ಸಿನಿಮಾ ಲೇಖನ

ಮಂಜುಳನಾಗ ಜೋಡಿ ಜೀವಗಳು

'ಅಂತಿಂಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ' ಎಂದು 'ಸಂಪತ್ತಿಗೆ ಸವಾಲ್‌'ನ ದುರ್ಗಿಯಾಗಿ ಮೆರೆದು, ಮರೆಯಾದ ನಟಿ ಮಂಜುಳ. 'ಮಿಂಚಿನ ಓಟ'ದಿಂದ ಕನ್ನಡ ಚಿತ್ರರಂಗದಲ್ಲಿ ಇದ್ದ 12 ವರ್ಷಗಳಲ್ಲೇ ವಿಜೃಂಭಿಸಿ 'ಆ್ಯಕ್ಸಿಡೆಂಟ್‌'ನಂಥ ದುರಂತಕ್ಕೆ ಬಲಿಯಾದವರು ಶಂಕರ್‌ನಾಗ್. ಈ ಇಬ್ಬರು ಕಲಾವಿದರನ್ನೂ ನಾಲ್ಕು ವರ್ಷಗಳ ಅಂತರದಲ್ಲಿ ಸೆಪ್ಟೆಂಬರ್‌ನಲ್ಲೇ ಕಳೆದುಕೊಂಡೆವು.
ಸೆ.12ಕ್ಕೆ (1986) ಮಂಜುಳ ಉಸಿರು ನೀಗಿದರೆ, ಸೆ.30ಕ್ಕೆ (1990) ಶಂಕರ್ ಕಣ್ಮರೆಯಾದರು.
ಶಂಕರ್‌ನಾಗ್ ಮಂಜುಳ ಹುಟ್ಟಿದ ದಿನವೂ ಸಹಿತ ಇಸವಿಯೂ ಸೇರಿ ಒಂದೇ ಆಗಿರುವುದು ವಿಚಿತ್ರ, ಆದರೆ  ಸತ್ಯ. ಮಂಜುಳ ನವೆಂಬರ್ 9, 1954 ಹುಟ್ಟಿದಂತೆ ಶಂಕರ್‌ನಾಗ್ ಜನಿಸಿದ್ದೂ ನವೆಂಬರ್ 9, 1954ರಂದೇ ಮಂಜುಳ ಶಂಕರ್‌ನಾಗ್ ಇಬ್ಬರದ್ದೂ ದುರಂತ ಸಾವೇ ಆಗಿದೆ. ಜೊತೆಗೆ 30-35ರ ವಯೋವಾನದಲ್ಲೇ ಇಬ್ಬರೂ ಇನ್ನಿಲ್ಲವಾಗಿದ್ದು, ಮತ್ತೊಂದು ದುರಂತ. 32 ವರ್ಷಕ್ಕೆ ಮಂಜುಳ ಮುಕ್ತಾಯವಾದಂತೆ ಶಂಕರ್ 35ಕ್ಕೆ ಕಥೆಯಾಗಿಬಿಟ್ಟಿದ್ದರು.
ಮಂಜುಳ 1972ರಲ್ಲಿ 'ಯಾರ ಸಾಕ್ಷಿ' ಚಿತ್ರದಿಂದ ತೆರೆಗೆ ಬಂದರೂ 12ರ ವಯಸ್ಸಿಗೆ 'ಮನೆ ಕಟ್ಟಿನೋಡು' ಎಂಬ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ಪ್ರಭಾತ್ ಸಂಸ್ಥೆಯಿಂದ ಬಂದ ಮಂಜುಳ ಒಳ್ಳೆಯ ನೃತ್ಯಗಾತಿ. 1967ರಲ್ಲಿ 'ಪದವೀಧರ' ಚಿತ್ರಕ್ಕೆ ತೆಲುಗಿನ ವಾಣಿಶ್ರೀ ಹಾಡೊಂದಕ್ಕೆ ನರ್ತಿಸಬೇಕಿತ್ತು. ಆದರೆ ಬಾಲಕಿ ಮಂಜುಳ ನರ್ತಿಸಿದ್ದು, ಕಂಡು ಮಂಜುಳಗೆ ಮುತ್ತು ನೀಡಿ ಅವಳೇ ಈ ನೃತ್ಯ ಮಾಡಲೆಂದು ಹೇಳಿ ಅಭಿನಂದಿಸಿದ್ದರು ವಾಣಿಶ್ರೀ.
ಡಾ. ರಾಜ್ ಜೊತೆಗೆ 'ಮೂರುವರೆ ವಜ್ರಗಳು' ಮೊದಲು ನಟಿಸಿದ ಚಿತ್ರ. ಆದರೆ 'ಭಕ್ತಕುಂಬಾರ' ಚಿತ್ರದ ಕುಂಬಾರನ ಎರಡನೇ ಪತ್ನಿಯ ಪಾತ್ರ ಮತ್ತು ಸಂಪತ್ತಿಗೆ ಸವಾಲ್‌ನ ದುರ್ಗಿಯ ಪಾತ್ರ ಮಂಜುಳ ಎಂಬ 20 ವರ್ಷದ ತರುಣಿಯನ್ನು ರಾತ್ರೋರಾತ್ರಿ ಸ್ಟಾರ್ ಮಾಡಿಬಿಟ್ಟಿತ್ತು. ಮುಂದೆ ಶ್ರೀನಾಥ್-ಮಂಜುಳ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ ಎನ್ನಿಸಿಕೊಂಡಿತ್ತು. ವಿಷ್ಣುವರ್ಧನ್, ಅಂಬರೀಶ್, ಅನಂತ್‌ನಾಗ್, ಲೋಕೇಶ್ ಹೀಗೆ ಆ ಕಾಲದ ಎಲ್ಲ ನಾಯಕರೊಂದಿಗೂ ನಟಿಸಿದ ಮಂಜುಳ 'ಎರಡು ಕನಸು' ಚಿತ್ರದ ತೆಲುಗು ಅವತರಣಿಕೆ 'ಪೂಜಾ' ಚಿತ್ರದಲ್ಲೂ ಅಭಿನಯಿಸಿ ತಾವೇ ಧ್ವನಿಯನ್ನೂ ನೀಡಿದ್ದರು.
ಶಂಕರ್‌ನಾಗ್ ಜೊತೆಗೂ 'ರುಸ್ತುಂಜೋಡಿ', 'ಸೀತಾ-ರಾಮು', 'ಪ್ರೀತಿ ಮಾಡು ತಮಾಷೆ ನೋಡು' 'ಮೂಗನ ಸೇಡು'ಗಳಂತಹ ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಮಂಜುಳಾಗೆ ಪುಟ್ಟಣ್ಣ ಕಣಗಾಲ್ ಚಿತ್ರದಲ್ಲಿ ನಟಿಸುವ ತುಡಿತವಿತ್ತು. ನಾಟ್ಯರಾಣಿ ಶಾಂತಲಾ ಎಂಬ ಚಿತ್ರ ತೆಗೆಯಲು ಪುಟ್ಟಣ್ಣನವರು ಯೋಚಿಸಿ ಅದರಲ್ಲಿ ಮಂಜುಳಾರನ್ನೇ ನಾಯಕಿಯಾಗಿಸಲು ಹೊರಟಿದ್ದರು. ಆದರೆ ಪುಟ್ಟಣ್ಣ 1985ರಲ್ಲಿ ನಿಧನರಾಗಿದ್ದರೆ ಬೆಂಕಿ ತಗುಲಿಸಿಕೊಂಡ ಮಂಜುಳ ಸೆಪ್ಟೆಂಬರ್ 5ಕ್ಕೆ ಆಸ್ಪತ್ರೆ ಸೇರಿ ಸೆಪ್ಟೆಂಬರ್ 12ಕ್ಕೆ ಶಾಶ್ವತವಾಗಿ ಕಣ್ಮುಚ್ಚಿಬಿಟ್ಟರು. ಅಲ್ಲಿಗೆ ಕನ್ನಡ  ಚಿತ್ರರಂಗದ ಮುಖ್ಯ ಅಧ್ಯಾಯವೊಂದು ಕಣ್ಮುಚ್ಚಿದಂತೆ ಆಯಿತು.
ಶಂಕರ್‌ನಾಗ್ ಎಂಬ ಪಾದರಸ ಮೊದಲು ನಿರ್ದೇಶನಕ್ಕಾಗಿ ಹಂಬಲಿಸಿದ್ದವರು. ಅಣ್ಣ ಅನಂತನಾಗ್‌ರ ಒತ್ತಾಯಕ್ಕೆ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸಿದ ನಾಗರಕಟ್ಟೆ ಶಂಕರ ಮೊದಲ ಚಿತ್ರದ ನಟನೆಗೇ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಬಿಟ್ಟರು. 26 ವರ್ಷಕ್ಕೆ 'ಮಿಂಚಿನ ಓಟ', 'ಗೀತಾ' 'ಜನ್ಮಜನ್ಮದ ಅನುಬಂಧ' ಶಂಕರ್‌ನಿರ್ದೇಶನದಲ್ಲಿ ಹದಗೊಂಡಿದ್ದವು. 'ಮಿಂಚಿನ ಓಟ' ಆರು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದು ಒಂದು ವಿಶೇಷವಾದರೆ, "ಬೆಳ್ಳಿ ಮೋಡ ಹತ್ತುತ್ತಾ ಬಡತನ ನೀಗುತ್ತಾ" ಎಂದು ಈ ಚಿತ್ರದ ಹಾಡನ್ನು ಶಂಕರ್‌ನಾಗ್- ಅನಂತ್‌ನಾಗ್ ಅವರೇ ಹಾಡಿರುವುದು ಮತ್ತೊಂದು ವೈಶಿಷ್ಟ್ಯ.
ನಂದಿಬೆಟ್ಟಕ್ಕೆ ಹಗ್ಗದ ದಾರಿ, ಸಂಕೇತ ಸ್ಟುಡಿಯೊ, ಕಂಟ್ರಿಕ್ಲಬ್ ಹೀಗೆಲ್ಲ ಕನಸು ಹರಡಿಕೊಂಡಿದ್ದ ಶಂಕರ್‌ನಾಗ್ ಅವರ ವ್ಯಕ್ತಿತ್ವ ನಮ್ಮ ಇಂದಿನ ಕಾಲಕ್ಕಿಂತ ಬಹಳ ಮುಂದೆ ಸಾಗಿತ್ತು. ನಾವಿಂದು ಕಣ್ಣು ಬಿಟ್ಟಿರುವ ಮೆಟ್ರೊ ರೈಲಿನ ಬಗ್ಗೆ ಶಂಕರ್‌ನಾಗ್ 1988-89ರಲ್ಲೇ ಯೋಚಿಸಿ ಜಪಾನ್ ಸರ್ಕಾರದೊಂದಿಗೆ ಚರ್ಚೆಗೂ ಮುಂದಾಗಿದ್ದ ಸಾಹಸಿ. ಶಂಕರ್‌ನಾಗ್ 'ಜೂನ್, 1897' ಎಂಬ ಮರಾಠಿ ಚಿತ್ರಕ್ಕೂ ಸಂಕೇತ್ ಪಟವರ್ಧನ್ ಎಂಬುವರ ಜೊತೆಗೆ ಚಿತ್ರಕಥೆ ರಚಿಸಿದ್ದಾರೆ. 'ನೋಡಿ ಸ್ವಾಮಿ ನಾವಿರೋದೆ ಹೀಗೆ', 'ಆಕ್ಸಿಡೆಂಟ್‌' ಚಿತ್ರಗಳಲ್ಲಿ ವಿಭಿನ್ನತೆ  ತೋರಿಸಿದ ಶಂಕರ್‌ನಾಗ್ ಅಗಾಧ ಪ್ರತಿಭಾಶಾಲಿ.
ಸ್ಟಾರ್ ನಟನೆಂಬ ಹಮ್ಮಿಲ್ಲದೆ, ಎಷ್ಟೋ ಸಲ ಅಟೋಗಳಲ್ಲಿ ಶೂಟಿಂಗ್‌ಗೆ ಬರುವುದು, ತಾವು ಕುಡಿದ ಕಾಫಿ ಲೋಟವನ್ನು ತಾವೇ ತೊಳೆದಿಡುತ್ತಿದ್ದ ಶಂಕರ್‌ನಾಗ್ ಸರಳತೆ ಮೆಚ್ಚಿಯೇ ಇಳಯರಾಜ 'ಗೀತಾ', 'ಜನ್ಮಜನ್ಮದ ಅನುಬಂಧ' ಚಿತ್ರಗಳಿಗೆ ಸಂಗೀತ ನೀಡಲು ಮುಂದೆ ಬಂದರು. ನಮ್ಮ ಶಂಕರ್‌ನಾಗ್ ಎಂಬ ಅಭಿಮಾನದಿಂದಲೇ ವಿಜಯ ಭಾಸ್ಕರ್ ಎಷ್ಟೋ ಸಲ ಸಂಕೇತ್ ಸ್ಟುಡಿಯೋಕ್ಕೆ ಬಂದು ರೆಕಾರ್ಡಿಂಗ್ ಮುಗಿಸಿ ಹೋಗುತ್ತಿದ್ದರು.
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಚಿತ್ರ ನಟರಾಗಿದ್ದಾಗಲೇ ಯಾವುದೇ ಮುಜುಗರ ಮುಲಾಜು ಇಲ್ಲದೆ ದೂರದರ್ಶನಕ್ಕೆ ಧುಮುಕಿದರು. 'ಮಾಲ್ಗುಡಿ ಡೇಸ್‌' ಎಂಬ ಆರ್.ಕೆ. ನಾರಾಯಣ್‌ರ ಕೃತಿ ಮನೆಮನೆಗಳಿಗೂ ತಲುಪಿದ್ದೇ ಶಂಕರ್‌ನಾಗ್ ದಕ್ಷ ನಿರ್ದೇಶನದಿಂದ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಮಾ. ಮಂಜುನಾಥ್‌ಸೇರಿದಂತೆ ಶಂಕರ್‌ನಾಗ್ ಅನೇಕ ಕಲಾವಿದರಿಗೆ ಅನನ್ಯ ರೂಪ ಕೊಟ್ಟಿದ್ದರು.
ಶಂಕರ್‌ನಾಗ್ ಸರಳ ಗುಣಕ್ಕೆ ಒಂದು ತುಣುಕನ್ನು ಅವರಿಂದಲೇ ವ್ಯಕ್ತವಾಗಿರುವ ಮಾತುಗಳಿಂದ ತಿಳಿಯಬಹುದು. "ಸೀತಾ-ರಾಮು ನನ್ನ ಎರಡನೇ ಚಿತ್ರ, ಈ ಚಿತ್ರದ 'ಈ ರೂಪವೇ' ಹಾಡಿನ ಚಿತ್ರೀಕರಣದಲ್ಲಿ ನನಗೆ ನಟನೆ ಸರಿಯಾಗಿ ಬರ್ತಿರ್ಲಿಲ್ಲ. ನಾಯಕಿ ಮಂಜುಳ ಆಗಲೇ ಹಿರಿಯ ಅನುಭವಿ ನಟಿಯಾಗಿದ್ದವರು. ನನ್ನ ಹತ್ರ ಬಂದು "ಹಾಗಲ್ಲ ಶಂಕರ್, ಹೀಗೆ' ಎಂದು ಧೈರ್ಯ ತುಂಬಿದರು. ಆಮೇಲೆ ಒಂದೇ ಟೇಕ್‌ಗೆ ಹಾಡೂ ಓಕೆಯಾಯಿತು. ಮಂಜುಳ ಒಬ್ಬ ಅದ್ಭುತ ಕಲಾವಿದೆ ಎಂದು ಸ್ಮರಿಸಿದ್ದಾರೆ ಶಂಕರ್. ಇದು ಮಂಜುಳ ಅವರ ನಿರಹಂಕಾರಕ್ಕೂ ಶಂಕರ್ ಅವರ ಕೃತಜ್ಞತೆಗೂ ಸಾಕ್ಷಿಯಾಗಿದೆ. ದುರದೃಷ್ಟವಶಾತ್ ಹುಟ್ಟಿದ ದಿನ ಇಸ್ವಿಯ ಸಹಿತ ಒಂದೇ ಆಗಿ ನಾಲ್ಕು ವರ್ಷದ ಅಂತರದಲ್ಲಿ ಸೆಪ್ಟೆಂಬರ್‌ನಲ್ಲೇ ತೀರಿಕೊಂಡ ಕನ್ನಡ ಚಿತ್ರಜಗತ್ತಿನ ಇಬ್ಬರು ಧ್ರುವತಾರೆಗಳ ನೆನಪಿನ ಶ್ರದ್ಧಾಂಜಲಿ ಪ್ರತಿವರ್ಷದ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಎಂದಿಗಿಂತ ಹೆಚ್ಚಾಗಿ ಕಾಡುತ್ತದೆ.

- ಡಿ.ಎಸ್. ಶ್ರೀನಿವಾಸ ಪ್ರಸಾದ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ