ನಿರ್ದೇಶಕಿ ಕವಿತಾ ಲಂಕೇಶ್ ಮತ್ತೆ ಬಂದಿದ್ದಾರೆ. 'ಕ್ರೇಜಿ ಲೋಕ' ಚಿತ್ರದ ನಂತರ ನಿರ್ದೇಶನದ ಟೋಪಿ ಹಾಕಲು ಹೊರಟಿರುವ ಅವರಿಗೆ ಈ ಬಾರಿ ಸ್ಟಾರ್‌ಗಳು ಜೊತೆಯಾಗಿಲ್ಲ. ಆದರೂ ಈ ಚಿತ್ರದಲ್ಲಿ ಸ್ಟಾರ್ ನಟರು ಎನಿಸಿಕೊಂಡವರು ಯಾರಾದರೂ ಅಭಿನಯಿಸಿದರೆ ಬೋನಸ್ ಎಂದುಕೊಳ್ಳುತ್ತೇನೆ ಎನ್ನುವ ಕವಿತಾ ಅವರ ಹೊಸ ಚಿತ್ರದ ಹೆಸರು 'ಕರಿಯ ಕಣ್ ಬಿಟ್ಟ'. ಬರಹಗಾರ ಸುಬ್ಬು ಹೊಲೆಯಾರ್ ಅವರು ಬರೆದ ಈ ಕಥೆಗೆ ಸಾಹಿತಿ ಬಿ. ಚಂದ್ರೇಗೌಡ ಸಂಭಾಷಣೆ ಬರೆಯುತ್ತಿದ್ದಾರೆ. ಆಡಿಟರ್ ಶ್ರೀನಿವಾಸ್ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 'ಬೇಟೆ' ಚಿತ್ರದ ನಂತರ ಶ್ರೀನಿವಾಸ್ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಹೆಸರು ಮತ್ತು ಕಥೆ ಕೇಳಿದಾಗ 'ಇದೊಂದು ಮಕ್ಕಳ ಚಿತ್ರವೇ?' ಎನ್ನುವ ಪ್ರಶ್ನೆ ಎದುರಾದರೂ ನಿರ್ದೇಶಕಿ ಮಾತ್ರ ತಮ್ಮ ಚಿತ್ರವನ್ನು ಯಾವುದೇ ವರ್ಗಕ್ಕೆ ಸೇರಿಸಲ್ಲ. ಮೊದಲಿನಿಂದಲೂ ಅಷ್ಟೇ. ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಯೋಚನೆಯಲ್ಲಿ ನಿರ್ದೇಶನ ಮಾಡುತ್ತಾರೆ ಹೊರತು, ಕಮರ್ಷಿಲ್, ಆರ್ಟ್, ಮಾಸ್ ಎಂದು ವಿಭಾಗ ಮಾಡಲ್ಲ. ಕವಿತಾ ಕಂಡಂತೆ ತೆರೆ ಮೇಲೆ ಕಥೆ ಕಟ್ಟುತ್ತಾರಂತೆ. ಹೀಗಾಗಿ 'ಕರಿಯ ಕಣ್ ಬಿಟ್ಟ' ಚಿತ್ರ ಮಕ್ಕಳ ಚಿತ್ರವಾದರೂ ಸರ್ಕಾರ ಕೊಡುವ ಸೌಲಭ್ಯಗಳಿಗಾಗಿ ಚಿತ್ರ ಮಾಡುತ್ತಿಲ್ಲವಂತೆ. 'ಇಲ್ಲಿ ಸ್ಟಾರ್ ಕಾಸ್ಟ್‌ಗಿಂತ ಆ್ಯಕ್ಟರ್ ಕಾಸ್ಟ್ ಇದ್ದಾರೆ. ಶ್ರೀನಿವಾಸ್ ಅವರು ಒಳ್ಳೆಯ ಚಿತ್ರ ಮಾಡೋಣ ಎಂದರು. ಎಂದೋ ಬರೆದ ಚಿತ್ರಕಥೆ ಈಗ ಜೀವ ಪಡೆದುಕೊಳ್ಳುತ್ತಿದೆ. ಸುಬ್ಬು ಹೊಲೆಯಾರ್ ಅವರು 12 ವರ್ಷ ಹುಡುಗನಾಗಿದ್ದಾಗ ನಡೆದ ಕಥೆ ಇದು. ತುಂಬಾ ಚೆನ್ನಾಗಿದೆ. ಈಗಲೂ ಪ್ರಸ್ತುತ ಎನಿಸುತ್ತದೆ' ಎಂದರು ಕವಿತಾ ಲಂಕೇಶ್. ಅಂದಹಾಗೆ ಕರಿಯನ ಪಾತ್ರದಲ್ಲಿ ಪ್ರದ್ದುಮ್ನ ಎನ್ನುವ ಹುಡುಗ ಕಾಣಿಸಿಕೊಳ್ಳುತ್ತಿದ್ದಾನೆ. ಅನಂತ್ ರಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ.
ನಟಿ ಶೃತಿ, ದುನಿಯಾ ವಿಜಯ್, ನಿವೇದಿತಾ ಅಭಿನಯದ 'ಅವ್ವ' ಚಿತ್ರದ ನಂತರ ಬಿ. ಚಂದ್ರೇಗೌಡ ಮತ್ತೊಮ್ಮೆ ಕವಿತಾ ಅವರೊಂದಿಗೆ ಚಿತ್ರಕ್ಕೆ ಸಂಭಾಷಣೆ ಬರೆಯಲು ಕೂತಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಮುಖ್ಯ ಗ್ರಂಥಪಾಲಕರಾಗಿರುವ ಚಂದ್ರೇಗೌಡ ಅವರು ನಗರಕ್ಕಿಂತ ಹಳ್ಳಿಗಾಡಿನ ಭಾಷೆಯನ್ನು ಹೆಚ್ಚು ನೆಚ್ಚಿಕೊಂಡವರು. ಅವರ 'ಕಟ್ಟೆ ಪುರಾಣ' ಅಂಕಣ ಓದದವರು ಕಡಿಮೆ. 'ನಾನು ಪಟ್ಟಣದ ಸಂಭಾಷಣೆ ಬರೆಯಲಾರೆ. ಒಂದು ಭಾಷೆ ಅನುಭವದಿಂದ ಬಾರದಿದ್ದರೆ ಅದು ಕೃತಕವಾಗುತ್ತದೆ. ಇನ್ನೂ ಕಾಡಿನಲ್ಲಿ ವಾಸಿಸುತ್ತಿರುವ ಜನಾಂಗ, ನಾಗರಿಕತೆಯ ಸೋಗಿನಲ್ಲಿ ನಗರದಲ್ಲಿರುವವರು, ವಿದೇಶದಲ್ಲಿ ನೆಲೆಸಿರುವವರು ಈ ಮೂರು ತಲೆಮಾರುಗಳನ್ನು ಒಳಗೊಂಡಿರುವ ಈ ವ್ಯವಸ್ಥೆಯಲ್ಲಿ ಈ ಚಿತ್ರದ ಕಥೆ ತುಂಬಾ ಪ್ರಸ್ತುತವಾಗಿ ಕಾಣುತ್ತದೆ. ಕನ್ನಡ ಚಿತ್ರರಂಗದ ಈ ಸಂದರ್ಭದಲ್ಲಿ ಒಂದು ವಿಶಿಷ್ಠ ಕಥೆ ಇದಾಗುತ್ತದೆ' ಎಂದರು ಬಿ. ಚಂದ್ರೇಗೌಡ. 'ಇದೇ ತಿಂಗಳು 17ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಕನಕಪುರದ ಕುರಿಮಂದಿ ದೊಡ್ಡಿಯಲ್ಲಿ ಚಿತ್ರೀಕರಣವಾಗಲಿದೆ' ಎಂದರು ಶ್ರೀನಿವಾಸ್. ಲಂಕೇಶ್ ಕಾಲದಲ್ಲಿ ಬೆಳೆದು ಬಂದ ಬರಹಗಾರರು ಸಾಕಷ್ಟು ಮಂದಿ. ಅವರ ಸಾಲಿನಲ್ಲಿ ನಿಲ್ಲುವ ಸುಬ್ಬು ಹೊಲೆಯಾರ್, ಕೇರಿಯ ಬದುಕನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 'ಬಾಲ್ಯ ದೊಡ್ಡದು. ಮತ್ತು ಅದು ಮುಗ್ಧ, ಸಂತೋಷದಿಂದ ಕೂಡಿರುತ್ತದೆ' ಎನ್ನುವ ಸುಬ್ಬು, ಅಂಥ ಬಾಲ್ಯದ ಕಥೆಯೊಂದನ್ನು ಇಲ್ಲಿ ಹೇಳಿದ್ದಾರಂತೆ.
- ಕೇಶವ