'ವಿಕ್ಟರಿ' ಮೂಲಕ ಮೊನ್ನೆ ಮೊನ್ನೆ ಭರ್ಜರಿ ಸಕ್ಸಸ್ ಕಂಡ ಆನಂದ್ ಆಡಿಯೋದ ಮೋಹನ್, ಈಗ ಸಿನಿಮಾ ಹಿಟ್ ಆಗಬೇಕೆಂದರೆ ಚಿತ್ರದಲ್ಲಿ ದೊಡ್ಡ ಸ್ಟಾರ್‌ಗಳೇ ಇರಬೇಕು ಎಂಬ ಪಾಲಿಸಿಗೆ ಸರ್ಜರಿ ಮಾಡಿ 'ನಾಯಕ' ಚಿತ್ರದ ನಿರ್ದೇಶಕ ಶೇಖರ್ ಅವರ ಸಾರಥ್ಯದಲ್ಲಿ ರಂಗಾಯಣ ರಘು, ಸಾಧು ಕೋಕಿಲಾ ಅವರ ನಾಯಕತ್ವದಲ್ಲಿ 'ಚಡ್ಡಿದೋಸ್ತ್' ಎಂಬ ಕಾಮಿಡಿ ಕಿಕ್ ನೀಡಲು ರೆಡಿಯಾಗಿದ್ದಾರೆ.
ಚಡ್ಡಿದೋಸ್ತ್ ಚಿತ್ರ ಇದೇ ತಿಂಗಳ 29ರಂದು ಬಿಡುಗಡೆಯಾಗುತ್ತಿದೆ. ಅಂದಿನ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಚಿತ್ರದ ಪ್ರಮುಖ ಶಕ್ತಿ ಎಂದರೆ ಸಂಭಾಷಣೆ ಎನ್ನುವುದನ್ನು ಹೇಳಿಕೊಳ್ಳುವಂತೆ ಚಿನಕುರಳಿ ಡೈಲಾಗ್‌ಗಳಿರುವ ಟ್ರೈಲರ್‌ಗಳ ಪ್ರದರ್ಶನ ಮಾಡಲಾಯಿತು. ಅದಾದ ನಂತರ ಮಾತನಾಡಿದ ರಂಗಾಯಣ ರಘು, ನಾವು ಯಾವಾಗಲೂ ಬೇರೆ ಸ್ಟಾರ್‌ಗಳ ಜೊತೆಗೆ ಒಗ್ಗರಣೆಯಂತೆ ಕೆಲಸ ಮಾಡುತ್ತೇವೆ. ಆದರೆ ಇನ್ನು ಮುಂದೆ ಗ್ಯಾಪ್‌ನಲ್ಲಿ ಇಂಥ ಚಿತ್ರಗಳನ್ನೂ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಆದರೆ ನಮ್ಮ ಮೂಲ ಕಸುಬನ್ನು ಎಂದಿಗೂ ಬಿಡುವುದಿಲ್ಲ ಎಂದರು.
ರಂಗಾಯಣ ರಘು, ಸಾಧು ಕೋಕಿಲಾ ಇಬ್ಬರೂ ಹೇಳಿಕೇಳಿ ಪ್ರೇಕ್ಷಕ ಸ್ನೇಹಿ ಕಲಾವಿದರು. ತೆರೆಯ ಮೇಲೆ ಚಿತ್ರದ ಹೀರೋಗಳು ಬಂದರೆ ಎಷ್ಟು ಸಿಳ್ಳೆ ಬೀಳುತ್ತವೆಯೋ ಅಷ್ಟೇ ಸಿಳ್ಳೆ ಇವರಿಬ್ಬರಿಗೂ ಬೀಳುವುದನ್ನು ನಾವು ಕಂಡಿದ್ದೇವೆ. ಹಾಗಾಗಿ ಇಂಥ ಇಬ್ಬರು ಸಿಳ್ಳೆ'ಖ್ಯಾತ'ರನ್ನು ಹಾಕಿಕೊಂಡು ಧೈರ್ಯದಿಂದ ಸಿನಿಮಾ ಮಾಡಿದ್ದಾರೆ ಮೋಹನ್. ಈ ಇಬ್ಬರ ಜೋಡಿ ಸಾರ್ಥಕವಾಗುವಂಥ ಸಂಭಾಷಣೆ ಬರೆದಿರುವ ಹೊಸ ಪ್ರತಿಭೆ ನಟರಾಜ್. ಈ ಮುಂಚೆ ಶೇಖರ್ ಅಭಿನಯದ 'ರೋಮಿಯೋ' ಚಿತ್ರಕ್ಕೂ ಸಂಭಾಷಣೆ ಬರೆದಿದ್ದ ನಟರಾಜ್ ಇಲ್ಲಿ ಕಾಮಿಡಿ ಫುಲ್‌ಮೀಲ್ಸ್ ಬಡಿಸಿದ್ದಾರೆ ಎನ್ನುವುದು ಚಿತ್ರದ ಒಂದೆಷ್ಟು ಸಂಭಾಷಣೆಗಳನ್ನು ಕೇಳಿದವರ ಅನಿಸಿಕೆ.
ಇದರ ಜೊತೆಗೆ ವಿಕ್ಟರಿಯ ವಿಕ್ಟರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರ್ಜುನ್ ಜನ್ಯ ಅವರ ಹಾಡುಗಳು ಈ ಚಿತ್ರಕ್ಕಿವೆ. ಅದರಲ್ಲಿ ಒಂದೆರಡು ಹಾಡುಗಳೂ ಈಗಾಗಲೇ ಹಿಟ್ ಆಗಿವೆ. ಚಿತ್ರ ಬಿಡುಗಡೆಯಾದ ಮೇಲೆ ಇನ್ನೆರಡು ಹಾಡುಗಳು ಹಿಟ್ ಆಗುತ್ತವೆ ಎಂಬುದು ಮೋಹನ್ ಅವರ ಅನಿಸಿಕೆ. ಸಾಧು, ರಂಗಾಯಣ ರಘು ಅವರ ಜೊತೆಗೆ ನಾಯಕಿಯರಾಗಿ ಅಶ್ವಿನಿ ಮತ್ತು ರೂಪಶ್ರೀ ಇದ್ದಾರೆ. ಕಿರುತೆರೆಯತ್ತ ಮುಖ ಮಾಡಿದ್ದ ನನಗೆ ಇದು ರೀ ಬರ್ತ್ ಇದ್ದಂತೆ ಎನ್ನುವ ಅಶ್ವಿನಿ, 'ಚಡ್ಡಿದೋಸ್ತ್' ಚಿತ್ರದ ಶೀರ್ಷಿಕೆಯನ್ನು ಸಮರ್ಥಿಸಿಕೊಳ್ಳುವಂಥ ಧಿರಿಸಿನಲ್ಲಿ ಬಂದಿದ್ದ ರೂಪಶ್ರೀ, ಈ ಇಬ್ಬರೂ ಚಿತ್ರದ ಗ್ಲಾಮರ್ ವಿಭಾಗದ ಆಕರ್ಷಣೆ.
ಹಾಗಾಗಿ ಚಿತ್ರದ ಎಲ್ಲ ವಿಭಾಗಗಳಲ್ಲೂ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ದೊರೆತಿರುವುದರಿಂದ ನಿರ್ಮಾಪಕ ಮೋಹನ್ ನೆಮ್ಮದಿಯಾಗಿ ಸಿನಿಮಾ ಬಿಡುಗಡೆಯಲ್ಲಿ ತೊಡಗಿಕೊಂಡಿದ್ದಾರೆ.
- ಹರಿ