಿಯಸ್ಸಾಗಿ ಮಾತಾಡ್ತಿದ್ದೀವಲ್ಲ' ಎಂದು ಮತ್ತೆ ಮಾತು ಮನೆಯತ್ತ ಮುಖ ಮಾಡಿತು. ಇಬ್ಬರ ಮಕ್ಕಳ ಪೈಕಿ ಮನೋರಂಜನ್ ನನ್ ಹಾಗೆ. ನೋಡಕ್ಕೆ ಚೆನ್ನಾಗಿದ್ದಾನೆ, ಸ್ಮಾರ್ಟ್, ಒಳ್ಳೆಯ ಹೀರೋ ಆಗ್ತಾನೆ, ತುಂಬಾ ಸಾಫ್ಟ್. ಮತ್ತೊಬ್ಬ ವಿಕ್ರಮ್. ನೋಡೋದಿಕ್ಕೆ ಕರಿಯಾ, ಹಾರ್ಡ್‌ವೇರ್ ಇದ್ದಂಗೆ. ಬಿಸಿ ರಕ್ತ. ಯಾರಿಗೆ ಯಾವಾಗ ಹೊಡಿತಾನೋ ಗೊತ್ತಿಲ್ಲ. ಇನ್ನು ಮಗಳು ಗೀತಾಂಜಲಿ ಬಿಎಸ್ಸಿ ಹೋಮ್ ಸೈನ್ಸ್ ಮುಗಿಸಿದ್ದಾಳೆ. ಮುಂದಿನ ವರ್ಷ ಅವಳಿಗೆ ಮದುವೆ. ದೊಡ್ಡವನು ಹೀರೋ ಆಗ್ತಾ ಇದ್ದಾನೆ. ಚಿಕ್ಕವನು ಓದ್ತಾ ಇದ್ದಾನೆ. ಮಕ್ಕಳ ಜೊತೆ ನಾನ್ಯಾಕೆ ಸ್ಪರ್ಧೆ ಮಾಡಲಿ? ಹೀಗಾಗಿ 'ಮಂಜಿನ ಹನಿ' ಮುಗಿದರೆ ಮಕ್ಕಳಿಗಾಗಿ ದುಡಿಯುತ್ತೇನೆ. ಅವರ ಸಿನಿಮಾಗಳಲ್ಲಿ ಅಪ್ಪನಾಗಿ ಕಾಣಿಸಿಕೊಳ್ಳಬಹುದು. ನಾನು ಹುಟ್ಟಿದ್ದಕ್ಕೆ ಸಂಭ್ರಮ ಪಡುವವನಲ್ಲ, ಏನಾದರೂ ಸಾಧಿಸಿದ್ದಕ್ಕೆ ಖುಷಿ ಪಡುತ್ತೇನೆ. ಸಿನಿಮಾ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಸಿನಿಮಾನೇ ನನ್ನ ಬದುಕು, ಸಿನಿಮಾನೇ ನನ್ನ ಕನಸು...
ಹೀಗೆ ರವಿಚಂದ್ರನ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಸುದೀರ್ಘವಾಗಿ ಮಾತಿಗೆ ಸಿಕ್ಕಿ ಹರಟಿದರು. ಮಾತಿನ ನಡುವೆ ಈಗಿನ ರನ್ನಿಂಗ್ ಸ್ಟಾರ್‌ಗಳು (ಪುನೀತ್, ಸುದೀಪ್, ದರ್ಶನ್) ಚಿತ್ರರಂಗವನ್ನು ಬೆಳೆಸಲಿ ಎನ್ನುವ ಸಲಹೆ ಬಂತು. ಕ್ರೇಜಿಸ್ಟಾರ್ ಸಲಹೆಯನ್ನು ಈ ಸ್ಟಾರ್‌ಗಳು ಗಮನಿಸುತ್ತಾರೆಯೇ?
- ಆರ್. ಕೇಶವಮೂರ್ತಿ