'ನಾನು ಗಂಡುಗಲಿ. ಯಾರಿಗೂ ಹೆದರಲ್ಲ, ಬೆದರಲ್ಲ, ಕುಗ್ಗಲ್ಲ, ಬಗ್ಗಲ್ಲ. ಜೈ ಕರ್ನಾಟಕ ಮಾತೆ ಸಿರಿಗನ್ನಡಂ ಗೆಲ್ಗೆ' ನಿರ್ಮಾಪಕ ಕೆ. ಮಂಜು ಹೀಗೊಂದು ಆವಾಜ್ ಬಿಟ್ಟು, ಜೊತೆ ಕನ್ನಡ ಮಾತೆಗೆ ಜೈಕಾರ ಹಾಕಿದರು. ಮಂಜು ಯಾವುದಾದರು ಚಿತ್ರದಲ್ಲಿ ಡಾನ್ ಪಾತ್ರವೇನಾದರು ಮಾಡುತ್ತಿದ್ದಾರೆಯೇ? ಅಂದುಕೊಳ್ಳಬೇಡಿ. ಇದು 'ರಾಜಾಹುಲಿ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ.
ಈ ಮಾತಿನ ವರಸೆಗೆ ಕಾರಣ 'ರಾಜಾಹುಲಿ' ಚಿತ್ರ ಬಿಡುಗಡೆಯಾಗದಂತೆ ತುಂಬಾ ಜನ ಯತ್ನಿಸಿದರಂತೆ. ಆದರೆ, ಮಂಜು ಗಾಂಧಿನಗರದ ಗಾಡ್ ಇದ್ದಂತೆ. ಅವರು ಒಂದು ಸಲ ಡಿಸೈಡ್ ಮಾಡಿದರೆ ಮುಗಿಯಿತು, ಯ್ರೇನೂ ಮಾಡಕ್ಕಾಗಲ್ಲ ಎನ್ನುವುದು ಮಂಜು ಅವರ ನಂಬಿಕೆ. ಹೀಗಾಗಿ 'ರಾಜಾಹುಲಿ' ಅವರು ಅಂದು ಕೊಂಡಂತೆ ನ.1ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಗುರುದೇಶ್ ಪಾಂಡೆ ನಿರ್ದೇಶನ, ಯಶ್ ನಾಯಕ, ಮೇಘನಾ ರಾಜ್ ನಾಯಕಿ, ಹಂಸಲೇಖ ಸಂಗೀತ ಇದೆ. ಇದು ತಮಿಳಿನ 'ಸುಂದರ್ ಪಾಂಡನ್' ಚಿತ್ರದ ರಿಮೇಕ್.
ಮತ್ತೆ ಮಂಜು ಮಾತು. 'ನಾನು ಇಲ್ಲಿ ನಿರ್ಮಾಪಕನಷ್ಟೇ. ಒಂದು ಒಳ್ಳೆಯ ಚಿತ್ರ ಮಾಡುತ್ತೇನೆ. ನನಗೆ ಅವಕಾಶ ಕೊಡಿ ಅಂದ್ರು ನಿರ್ದೇಶಕರು. ಓಕೆ ಅಂದೆ. ನಿಮಗೆ ಬೇಕಾದಂತೆ ಸಿನಿಮಾ ಮಾಡಿ ಅಂತ ಹೇಳಿದೆ. ಯಶ್ ದೊಡ್ಡ ಕಲಾವಿದ ಆಗುತ್ತಾನೆ ಅಂತ ತುಂಬಾ ಹಿಂದೆಯೇ ಹೇಳಿದ್ದೆ. ಅದರಂತೆ ಅವನು ಕಲಾವಿದ ಆಗಿದ್ದಾನೆ. ಯಶ್ ಮತ್ತು ಗುರುದೇಶ್ ಪಾಂಡೆ ಇಬ್ಬರು ಸೇರಿ ಒಂದು ಒಳ್ಳೆಯ ಚಿತ್ರ ಮಾಡಿದ್ದಾರೆ. ಇದರಿಂದ ನನಗೆ ಹಣ, ಹೆಸರು ಎರಡೂ ಬರುವುದು ಗ್ಯಾರಂಟಿ. ನನ್ನ ಸಾಲ ಈ ಚಿತ್ರದಿಂದ ಸುನಾಮಿಯಂತೆ ಹೊಡೆದುಕೊಂಡು ಹೋಗುತ್ತದೆ. ಜೀವನದಲ್ಲಿ ಸ್ನೇಹ ಅಂದರೆ ಏನು? ಅಂತ ನೋಡಬೇಕು ಅಂದರೆ ಈ ಚಿತ್ರ ನೋಡಿ. 130 ಚಿತ್ರಮಂದಿರಗಳಲ್ಲಿ 'ರಾಜಾಹುಲಿ' ತೆರೆಕಾಣುತ್ತಿದೆ. ಜಯಣ್ಣ ವಿತರಣೆ ಮಾಡುತ್ತಿದ್ದಾರೆ...' ಹೆಚ್ಚುಕಮ್ಮಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡುತ್ತಲೇ ಹೋದ ಕೆ. ಮಂಜು, 'ನಾನೇ ಹೆಚ್ಚು ಮಾತನಾಡಿದರೆ ನಮ್ಮ ತಂಡ ಬಯ್ದುಕೊಳ್ಳುತ್ತಾರೆ. ಇನ್ನು ಅವರು ಮಾತನಾಡಲಿ' ಎಂದು ಮೈಕ್ ಅನ್ನು ನಿರ್ದೇಶಕರ ಕೈಗೆ ಹಸ್ತಾಂತರಿಸಿದರು.
ಗುರುದೇಶ್ ಪಾಂಡೆ ಈ ಚಿತ್ರವನ್ನು ಜ.16ರಂದು ಶುರುಮಾಡಿದ್ದಂತೆ. 11 ತಿಂಗಳು ತೆಗೆದುಕೊಂಡು ಸಿನಿಮಾ ಮುಗಿಸಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೈಲರ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಿರ್ದೇಶಕರ ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿದೆಯಂತೆ. 'ಯಶ್ ಕಿರಾತಕ ಚಿತ್ರದ ನಂತರ ಗೆಲ್ಲುತ್ತಲೇ ಬಂದರು. ಹೀಗಾಗಿ ರಿಮೇಕ್ ಸಿನಿಮಾ ಆದರೂ ತುಂಬಾ ಒತ್ತಡ ಇತ್ತು. ಸಾಕಷ್ಟು ಸವಾಲುಗಳಿದ್ದವು. ಕೆಲವು ಅವರ ನೇಟಿವಿಟಿಗೆ ಬೇಕಾದಂತೆ ಮಾಡಿಕೊಂಡಿರುತ್ತಾರೆ. ಅದನ್ನು ಬದಲಿಸಿಕೊಳ್ಳಬೇಕೆಂದರೆ ತುಂಬಾ ಶ್ರಮ ಹಾಕಬೇಕು. ಅದನ್ನು ಇಲ್ಲಿ ತೋರಿಸಿದ್ದೇವೆ. ನಿರ್ಮಾಪಕರ ಸಹಕಾರ ಮತ್ತು ಅವರ ಕೊಟ್ಟ ಸ್ವಾತಂತ್ರ್ಯದಿಂದಲೇ ಚಿತ್ರವನ್ನು ಇಷ್ಟು ಚೆನ್ನಾಗಿ ಮಾಡಲು ಸಾಧ್ಯವಾಯಿತು' ಎಂದು ಗುರುದೇಶ್ ಪಾಂಡೆ. ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ಮಂಡ್ಯ ಜಿಲ್ಲೆಯ ಎರಡು ಹಳ್ಳಿಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಕಥೆ ಮಾಡಿಕೊಂಡಿದ್ದಾರೆ. 'ಡೈಲಾಗ್ಗಳಿಗೆ ಗೆಲುವು ಸಿಕ್ಕಿದೆ. ಯಶ್ ಕಾರಣಕ್ಕೆ ನಾವು ಗೆಲ್ಲುತ್ತೇವೆ. ಡಾ. ರಾಜ್ಕುಮಾರ್ ಹೇಳಿದ ಮೌಲ್ಯಗಳು ಈ ಚಿತ್ರದಲ್ಲಿವೆ. ಹೀಗಾಗಿ ಸಿನಿಮಾ ನೋಡಿ' ಎಂದಿದ್ದು ಮಂಜು ಮಾಂಡವ್ಯ.
ಚಿತ್ರತಂಡದವರ ಹೊಗಳಿಕೆಯಿಂದ ತುಂಬಾ ಖುಷಿಯಾಗಿದ್ದರು ಯಶ್. 'ನಿರ್ದೇಶಕರ ಹಠ, ಛಲದಿಂದ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಹುಲಿ ಅಲ್ಲ, ಮಂಜಣ್ಣನೇ ನಿಜವಾದ ಹುಲಿ. ಎಲ್ಲ ರಿಮೇಕ್ ಚಿತ್ರಗಳು ಯಶಸ್ಸು ಕಾಣುವುದಿಲ್ಲ. ಒಳ್ಳೆಯ ಕಥೆ ಬೇಕು. ಅದು 'ರಾಜಾಹುಲಿ' ಚಿತ್ರದಲ್ಲಿದೆ. ಮಂಜು ಒಳ್ಳೆಯ ಡೈಲಾಗ್ ಕೊಟ್ಟಿದ್ದಾರೆ' ಎಂದರು ಯಶ್. ವಹಿಷ್ಠ, ಗಿರಿ, ಹರ್ಷ ಇವರು ನಾಯಕನ ಸ್ನೇಹಿತರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
- ಕೇಶು