ಮಹೇಶ್ರಾವ್ ನಿರ್ದೇಶನದ ಕೇಸ್ ನಂಬರ್ 18/9 ಚಿತ್ರಕ್ಕೆ ಮತ್ತೆ ಈಗ ಬಿಡುಗಡೆಯ ಸಮಯ. ಇತ್ತೀಚೆಗೆ ತೆರೆಕಂಡು ಎಲ್ಲರಿಂದಲೂ ಪ್ರಶಂಸೆ ಗಳಿಸಿದರೂ ಪರಭಾಷೆಯ ದೊಡ್ಡ ಚಿತ್ರಗಳ ಹಾವಳಿಯಿಂದಾಗಿ ಎಲ್ಲರನ್ನೂ ತಲುಪದೇ ಹೋದ ಈ ಚಿತ್ರಕ್ಕೆ ಈಗ ಮರುಜೀವ ಸಿಕ್ಕಿದೆ. ಚಿತ್ರವನ್ನು ನೋಡಿದ ಕಿಚ್ಚ ಸುದೀಪ್ ನಿಜಕ್ಕೂ ಇದೊಂದು ಅಪರೂಪದ ಚಿತ್ರ ಎಂದು ಹೊಗಳಿದ್ದಷ್ಟೇ ಅಲ್ಲದೆ ಈ ಚಿತ್ರವನ್ನು ಮರು ಬಿಡುಗಡೆ ಮಾಡುವ ಐಡಿಯಾ ಕೊಟ್ಟಿದ್ದರು. ಸುದೀಪ್ ಅಷ್ಟೇ ಅಲ್ಲದೆ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ವಿಜಯ್ ಕುಮಾರ್, ನಿರ್ಮಾಪಕ ಚಿನ್ನೇಗೌಡ, ಅವರನ್ನೊಳಗೊಂಡ ಚಿತ್ರರಂಗದ ಗಣ್ಯರು ಇಂಥ ಚಿತ್ರಗಳನ್ನು ಜನ ನೋಡುವಂತೆ ಮಾಡಬೇಕು ಎಂಬ ಒತ್ತಾಯ ಮಾಡಿದ್ದರಿಂದ ಈಗ ಕೇಸ್ ರೀ ಓಪನ್ ಆಗುವ ಕಾಲ ಬಂದಿದೆ. ಈ ರೀ ಓಪನಿಂಗ್ ಸೆರೆಮನಿ ರಾಜ್ಯಾದ್ಯಂತ ಸುಮಾರು 30ರಷ್ಟು ಚಿತ್ರಮಂದಿರಗಳಲ್ಲಿ ನೆರವೇರಲಿದೆ ಎಂಬುದು ವಿಶೇಷ. ಗಾಂಧಿನಗರದ ಭೂಮಿಕಾ ಚಿತ್ರಮಂದಿರ ಸೇರಿದಂತೆ ಮಲ್ಟಿಪ್ಲೆಕ್ಸ್ಗಳಲ್ಲೂ ಇಂದು ಕೇಸ್ ನಂಬರ್ 18/9 ಚಿತ್ರ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಉತ್ಸಾಹದಿಂದ ಮಾತನಾಡುವ ಚಿತ್ರದ ನಾಯಕ ನಿರಂಜನ್ ಈ ಚಿತ್ರದಿಂದ ನನ್ನ ಕೆರಿಯರ್ಗೆ ದೊಡ್ಡ ತಿರುವು ಸಿಕ್ಕಿದೆ. ಈಗಾಗಲೇ ನನಗೆ ಒಂದಷ್ಟು ಹೊಸ ಕನ್ನಡ ಚಿತ್ರ ಮತ್ತು ಒಂದು ತಮಿಳು ಚಿತ್ರದ ಅವಕಾಶ ಸಿಕ್ಕಿದೆ. ಇದೆಲ್ಲವೂ ನನಗೆ ಕೇಸ್ ನಂಬರ್ ಚಿತ್ರ ಕೊಟ್ಟ ಬಳುವಳಿ. ಈ ಚಿತ್ರ ಕನಿಷ್ಟ ಪಕ್ಷ 50 ದಿನ ಓಡುತ್ತೆ ಎಂಬ ನಂಬಿಕೆ ನನಗಿತ್ತು. ಆದರೆ ನಮ್ಮ ಕೈಯಲ್ಲಿಲ್ಲದ ಅನವಾರ್ಯ ಕಾರಣಗಳಿಂದಾಗಿ ಸಿನಿಮಾದ ಓಟಕ್ಕೆ ಪೆಟ್ಟು ಬಿದ್ದಿತ್ತು. ಈಗ ನನ್ನ ಈ ಚಿತ್ರ ಮರುಬಿಡುಗಡೆಯಾಗುತ್ತಿರುವುದು ನನಗೆ ಸಂತಸದ ವಿಷಯ ಎನ್ನುತ್ತಾರೆ. ಚಿತ್ರದಲ್ಲಿ ಅಭಿನಯಿಸಿರುವ ಕರಿಸುಬ್ಬು ನನಗೂ ನನ್ನ ಮಣಿ ಚಿತ್ರವನ್ನು ಮರುಬಿಡುಗಡೆ ಮಾಡುವ ಪ್ಲ್ಯಾನ್ ಇತ್ತು. ಆದರೆ ನನಗೆ ಧೈರ್ಯ ಬರಲಿಲ್ಲ. ಆದರೆ ಈ ಚಿತ್ರದ ನಿರ್ಮಾಪಕರು ಆ ಧೈರ್ಯ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.
ನಿರ್ಮಾಪಕರಾದ ಪ್ರವೀಣ್ ಶೆಟ್ಟಿ ಮತ್ತು ಕಾಂತಿ ಶೆಟ್ಟಿ ವಿಶೇಷ ಮುತುವರ್ಜಿ ವಹಿಸಿ ಸುಮಾರು 20 ಲಕ್ಷ ರುಪಾಯಿ ಖರ್ಚು ಮಾಡಿ ತಮ್ಮ ಕನಸಿನ ಕೂಸನ್ನು ಮತ್ತೆ ಕನ್ನಡ ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ. ಇನ್ನು ಈ ಚಿತ್ರವನ್ನು ಕನ್ನಡ ಪ್ರೇಕ್ಷಕ ಎರಡನೇ ಬಾರಿಯ ಬಿಡುಗಡೆಯಲ್ಲಿ ಹೇಗೆ ತೆಗೆದುಕೊಳ್ಳಲಿದ್ದಾನೆ ಎಂಬುದು ಕುತೂಹಲ.
- ಹರಿ